ಸಂಸತ್‌ ಆವರಣದಲ್ಲಿ ಧಂ ಹೊಡೆದಿದ್ದು ಸೌಗತ್‌ ರಾಯ್‌

KannadaprabhaNewsNetwork |  
Published : Dec 14, 2025, 02:45 AM IST
ಧಂ | Kannada Prabha

ಸಾರಾಂಶ

‘ಸಂಸತ್ತಿನಲ್ಲಿ ಟಿಎಂಸಿ ಸಂಸದರು ಇ-ಸಿಗರೆಟ್‌ ಸೇವನೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಆರೋಪಿಸಿದ ಬೆನ್ನಲ್ಲೇ, ಟಿಎಂಸಿಯ ಸೌಗತ್‌ ರಾಯ್‌ ಸಂಸತ್‌ ಆವರಣದಲ್ಲಿ ಸಾರ್ವಜನಿಕವಾಗಿ ಸಿಗರೆಟ್‌ ಸೇದುತ್ತಿರುವ ಫೋಟೋ ಬಿಡುಗಡೆಯಾಗಿದೆ.

ನವದೆಹಲಿ: ‘ಸಂಸತ್ತಿನಲ್ಲಿ ಟಿಎಂಸಿ ಸಂಸದರು ಇ-ಸಿಗರೆಟ್‌ ಸೇವನೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಆರೋಪಿಸಿದ ಬೆನ್ನಲ್ಲೇ, ಟಿಎಂಸಿಯ ಸೌಗತ್‌ ರಾಯ್‌ ಸಂಸತ್‌ ಆವರಣದಲ್ಲಿ ಸಾರ್ವಜನಿಕವಾಗಿ ಸಿಗರೆಟ್‌ ಸೇದುತ್ತಿರುವ ಫೋಟೋ ಬಿಡುಗಡೆಯಾಗಿದೆ.

ಈ ವಿಡಿಯೋ ವೈರಲ್‌ ಆಗಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಂಸದ ರಾಯ್‌, ‘ಸದನದ ಒಳಗೆ ಧೂಮಪಾನ ವರ್ಜಿತ. ಅದರ ಹೊರಗೆ ತೆರೆದ ಜಾಗದಲ್ಲಿ ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಸುಮ್ಮನೆ ವಿವಾದ ಸೃಷ್ಟಿಸಲಾಗುತ್ತಿದೆ. ಬಿಜೆಪಿ ಅವಧಿಯಲ್ಲೇ ದೆಹಲಿಯಲ್ಲಿ ಅತಿಹೆಚ್ಚು ಮಾಲಿನ್ಯವಾಗುತ್ತಿದೆ. ಆ ಬಗ್ಗೆ ಗಮನಹರಿಸಿ’ ಎಂದಿದ್ದಾರೆ.

ವೈರಲ್‌ ಆದ ವಿಡಿಯೋದಲ್ಲಿ ರಾಯ್‌ ಅವರು ಸಂಸತ್ತಿನ ಹೊರಗೆ ನಿಂತು ಸಿಗರೆಟ್‌ ಸೇದುತ್ತಿರುವುದು ಮತ್ತು ಬಳಿಯಲ್ಲಿದ್ದ ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಹಾಗೂ ಗಜೇಂದ್ರ ಸಿಂಗ್ ಶೇಖಾವತ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದು.

==

ಕಾಶ್ಮೀರದಲ್ಲಿ 200 ಶಂಕಿತ ಉಗ್ರ ಬೆಂಬಲಿಗರು ವಶಕ್ಕೆ

ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಯಶಸ್ಸು

ಶ್ರೀನಗರ: ಉಗ್ರನಿಗ್ರಹ ಕಾರ್ಯಾಚರಣೆಯ ಮಹತ್ವದ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉಗ್ರರ ಜೊತೆ ನಂಟುಳ್ಳ ಸುಮಾರು 200 ಶಂಕಿತ ವ್ಯಕ್ತಿಗಳನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.

