ರಷ್ಯಾದ ಖಾಸಗಿ ಸೇನಾಪಡೆಯಲ್ಲಿ ಕಲಬುರಗಿಯ ಮೂವರು ಅತಂತ್ರ

KannadaprabhaNewsNetwork |  
Published : Feb 23, 2024, 01:53 AM ISTUpdated : Feb 23, 2024, 08:35 AM IST
ಗುಲ್ಬರ್ಗದ ಸಂತ್ರಸ್ತರು | Kannada Prabha

ಸಾರಾಂಶ

ರಷ್ಯಾ ಸೇನೆಗೆ ಸಹಾಯಕರಾಗಿ ಸೇರಿಸುವ ನೆಪದಲ್ಲಿ ವಂಚಿಸಿದ್ದ ವ್ಯಕ್ತಿಯ ವಿರುದ್ಧ ಸಂತ್ರಸ್ತರ ಕುಟುಂಬ ತಮ್ಮನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಿದೆ.

ಹೈದರಾಬಾದ್‌: ರಷ್ಯಾ ಸೇನೆಯಲ್ಲಿ ಉತ್ತಮ ವೇತನದ ಹುದ್ದೆ ನೀಡುವುದಾಗಿ ನಂಬಿಸಿ ಕರ್ನಾಟಕದ ಕಲಬುರಗಿಯ ಮೂವರು ಸೇರಿದಂತೆ ಭಾರತದ 60 ಯುವಕರನ್ನು ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ಉದ್ಯೋಗ ಅರಸಿ ಹೀಗೆ ರಷ್ಯಾಕ್ಕೆ ಹೋದ ಯುವಕರನ್ನು ಅಲ್ಲಿಯ ಖಾಸಗಿ ಸೇನೆಗೆ ನೇಮಕ ಮಾಡಲಾಗಿದ್ದು, ಅವರೆಲ್ಲಾ ಇದೀಗ ರಷ್ಯಾ ಪರವಾಗಿ ಉಕ್ರೇನ್‌ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಾಡುತ್ತಿದ್ದಾರೆ.

ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬನ ವಂಚನೆಗೆ ಒಳಗಾದ ಇವರೆಲ್ಲಾ ಇದೀಗ ತಮ್ಮ ತವರಿಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯ ಕುಟುಂಬ ಸ್ಥಳೀಯ ಸಂಸದ ಅಸಾದುದ್ದೀನ್‌ ಓವೈಸಿ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಆದಷ್ಟು ಬೇಗ ಎಲ್ಲ ಭಾರತೀಯರನ್ನು ಮರಳಿ ಕರೆತರುವಂತೆ ಮನವಿ ಸಲ್ಲಿಸಿದೆ.

ಏನಿದು ಪ್ರಕರಣ?
ದುಬೈನಲ್ಲಿ ಕೆಲಸ ಮಾಡುತ್ತಿದ್ದ ಕಲಬುರಗಿ ಸೇರಿದಂತೆ ಭಾರತೀಯ ಮೂಲದ ವ್ಯಕ್ತಿಗಳನ್ನು ಸಂಪರ್ಕಿಸಿದ್ದ ಮಹಾರಾಷ್ಟ್ರದ ಮೂಲದ ವ್ಯಕ್ತಿಯೊಬ್ಬ ರಷ್ಯಾದ ಸೇನೆಯಲ್ಲಿ ಭಾರೀ ವೇತನದ ಕೆಲಸ ಕೊಡಿಸುವ ಆಫರ್‌ ನೀಡಿದ್ದ. ಈತನ ಮಾತು ನಂಬಿ 60ಕ್ಕೂ ಹೆಚ್ಚು ಜನರು ದುಬೈ ಕೆಲಸ ತೊರೆದು ಭಾರತಕ್ಕೆ ಮರಳಿದ್ದರು.

ಹೀಗೆ ಮರಳಿದವರ ಬಳಿ ತಲಾ 3.50 ಲಕ್ಷ ರು. ವಸೂಲಿ ಮಾಡಿದ್ದ ಏಜೆಂಟ್‌, ಪ್ರವಾಸಿಗರ ವೀಸಾದಲ್ಲಿ ಕಳೆದ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಕಳುಹಿಸಿಕೊಟ್ಟಿದ್ದ.

ವಂಚನೆ ಬೆಳಕಿಗೆ: ಹೀಗೆ ರಷ್ಯಾಕ್ಕೆ ಬಂದಿಳಿದ ಮೇಲೆ ಅಲ್ಲಿ ಅವರಿಂದ ರಷ್ಯಾ ಭಾಷೆಯಲ್ಲಿದ್ದ ಕೆಲ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಸಮವಸ್ತ್ರ ನೀಡಿ ಬಲವಂತವಾಗಿ ಉಕ್ರೇನ್‌ ವಿರುದ್ಧದ ಯುದ್ಧ ಭೂಮಿಗೆ ಕಳುಹಿಸಿಕೊಡಲಾಗಿದೆ. 

ಇಷ್ಟೆಲ್ಲಾ ಆದ ಬಳಿಕ ತಾವು ಸೇರಿಕೊಂಡಿದ್ದು ನೇರವಾಗಿ ರಷ್ಯಾ ಸೇನೆಗಲ್ಲ. ಬದಲಾಗಿ ರಷ್ಯಾಗೆ ಯೋಧರ ಸೇವೆ ನೀಡುವ ವ್ಯಾಗ್ನರ್‌ ಎಂಬ ಖಾಸಗಿ ಸೇನಾ ಪಡೆಗೆ ಎಂಬುದು ಗೊತ್ತಾಗಿದೆ.

ಹೀಗಾಗಿ ಈ ಭಾರತೀಯ ಯುವಕರು, ಇದೀಗ ತಮ್ಮ ಕುಟುಂಬ ಸದಸ್ಯರಿಗೆ ವಿಡಿಯೋ ಕರೆ ಮಾಡಿ ತಾವು ವಂಚನೆ ಹೋದ ವಿಷಯ ತಿಳಿಸಿದ್ದಾರೆ.

ಅಲ್ಲದೆ ಕೂಡಲೇ ಇಲ್ಲಿಂದ ಮರಳಿ ತವರಿಗೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.ಏನಿದು ವ್ಯಾಗ್ನರ್‌ ಸೇನೆ?ವ್ಯಾಗ್ನರ್‌ ಖಾಸಗಿ ಸೇನೆಯಾಗಿದ್ದು, ಹಣ ನೀಡಿದವರ ಪರವಾಗಿ ಸೇವೆ ನೀಡುತ್ತದೆ. 

ರಷ್ಯಾ ಸರ್ಕಾರದ ಆರ್ಥಿಕ ನೆರವಿನಲ್ಲೇ ಇದು ಕೆಲಸ ಮಾಡುತ್ತದೆ. ಉಕ್ರೇನ್‌ ಯುದ್ಧ ಆರಂಭವಾದ ಬಳಿಕ ಇದರ ಮುಖ್ಯಸ್ಥ ವ್ಯಾಗ್ನರ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ನಡುವೆ ವೈಮನಸ್ಯ ಉಂಟಾಗಿತ್ತು. ಬಳಿಕ ವ್ಯಾಗ್ನರ್‌ ನಿಗೂಢವಾಗಿ ಸಾವನ್ನಪ್ಪಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!