ಕೇಂದ್ರ ಸರ್ಕಾರದ ಯೋಜನೆ ಸ್ವಚ್ಛ ಭಾರತದಿಂದ ದೇಶದಲ್ಲಿ ಪ್ರತಿ ವರ್ಷ 70000 ಮಕ್ಕಳ ಜೀವ ರಕ್ಷಣೆ

Published : Sep 06, 2024, 07:20 AM IST
clean india

ಸಾರಾಂಶ

ಸ್ವಚ್ಛ ಭಾರತ ಯೋಜನೆಯಡಿ ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಿದ್ದರಿಂದಾಗಿ ಭಾರತದಲ್ಲಿ ಪ್ರತಿ ವರ್ಷ 60ರಿಂದ 70 ಸಾವಿರದಷ್ಟು 5 ವರ್ಷದೊಳಗಿನ ಮಕ್ಕಳು ಸಾವಿನಿಂದ ಬಚಾವಾಗುತ್ತಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ನವದೆಹಲಿ :  ಸ್ವಚ್ಛ ಭಾರತ ಯೋಜನೆಯಡಿ ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಿದ್ದರಿಂದಾಗಿ ಭಾರತದಲ್ಲಿ ಪ್ರತಿ ವರ್ಷ 60ರಿಂದ 70 ಸಾವಿರದಷ್ಟು 5 ವರ್ಷದೊಳಗಿನ ಮಕ್ಕಳು ಸಾವಿನಿಂದ ಬಚಾವಾಗುತ್ತಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಅಲ್ಲದೆ ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ದೇಶಗಳೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದೆ.

ಈ ವರದಿಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಮರ್ಪಕ ಶೌಚಾಲಯದ ಲಭ್ಯತೆಯು ನವಜಾತ ಶಿಶು ಹಾಗೂ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸುಧಾರಿತ ನೈರ್ಮಲ್ಯ ಸೌಲಭ್ಯವು ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ರೂಪಾಂತರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಅಮೆರಿಕದ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಸಂಶೋಧಕರನ್ನು ಒಳಗೊಂಡ ತಂಡವು ದೇಶದ 35 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಹಾಗೂ 600ಕ್ಕೂ ಹೆಚ್ಚು ಜಿಲ್ಲೆಗಳ ರಾಷ್ಟ್ರೀಯ ಪ್ರಾತಿನಿಧಿಕ ಸಮೀಕ್ಷೆಯನ್ನು ಆಧರಿಸಿ ಅಧ್ಯಯನ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯನ್ನು ಬ್ರಿಟನ್‌ನ ವೈಜ್ಞಾನಿಕ ನಿಯತಕಾಲಿಕೆ ‘ನೇಚರ್‌’ ಪ್ರಕಟಿಸಿದೆ.

ವರದಿಯಲ್ಲೇನಿದೆ?:

ಸ್ವಚ್ಛ ಭಾರತ ಯೋಜನೆಯು 2014ರಲ್ಲಿ ಜಾರಿಗೆ ಬಂದ ನಂತರ ದೇಶದಲ್ಲಿ ಶೌಚಾಲಯ ನಿರ್ಮಾಣ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಯಿತು. ಸ್ವಚ್ಛ ಭಾರತ ಮಿಷನ್‌ ಮುನ್ನ ಹಾಗೂ ನಂತರದ ಅವಧಿಗೆ ಹೋಲಿಸಿದರೆ ನವಜಾತ ಶಿಶು ಮತ್ತು ಮಕ್ಕಳ ಮರಣ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಶೌಚಾಲಯಗಳ ಲಭ್ಯತೆಯಿಂದ ನೈರ್ಮಲ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. ಇದರಿಂದ ರೋಗ ರುಜಿನಗಳು ಕಡಿಮೆ ಆಗಿ ಪ್ರತಿ ವರ್ಷ ಭಾರತದಲ್ಲಿ ಐದು ವರ್ಷದೊಳಗಿನ 60000ದಿಂದ 70 ಸಾವಿರ ಮಕ್ಕಳ ಸಾವನ್ನು ತಪ್ಪಿಸಿರುವಂತೆ ಕಂಡುಬರುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸ್ವಚ್ಛ ಭಾರತದ ಯೋಜನೆಯಡಿ ಶೌಚಾಲಯ ನಿರ್ಮಾಣವಾದಂತೆಲ್ಲಾ ಮಕ್ಕಳ ಸಾವಿನ ಪ್ರಮಾಣ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ಹೇಳಿದೆ.

ಸ್ವಚ್ಛಭಾರತ ಆಂದೋಲನ:

ಬಯಲು ಬಹಿರ್ದೆಸೆ ಹಾಗೂ ಘನ ತ್ಯಾಜ್ಯ ನಿರ್ವಹಣೆ ಉದ್ದೇಶದಿಂದ 2014ರ ಅ.2ರಂದು ಸ್ವಚ್ಛ ಭಾರತ ಮಿಷನ್‌ ಅನ್ನು ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ದೇಶದ ರಸ್ತೆ, ಬೀದಿಗಳನ್ನು ಸ್ವಚ್ಛಗೊಳಿಸುವ ಪ್ರಮುಖ ಉದ್ದೇಶವನ್ನು ಇದು ಹೊಂದಿತ್ತು. ಈ ಯೋಜನೆಯ ಮತ್ತೊಂದು ಗುರಿ ಎಲ್ಲ ಗ್ರಾಮೀಣ ಮನೆಗಳಲ್ಲಿ ಶೌಚಾಲಯ ಸಂಪರ್ಕ ಒದಗಿಸುವ ಮೂಲಕ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವುದಾಗಿತ್ತು.

2024ರ ಜುಲೈಗೆ ಅನುಗುಣವಾಗಿ ಈ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 12 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ಯೋಜನೆಯಿಂದ 6.3 ಲಕ್ಷ ಗ್ರಾಮಗಳ 50 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ- ಇರಾನ್‌ ಯುದ್ಧ! ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಅಟ್ಯಾಕ್‌!
ಅಕ್ಕಪಕ್ಕದ ದೇಶಗಳಿಗೂ ಯುದ್ಧದ ಕೊಳ್ಳಿ