ಈ ವ್ಯಕ್ತಿಗಳು ಉಗ್ರರಿಗೆ ಹಣ, ಆಶ್ರಯ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಿ, ಭಯೋತ್ಪಾದಕ ಕೃತ್ಯಗಳಿಗೆ ಪರೋಕ್ಷವಾಗಿ ನೆರವಾಗುತ್ತಿದ್ದರು ಎನ್ನಲಾಗಿದೆ.ಇತ್ತೀಚೆಗೆ ದೆಹಲಿ ಕೆಂಪುಕೋಟೆ ಬಳಿ ಆತ್ಮಾಹುತಿ ದಾಳಿ ನಡೆದ ಬಳಿಕ ಭದ್ರತಾ ಪಡೆಗಳು ಉಗ್ರಜಾಲದ ಬೆನ್ನು ಹತ್ತಿವೆ. ಇದರ ಮಧ್ಯೆಯೇ ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿ 200 ಶಂಕಿತ ವ್ಯಕ್ತಿಗಳನ್ನು ಹೆಡೆಮುರಿಕಟ್ಟಿದ್ದಾರೆ.

==

ಉದ್ಯೋಗ ಖಾತ್ರಿ ಸ್ಕೀಂ ಹಿರಿಮೆ ಪಡೆಯಲು ಅದರ ಹೆಸರು ಬದಲು: ಕಾಂಗ್ರೆಸ್‌

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯೋಜನೆಯ ಹೆಸರನ್ನು ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್‌ ಯೋಜನಾ ಎಂದು ಬದಲಾಯಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್‌ ಟೀಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಇದು ಯೋಜನೆಯ ಯಶಸ್ಸಿನ ಹಿರಿಮೆ ಪಡೆಯುವ ಮತ್ತು ಈ ಹಿಂದೆ ಮಾಡಿದ್ದ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಹೆಸರು ಬದಲಾಯಿಸುವ ಮೂಲಕ ಸರಿಪಡಿಸುವ ನರೇಂದ್ರ ಮೋದಿ ಅವರ ಯತ್ನ’ ಎಂದಿದ್ದಾರೆ. ‘ಹಿಂದೆ ವೈಫಲ್ಯದ ಸ್ಮಾರಕ ಎನ್ನುತ್ತಿದ್ದ ಮೋದಿ ಈಗ ಹೆಸರು ಬದಲಿಸಿ ಕ್ರಾಂತಿಕಾರಿ ಯೋಜನೆ ಹೆಗ್ಗಳಿಕೆ ಪಡೆಯಲು ಹೊರಟಿದ್ದಾರೆ. ಇದು ರಾಷ್ಟ್ರದ ಅಂತಃಪ್ರಜ್ಞೆಯಿಂದ ಗಾಂಧಿಯನ್ನು ಅಳಿಸುವ ಮತ್ತೊಂದು ಮಾರ್ಗ’ ಎಂದು ಲೇವಡಿ ಮಾಡಿದ್ದಾರೆ.

==

ನಾಳೆಯಿಂದ ಮೋದಿ ಜೋರ್ಡಾನ್‌, ಒಮಾನ್‌ ಇಥಿಯೋಪಿಯಾ ಟೂರ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿ.15ರಿಂದ 4 ದಿನ 3 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಜೋರ್ಡನ್‌ ರಾಜನ ಆಹ್ವಾನದ ಮೇರೆಗೆ ಡಿ.15-16ರಂದು ಅಲ್ಲಿಗೆ ತೆರಳಲಿರುವ ಮೋದಿ, ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಡಿ.16ರಂದು ಮೊದಲ ಬಾರಿ ಪೂರ್ವ ಆಫ್ರಿಕಾದ ದೇಶ ಇಥಿಯೋಪಿಯಾಗೆ ಹೋಗಲಿದ್ದಾರೆ. ಅಲ್ಲಿಂದ ಡಿ.17ರಂದು ಒಮಾನ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಭಾರತ ಮತ್ತು ಒಮಾನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಮೋದಿ ಸಹಿ ಮಾಡುವ ನಿರೀಕ್ಷೆಯಿದೆ. ಈ ಒಪ್ಪಂದಕ್ಕೆ ಶುಕ್ರವಾರ ಸಚಿವಸಂಪುಟದ ಅನುಮೋದನೆ ಸಿಕ್ಕಿಯಾಗಿದೆ.

