ದೇಶದ ಕೋಟ್ಯಂತರ ಜನರ ದೈನಂದಿನ ಸಂಚಾರದ ಜೀವನಾಡಿಯಾದ ಭಾರತೀಯ ರೈಲ್ವೆಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 2.52 ಲಕ್ಷ ಕೋಟಿ ರು. ಅನುದಾನ ಒದಗಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಭಾರತೀಯ ರೈಲ್ವೆಯ ಗುಣಮಟ್ಟ ಸುಧಾರಿಸುವ ಸತತ ಪ್ರಯತ್ನವನ್ನು ಸರ್ಕಾರ ಮುಂದುವರೆಸಿದೆ. ಇದರ ಭಾಗವಾಗಿ ಈ ಬಜೆಟ್‌ನಲ್ಲಿ ಇಲಾಖೆಗೆ 2.52 ಲಕ್ಷ ಕೋಟಿ ರು.ಅನುದಾನ ನೀಡಲಾಗಿದೆ ಇದರಲ್ಲಿ 17500 ಸಾಮಾನ್ಯ ಬೋಗಿಗಳ ಉತ್ಪಾದನೆ, 200 ವಂದೇ ಭಾರತ್ ರೈಲು ಮತ್ತು 100 ಅಮೃತ್ ರೈಲುಗಳ ಉತ್ಪಾದನೆಗೂ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಇದಲ್ಲದೆ ಮುಂದಿನ 4-5 ವರ್ಷಗಳಲ್ಲಿ ಕೈಗೊಳ್ಳುವ 4.6 ಲಕ್ಷ ಕೋಟಿ ರು.ಮೊತ್ತದ ಹೊಸ ಮಾರ್ಗ, ಡಬ್ಲಿಂಗ್, ಕ್ವಾಡ್ರಪ್ಲಿಂಗ್, ಹೊಸ ನಿರ್ಮಾಣ, ನಿಲ್ದಾಣ ನವೀಕರಣ, ಮೇಲುಸೇತುವೆ, ಅಂಡರ್‌ಪಾಸ್ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೂ ಅನುಮೋದನೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತೀಯ ರೈಲ್ವೆ ಶೀಘ್ರವೇ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಲಿದೆ. ಮಾ.31ರೊಳಗೆ 1.6 ಶತಕೋಟಿ ಟನ್ ಸರಕು ಸಾಗಣೆ ಗುರಿಯನ್ನು ನಾವು ಮುಟ್ಟಲಿದ್ದೇವೆ. ನಾವು ಚೀನಾ ಬಳಿಕ ವಿಶ್ವದಲ್ಲೇ 2ನೇ ಅತಿದೊಡ್ಡ ಸರಕು ಸಾಗಣೆ ರೈಲ್ವೆ ವ್ಯವಸ್ಥೆಯಾಗಿದ್ದೇವೆ. ಜೊತೆಗೆ ವರ್ಷಾಂತ್ಯದ ವೇಳೆಗೆ ಶೇ.100ರಷ್ಟು ರೈಲ್ವೆ ಮಾರ್ಗಗಳ ವಿದ್ಯುದೀಕರಣ ಗುರಿಯನ್ನು ಸಾಧಿಸಲಿದದೇವೆ ಎಂದು ತಿಳಿಸಿದ್ದಾರೆ.