ಮತ್ತೆ ಶಾರುಖ್‌ ಪುತ್ರ ವರ್ಸಸ್‌ ಡ್ರಗ್ಸ್‌ ಅಧಿಕಾರಿ ವಾರ್‌!

KannadaprabhaNewsNetwork |  
Published : Sep 26, 2025, 01:03 AM IST
ಸಮೀರ್‌ ವಾಂಖೆಡೆ | Kannada Prabha

ಸಾರಾಂಶ

4 ವರ್ಷಗಳ ಹಿಂದೆ ಮಾದಕ ವಸ್ತು ಹೊಂದಿದ್ದ ಆರೋಪದಲ್ಲಿ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್‌ ಬಂಧಿಸಿ ಭಾರೀ ಸುದ್ದಿಯಾಗಿದ್ದ ಐಆರ್‌ಎಸ್‌ ಅಧಿಕಾರಿ ಸಮೀರ್‌ ವಾಂಖೆಡೆ ಇದೀಗ ಮತ್ತೆ ಕಿಂಗ್‌ ಖಾನ್‌ ಕುಟುಂಬದ ವಿರುದ್ಧ ಸಮರ ಸಾರಿದ್ದಾರೆ.

ಮುಂಬೈ: 4 ವರ್ಷಗಳ ಹಿಂದೆ ಮಾದಕ ವಸ್ತು ಹೊಂದಿದ್ದ ಆರೋಪದಲ್ಲಿ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್‌ ಬಂಧಿಸಿ ಭಾರೀ ಸುದ್ದಿಯಾಗಿದ್ದ ಐಆರ್‌ಎಸ್‌ ಅಧಿಕಾರಿ ಸಮೀರ್‌ ವಾಂಖೆಡೆ ಇದೀಗ ಮತ್ತೆ ಕಿಂಗ್‌ ಖಾನ್‌ ಕುಟುಂಬದ ವಿರುದ್ಧ ಸಮರ ಸಾರಿದ್ದಾರೆ.

ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಆರ್ಯನ್‌ ನಿರ್ಮಾಣದ ‘ದಿ ಬಾಸ್ಟರ್ಡ್ಸ್‌ ಆಫ್‌ ಬಾಲಿವುಡ್‌’ ವೆಬ್‌ ಸೀರೀಸ್‌ನಲ್ಲಿ ತಮ್ಮ ಮತ್ತು ತಮ್ಮ ಇಲಾಖೆಯನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಸಮೀರ್‌ ದೆಹಲಿ ಹೈಕೋರ್ಟ್‌ನಲ್ಲಿ 2 ಕೋಟಿ ರು. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಶಾರುಖ್ ಒಡೆತನದ ರೆಡ್ ಚಿಲೀಸ್ ಎಂಟರ್‌ಟೈನ್‌ಮೆಂಟ್, ಗೌರಿ ಖಾನ್‌, ನೆಟ್‌ಫ್ಲಿಕ್ಸ್‌ ಮತ್ತಿತರರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.

ದೂರಲ್ಲಿ ಏನಿದೆ?:ವೆಬ್‌ ಸೀರೀಸ್‌ನ ಮೊದಲ ಎಪಿಸೋಡ್‌ನಲ್ಲಿ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಪಾರ್ಟಿಯೊಂದಕ್ಕೆ ನುಗ್ಗಿ ಅಲ್ಲಿ ಡ್ರಗ್ಸ್‌ ಸೇವಿಸಿರುವ ಬಾಲಿವುಡ್‌ ಮಂದಿಗಾಗಿ ಹುಡುಕುತ್ತಿರುವ ದೃಶ್ಯಗಳಿವೆ. ಈ ಪಾತ್ರ ತಮ್ಮನ್ನು ಹೋಲುತ್ತದೆ. ಈ ಸೀರೀಸ್ ಅನ್ನು ತಮ್ಮ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ರಚಿಸಲಾಗಿದೆ. ಆರ್ಯನ್‌ ಪ್ರಕರಣ ಇನ್ನೂ ಬಾಂಬೆ ಹೈಕೋರ್ಟ್ ಮತ್ತು ಮುಂಬೈ ಎನ್‌ಡಿಪಿಎಸ್‌ ವಿಶೇಷ ಕೋರ್ಟ್‌ನಲ್ಲಿ ಬಾಕಿಯಿದ್ದು, ಈ ಸಂದರ್ಭದಲ್ಲಿ ಸೀರೀಸ್‌ನ ಚಿತ್ರಣ ತಪ್ಪು ಎಂದು ವಾಂಖೆಡೆ ಆರೋಪಿಸಿದ್ದಾರೆ. ಜೊತೆಗೆ, ಸೀರೀಸ್‌ನಲ್ಲಿ ‘ಸತ್ಯಮೇವ ಜಯತೇ’ ಘೋಷಣೆಯ ನಂತರ ಅಶ್ಲೀಲ ದೃಶ್ಯವನ್ನು ತೋರಿಸಲಾಗಿದೆ. ಇದು ರಾಷ್ಟ್ರೀಯ ಚಿಹ್ನೆಗೆ ಅವಮಾನವೆಂದು ದೂರಿದ್ದಾರೆ.

ಆರ್ಯನ್‌ ಅರೆಸ್ಟ್‌:

2021ರ ಅ.3ರಂದು ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಶಾರುಖ್‌ ಪುತ್ರ ಆರ್ಯನ್‌ ಖಾನ್‌ರನ್ನು ಐಷಾರಾಮಿ ಹಡಗಿನಲ್ಲಿ ಸಮೀರ್‌ ವಾಂಖೆಡೆ ಬಂಧಿಸಿದ್ದರು. ಪ್ರಕರಣದ ತನಿಖೆಯನ್ನೂ ಮುನ್ನಡೆಸಿದ್ದರು. ಆ ಬಳಿಕ ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದ್ದು, ತಾವು ಪ್ರಕರಣದಲ್ಲಿ ಸಿಲುಕಿಕೊಳ್ಳದಂತೆ ಮಾಡಲು ಶಾರುಖ್‌ರಿಂದ ವಾಂಖೆಡೆ 25 ಕೋಟಿ ರು. ಲಂಚ ಕೇಳಿದ್ದರು ಎಂದು ಆರ್ಯನ್‌ ಖಾನ್‌ ಆರೋಪಿಸಿದ್ದರು. ಕೆಲ ಸಮಯ ತಣ್ಣಗಾಗಿದ್ದ ಈ ಜಟಾಪಟಿ ವೆಬ್‌ ಸೀರೀಸ್‌ ಪ್ರಸಾರದ ಬಳಿಕ ಮತ್ತೆ ಚುರುಕು ಪಡೆದುಕೊಂಡಿದೆ.

ಆರ್ಯನ್‌ ವೆಬ್‌ ಸೀರೀಸ್‌ ವಿರುದ್ಧ ಸಮೀರು ದೂರು

ಡ್ರಗ್ಸ್‌ ಕೇಸಲ್ಲಿ ಶಾರುಖ್‌ ಪುತ್ರನ ಬಂಧಿಸಿದ್ದ ಅಧಿಕಾರಿ

PREV
Read more Articles on

Recommended Stories

‘ಅಸಾಧ್ಯ ಗ್ಯಾರಂಟಿ’ಗೆ ಬಿಹಾರ ಮತದಾರ ಶಾಕ್‌!
ಕೈಹಿಡಿಯದ ಮತದಾರರ ಪಟ್ಟಿ ಪರಿಷ್ಕರಣೆ, ಮತಗಳವು ಟೀಕೆ