==

ಗರ್ಭಕಂಠ ಕ್ಯಾನ್ಸರ್‌ ತಡೆಗೆ ತ.ನಾಡಲ್ಲಿ ಉಚಿತ ಲಸಿಕೆ: ಮೊದಲ ರಾಜ್ಯದ ಗೌರವ

ಚೆನ್ನೈ: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮವೈರಸ್‌ (ಎಚ್‌ಪಿವಿ) ವಿರುದ್ಧ ತಮಿಳುನಾಡು ಸರ್ಕಾರ ತೊಡೆ ತಟ್ಟಿದ್ದು, ಜನವರಿ ಅಂತ್ಯಕ್ಕೆ ರಾಜ್ಯಾದ್ಯಂತ ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದೆ. ಈ ಮೂಲಕ ಇಂಥ ಅಭಿಯಾನ ಕೈಗೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ. ಗರ್ಭಕಂಠದ ಕ್ಯಾನ್ಸರ್ ಸಾಮಾನ್ಯವಾಗಿ ಎಚ್‌ಪಿವಿ ವೈರಸ್‌ನಿಂದ ಉಂಟಾಗುತ್ತದೆ. ಲೈಂಗಿಕ ಸಂಪರ್ಕದಿಂದ ಹರಡುವ ಈ ವೈರಸ್ ಅನ್ನು ಲಸಿಕೆ ಮೂಲಕ ತಡೆಗಟ್ಟಬಹುದು. ಹೀಗಾಗಿ 9ರಿಂದ 14 ವರ್ಷದ ನಡುವಿನ ಹೆಣ್ಣುಮಕ್ಕಳಿಗೆ ಈ ಲಸಿಕೆ ನೀಡಲು ಉದ್ದೇಶಿಸಲಾಗಿದೆ.==

ಅಭಿಯಾನ ರಾಜ್ಯದ ಎಲ್ಲ 38 ಜಿಲ್ಲೆಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ, ಅರಿಯಲೂರ್, ಪೆರಂಬಲೂರ್, ತಿರುವಣ್ಣಾಮಲೈ ಮತ್ತು ಧರ್ಮಪುರಿ ಜಿಲ್ಲೆಗಳ 27,000 ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗುವುದು. ಮುಂದೆ ರಾಜ್ಯಾದ್ಯಂತ 3.38 ಲಕ್ಷ ಹುಡುಗಿಯರಿಗೆ ಲಭ್ಯವಾಗಲಿದೆ. ಇದಕ್ಕಾಗಿ ಸರ್ಕಾರ 36 ಕೋಟಿ ರು.ಗಳನ್ನು ಮೀಸಲಿಟ್ಟಿದೆ ಎಂದು ಆರೋಗ್ಯ ಸಚಿವ ಮ. ಸುಬ್ರಮಣಿಯನ್‌ ತಿಳಿಸಿದ್ದಾರೆ.ಅಭಿಯಾನ ರಾಜ್ಯದ ಎಲ್ಲ 38 ಜಿಲ್ಲೆಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ, ಅರಿಯಲೂರ್, ಪೆರಂಬಲೂರ್, ತಿರುವಣ್ಣಾಮಲೈ ಮತ್ತು ಧರ್ಮಪುರಿ ಜಿಲ್ಲೆಗಳ 27,000 ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗುವುದು. ಮುಂದೆ ರಾಜ್ಯಾದ್ಯಂತ 3.38 ಲಕ್ಷ ಹುಡುಗಿಯರಿಗೆ ಲಭ್ಯವಾಗಲಿದೆ. ಇದಕ್ಕಾಗಿ ಸರ್ಕಾರ 36 ಕೋಟಿ ರು.ಗಳನ್ನು ಮೀಸಲಿಟ್ಟಿದೆ ಎಂದು ಆರೋಗ್ಯ ಸಚಿವ ಮ. ಸುಬ್ರಮಣಿಯನ್‌ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