ಬರ್ಧಮಾನ್: ‘ಹಿಂದೂ ಸಮಾಜ ಒಂದು ಜವಾಬ್ದಾರಿಯುತ ಸಮುದಾಯ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಸಮಾಜ ಅದು. ಹೀಗಾಗಿಯೇ ಈ ಸಮಾಜವನ್ನು ಸಂಘಟಿಸಲು ಆರೆಸ್ಸೆಸ್ ಬಯಸುತ್ತದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮೋಹನ ಭಾಗವತ್ ಹೇಳಿದರು.
‘ಭಾರತ ವರ್ಷ (ಭಾರತ ದೇಶ) ಎಂಬುದು ಕೇವಲ ಭೌಗೋಳಿಕ ಅಂಶವಲ್ಲ. ಅದು ಹಿಗ್ಗಬಹುದು ಅಥವಾ ಕುಗ್ಗಬಹುದು. ಅನೇಕ ದೇಶಗಳು ಇತರರೊಂದಿಗೆ ಬಾಳಲು ಸಾಧ್ಯವಿಲ್ಲ ಎಂದು ತಮ್ಮದೇ ಧರ್ಮಾಧರಿತ ದೇಶ ಸ್ಥಾಪಿಸಿಕೊಂಡಿವೆ. ಆದರೆ ಹಿಂದೂ ಸಮಾಜವು ವಿಶ್ದ ವೈವಿಧ್ಯತೆಯನ್ನೇ ಮೈಗೂಡಿಸಿಕೊಂಡಿದೆ. ನಾವು ‘ವಿವಿಧತೆಯಲ್ಲಿ ಏಕತೆ’ ಎನ್ನುತ್ತೇವೆ. ಆದರೆ ಹಿಂದೂ ಸಮಾಜ ‘ಏಕತೆಯಲ್ಲೇ ವೈವಿಧ್ಯವಿದೆ’ ಎಂದು ಹಿಂದೂ ಸಮಾಜ ಅರ್ಥ ಮಾಡಿಕೊಳ್ಳುತ್ತದೆ’ ಎಂದು ಬಣ್ಣಿಸಿದರು.
‘ಈ ಹಿಂದೆ ಅಲೆಕ್ಸಾಂಡರ್‌ನಂಥವರು ನಮ್ಮ ದೇಶದ ಮೇಲೆ ದಂಡೆತ್ತಿ ಬಂದಿದ್ದರು. ಇದರ ವಿರುದ್ಧದ ಹೋರಾಟಕ್ಕೆ ನಮ್ಮ ಆಂತರಿಕ ಸಂಘರ್ಷ ಮುಳುವಾಯಿತು. ಆದರೆ ದೇಶದ ಚಹರೆ ಬದಲಿಸಬೇಕು ಎಂದರೆ ಸಮಾಜದ ಪಾಲ್ಗೊಳ್ಳುವಿಕೆ ಮುಖ್ಯ ಆಗಿರುತ್ತದೆ’ ಎಂದು ಕರೆ ನೀಡಿದರು.‘ಭಾರತ ನಿರ್ಮಿಸಿದ್ದು ಬ್ರಿಟಿಷರು ಎಂಬುದು ತಪ್ಪು ಕಲ್ಪನೆ. ಶತ ಶತಮಾನಗಳಿಂದ ಭಾರತ ಅಸ್ತಿತ್ವದಲ್ಲಿದೆ. ಈ ದೇಶದಲ್ಲಿ ಇರುವವರೆಲ್ಲ ವೈವಿಧ್ಯತೆಯಲ್ಲಿ ಏಕತೆಯನ್ನು ನಂಬುತ್ತಾರೆ. ಆದರೆ ಇಂದು ನಾವು ಈ ಬಗ್ಗೆ ಮಾತನಾಡಿದರೆ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ ಎಂಬ ಆರೋಪ ಕೇಳಿಬರುತ್ತದೆ’ ಎಂದು ಬೇಸರಿಸಿದರು.‘ನಾವು ಸಾವಿರಾರು ಶಾಖೆಗಳನ್ನು ಹೊಂದಿದ್ದೇವೆ. ನಮ್ಮ ಶಾಖಾಗಳನ್ನು ವಿಸ್ತರಿಸಲು ಬಯಸುತ್ತೇವೆ. ಇದರ ಹಿಂದೆ ಸ್ವಾರ್ಥವಿಲ್ಲ. ಜನರನ್ನು ಒಗ್ಗೂಡಿಸುವ ಉದ್ದೇಶ ಮಾತ್ರ ಇದೆ. ದೇಶದ ಅಭಿವೃದ್ಧಿಯನ್ನು ಮಾತ್ರ ನಾವು ಬಯಸುತ್ತೇವೆ’ ಎಂದು ಭಾಗವತ್ ನುಡಿದರು.ಈ ಮುನ್ನ ಈ ಸಮಾವೇಶಕ್ಕೆ ಪ.ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿತ್ತು. ಬಳಿಕ ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಸಮಾವೇಶ ನಡೆಯಿತು.