ರುಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ₹86.7ಕ್ಕೆ ಕುಸಿತ - ಕುಸಿತದಿಂದ ಆಮದು ವೆಚ್ಚ ಹೆಚ್ಚಿ ವಸ್ತುಗಳು ದುಬಾರಿ ಸಂಭವ

Published : Jan 14, 2025, 08:00 AM IST
Money

ಸಾರಾಂಶ

ಕಳೆದ ಕೆಲದಿನಗಳಿಂದ ಸತತ ಕುಸಿತದ ಹಾದಿಯಲ್ಲಿದ್ದ ರುಪಾಯಿ ಮೌಲ್ಯ, ಸೋಮವಾರ ಒಂದೇ ದಿನ 66 ಪೈಸೆಗಳಷ್ಟು ಭಾರೀ ಕುಸಿತ ಕಾಣುವ ಮೂಲಕ 86.70ರಲ್ಲಿ ಅಂತ್ಯವಾಗಿದೆ.

ಮುಂಬೈ: ಕಳೆದ ಕೆಲದಿನಗಳಿಂದ ಸತತ ಕುಸಿತದ ಹಾದಿಯಲ್ಲಿದ್ದ ರುಪಾಯಿ ಮೌಲ್ಯ, ಸೋಮವಾರ ಒಂದೇ ದಿನ 66 ಪೈಸೆಗಳಷ್ಟು ಭಾರೀ ಕುಸಿತ ಕಾಣುವ ಮೂಲಕ 86.70ರಲ್ಲಿ ಅಂತ್ಯವಾಗಿದೆ. ಇದು ಡಾಲರ್‌ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ. ಇದರಿಂದ ಆಮದು ವೆಚ್ಚ ಹೆಚ್ಚಿ ವಸ್ತುಗಳು ದುಬಾರಿ ಸಂಭವವಿದೆ.

ಇಲ್ಲಿನ ಅಂತರ್‌ ಬ್ಯಾಂಕ್‌ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಡಾಲರ್‌ ಎದುರು ರುಪಾಯಿ ಮೌಲ್ಯ 1 ಪೈಸೆ ಕುಸಿತದೊಂದಿಗೆ 86.12ರಲ್ಲಿ ಆರಂಭವಾಯಿತು. ಆದರೆ ದಿನದಂತ್ಯಕ್ಕೆ ಮತ್ತೆ 65 ಪೈಸೆ ಕುಸಿದು 86.70ಕ್ಕೆ ತಲುಪಿತು. ಇದು ಕಳೆದ 2 ವರ್ಷಗಳಲ್ಲೇ ಒಂದೇ ದಿನದಲ್ಲಿ ರುಪಾಯಿಯ ಗರಿಷ್ಠ ಕುಸಿತವಾಗಿದೆ. 2023ರ ಫೆ.6ರಂದು 68 ಪೈಸೆ ಕುಸಿತ ಈ ಹಿಂದಿನ ದಾಖಲೆಯಾಗಿತ್ತು. ಕಳೆದ 2 ವಾರದ ಅವಧಿಯಲ್ಲಿ ರುಪಾಯಿ ಮೌಲ್ಯ 1 ರು.ಗಿಂತ ಹೆಚ್ಚು ಕುಸಿತ ಕಂಡಿದೆ.

ಕಾರಣ ಏನು?:

ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಡಾಲರ್‌ ಖರೀದಿಗೆ ಮುಂದಾಗಿದ್ದು, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಿರುವುದು ರುಪಾಯಿ ಮೌಲ್ಯ ಭಾರೀ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಪರಿಣಾಮ ಏನು? ಆಮದು ದುಬಾರಿ:

ವಿದೇಶಗಳಿಂದ ತರಿಸಿಕೊಳ್ಳುವ ವಸ್ತುಗಳಿಗೆ ಆಮದುದಾರರು ವಿದೇಶಿ ಕರೆನ್ಸಿಯಲ್ಲೇ ಹಣ ಪಾವತಿ ಮಾಡಬೇಕಾದ ಕಾರಣ, ಆಮದು ವೆಚ್ಚ ಹೆಚ್ಚುತ್ತದೆ. ಇದರಿಂದ ಆಮದು ವಸ್ತುಗಳು ಮತ್ತು ಸೇವೆ ಇನ್ನಷ್ಟು ದುಬಾರಿಯಾಗುತ್ತದೆ.

ಹಣದುಬ್ಬರ:  ಆಮದು ಶುಲ್ಕ ಹೆಚ್ಚಿದ ಕಾರಣ ಹಣದುಬ್ಬರವೂ ಏರಿಕೆಯಾಗುತ್ತದೆ. ಇದು ಜನರ ಕೊಳ್ಳುವಿಕೆ ಶಕ್ತಿ ಕಡಿಮೆ ಮಾಡುತ್ತೆ, ಆರ್ಥಿಕ ಸ್ಥಿರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ವಿತ್ತೀಯ ಕೊರತೆ ಹೆಚ್ಚಳ:

ಆಮದು ಶುಲ್ಕ ಹೆಚ್ಚಾಗಿ, ಡಾಲರ್‌ ಸಂಗ್ರಹ ಇಳಿಕೆಯಾದಂತೆ ದೇಶದ ವಿತ್ತೀಯ ಕೊರತೆ ಹೆಚ್ಚಾಗುತ್ತದೆ. ಇದು ಮತ್ತಷ್ಟು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುತ್ತದೆ.

ವಿದೇಶಿ ಹೂಡಿಕೆ:  ರುಪಾಯಿ ಮೌಲ್ಯ ಕುಸಿದಷ್ಟೂ, ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಮತ್ತಷ್ಟು ಹಣ ಹಿಂದಕ್ಕೆ ಪಡೆಯುತ್ತಾರೆ. ಇದರಿಂದ ಹಣಕಾಸು ಮಾರುಕಟ್ಟೆ, ಬಂಡವಾಳ ಹರಿವಿಗೆ ಅಡ್ಡಿ.

ತೈಲ ಬೆಲೆ ಏರಿಕೆ:

ಭಾರತ ತನ್ನ ಬಹುತೇಕ ಕಚ್ಚಾತೈಲಕ್ಕೆ ವಿದೇಶಗಳನ್ನೇ ಅವಲಂಬಿಸಿದೆ. ಹೀಗಾಗಿ ಕಚ್ಚಾತೈಲಕ್ಕೆ ಹೆಚ್ಚಿನ ಬೆಲೆ ನೀಡಬೇಕು. ಇದು ದೇಶೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾರಣವಾಗುತ್ತದೆ.

ರಫ್ತಿಗೆ ಅನುಕೂಲ:

ರುಪಾಯಿ ಮೌಲ್ಯ ಕುಸಿತದಿಂದ ರಫ್ತುದಾರರಿಗೆ ಮಾತ್ರ ಲಾಭವಾಗುತ್ತದೆ. ಕಾರಣ ಅವರಿಗೆ ಡಾಲರ್‌ ರೂಪದಲ್ಲಿ ಹಣ ಬರುವ ಕಾರಣ ಹೆಚ್ಚಿನ ಆದಾಯ ಬರುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