ಪಹಲ್ಗಾಂ ಉಗ್ರದಾಳಿಗೆ ಉತ್ತರವಾಗಿ ಭಾರತ ‘ಆಪರೇಷನ್ ಸಿಂದೂರ್’ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ಸೇನೆ ಮುಖಾಮುಖಿಯಾಗಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬಗ್ಗೆ ರಷ್ಯಾ ಕಳವಳ ವ್ಯಕ್ತಪಡಿಸಿದೆ.
ಮಾಸ್ಕೋ: ಪಹಲ್ಗಾಂ ಉಗ್ರದಾಳಿಗೆ ಉತ್ತರವಾಗಿ ಭಾರತ ‘ಆಪರೇಷನ್ ಸಿಂದೂರ್’ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ಸೇನೆ ಮುಖಾಮುಖಿಯಾಗಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಬಗ್ಗೆ ರಷ್ಯಾ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾತನಾಡಿರುವ ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾರಿಯಾ ಜಖರೋವಾ, ‘ಪಹಲ್ಗಾಂ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಸೇನೆ ಮುಖಾಮುಖಿಯಾಗುತ್ತಿರುವ ಬಗ್ಗೆ ನಾವು ತೀವ್ರ ಕಳವಳಗೊಂಡಿದ್ದೇವೆ. ಪರಿಸ್ಥಿತಿ ಹದಗೆಡದಂತೆ ತಡೆಯಲು ಸಂಯಮದಿಂದ ವರ್ತಿಸುವಂತೆ ನಾವು ಎರಡೂ ದೇಶಗಳಿಗೆ ಕರೆ ನೀಡುತ್ತೇವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು ಶಾಂತಿಯುತವಾಗಿ ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ, 1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್ ಒಪ್ಪಂದದನುಸಾರ ಬಗೆಹರಿಸಿಕೊಳ್ಳಬೇಕು ಎಂದು ಆಶಿಸುತ್ತೇವೆ‘ ಎಂದಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇದೇ ವೇಳೆ, ‘ರಷ್ಯಾ ಉಗ್ರಕೃತ್ಯಗಳನ್ನು ಬಲವಾಗಿ ಖಂಡಿಸುತ್ತದೆ. ಈ ದುಷ್ಟತನದ ವಿರುದ್ಧ ಇಡೀ ವಿಶ್ವ ಸಮುದಾಯದ ಯತ್ನವನ್ನು ಒಗ್ಗೂಡಿಸುವ ಅಗತ್ಯವನ್ನು ಒತ್ತಿಹೇಳುತ್ತದೆ’ ಎಂದೂ ಅವರು ಹೇಳಿದ್ದಾರೆ.
ಈ ಸಂಘರ್ಷ ಆದಷ್ಟು ಬೇಗ ಮುಗಿಯಲಿ: ಟ್ರಂಪ್
ವಾಷಿಂಗ್ಟನ್: ಪಾಕಿಸ್ತಾನಿ ಉಗ್ರರ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಈ ಸಂಘರ್ಷ ಆದಷ್ಟು ಬೇಗ ಮುಗಿಯಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.
‘ಇದು(ಭಾರತದ ದಾಳಿ) ನಾಚಿಗೇಡು. ಕಚೇರಿಯ ಒಳಹೋಗುತ್ತಿರುವಾಗಲೇ ಈ ವಿಷಯ ತಿಳಿಯಿತು. ಏನೋಒಂದು ಆಗಲಿದೆ ಎಂದು ಜನರಿಗೆ ಅಂದಾಜು ಇತ್ತೆಂದು ಕಾಣುತ್ತದೆ. ಅವರು(ಭಾರತ ಮತ್ತು ಪಾಕ್) ಶತಮಾನಗಳಿಂದ ಹೊಡೆದಾಡುತ್ತಿದ್ದಾರೆ. ಇದು ಆದಷ್ಟು ಬೇಗ ಕೊನೆಗೊಳ್ಳಲಿ’ ಎಂದು ಟ್ರಂಪ್ ಹೇಳಿದ್ದಾರೆ.
ಅತ್ತ, ‘ಅಮೆರಿಕದ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರು ಬುಧವಾರ ಮಧ್ಯಾಹ್ನ ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರಾತಾ ಸಲಹೆಗಾರರೊಂದಿಗೆ ಮಾತನಾಡಿದ್ದು, ಸಂವಹನ ಮಾರ್ಗಗಳನ್ನು ತೆರೆದಿಡಿ ಮತ್ತು ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಿ’ ಎಂದಿರುವುದಾಗಿ ಸರ್ಕಾರ ತಿಳಿಸಿದೆ.