ನವದೆಹಲಿ: ಭಾರಿ ಅಕ್ರಮದ ಆರೋಪ ಮಾಡಿ ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆ ವರದಿ ಪ್ರಕಟಿಸಿದ ಬಳಿಕ ಸಾಲದ ಸಂಕಷ್ಟಕ್ಕೆ ಸಿಲುಕಿದ್ದ ಅದಾನಿ ಕಂಪನಿಯಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಕೇಂದ್ರ ಸರ್ಕಾರದ ಒತ್ತಡದ ಮೇರೆಗೆ ಮೇ ತಿಂಗಳಲ್ಲಿ 33 ಸಾವಿರ ಕೋಟಿ ರು. ಹೂಡಿಕೆ ಮಾಡಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಟಿಸಿದೆ.
ಇದರ ಬೆನ್ನಲ್ಲೇ, ‘ಎಲ್‌ಐಸಿಯ 30 ಕೋಟಿ ಪಾಲಿಸಿದಾರರ 33 ಸಾವಿರ ಕೋಟಿ ರು. ಹಣವನ್ನು ವ್ಯವಸ್ಥಿತವಾಗಿ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಇದು ‘ಮೊಬೈಲ್ ಫೋನ್ ಬ್ಯಾಂಕಿಂಗ್’ಗೆ ಅತ್ಯುತ್ತಮ ಉದಾಹರಣೆ. ಇದು ‘ಮೊದಾನಿಯ’ ಮೆಗಾ ಹಗರಣ’ ಎಂದು ಕಾಂಗ್ರೆಸ್ ಕಿಡಿಕಾರಿದ್ದು, ಈ ಬಗ್ಗೆ ಜಂಟಿ ಸದನ ಸಮಿತಿ (ಜೆಪಿಸಿ) ತನಿಖೆಗೆ ಆಗ್ರಹಿಸಿದೆ.
ಆದರೆ, ಎಲ್‌ಐಸಿ ಮಾತ್ರ ಕೇಂದ್ರದ ಒತ್ತಡದಿಂದ ಹೂಡಿಕೆ ಮಾಡಲಾಗಿದೆ ಎಂಬ ಆರೋಪ ತಳ್ಳಿಹಾಕಿದೆ. ‘ನಾವು ಸಾಕಷ್ಟು ಅಧ್ಯಯನ ನಡೆಸಿಯೇ ಸ್ವತಂತ್ರವಾಗಿ ಹೂಡಿಕೆ ನಿರ್ಧಾರ ತೆಗೆದುಕೊಂಡಿದ್ದೆವು. ಯಾವುದೇ ಒತ್ತಡ ಇರಲಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
‘ಅದಾನಿ ವಿರುದ್ಧ ಅಮೆರಿಕದಲ್ಲಿ ಭ್ರಷ್ಚಾಚಾರದ ಆರೋಪ ಕೇಳಿಬಂದ ಬೆನ್ನಲ್ಲೇ ಅದಾನಿ ಗ್ರೂಪ್ ಷೇರು ಭಾರೀ ಕುಸಿದಿತ್ತು. ಆದಾಗ್ಯೂ ಅದಾನಿ ಕಂಪನಿಗಳಲ್ಲಿ ಎಲ್‌ಐಸಿ 33 ಸಾವಿರ ಕೋಟಿ ಹೂಡಿಕೆ ಮಾಡಿತ್ತು. ಈ ನಡುವೆ ಎಲ್‌ಐಸಿ ಸೆ.21ರಂದು ಕೇವಲ 4 ಗಂಟೆಗಳಲ್ಲಿ 7,850 ಕೋಟಿ ರು. ನಷ್ಟ ಅನುಭವಿಸಿತ್ತು. ಈ ಕುರಿತು ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಒತ್ತಾಯಿಸಿದ್ದಾರೆ.
ಇನ್ನು ‘ಮೋದಾನಿ’(ಮೋದಿ-ಅದಾನಿ) ಯೋಜನೆಗಳು ಹೇಗೆ ಎಲ್‌ಐಸಿಯ ಪಾಲಿಸಿದಾರರಿಗೆ ನಷ್ಟ ಉಂಟುಮಾಡುತ್ತಿದೆ ಎಂಬುದು ಮಾಧ್ಯಮಗಳಿಂದ ಬಹಿರಂಗವಾಗುತ್ತಿದೆ. ಅದಾನಿಯ ಷೇರು ಕುಸಿದಿದ್ದರೂ ಅದರ ಎಫ್‌ಪಿಒ(ಫಾಲೋ ಆನ್ ಪಬ್ಲಿಕ್ ಆಫರ್)ನಲ್ಲಿ ಎಸ್‌ಬಿಐ 525 ಕೋಟಿ ರು. ಹೂಡಿಕೆ ಮಾಡಿದೆ. ಇದರಲ್ಲಿ ನೇರ ಲಾಭಪಡೆಯುವವರು ಮೋದಿ ಅವರ ಆಪ್ತರೇ ಹೊರತು ಸಾಮಾನ್ಯ ಜನರಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
- ಕೇಂದ್ರದ ಒತ್ತಡದಿಂದ ₹33,000 ಕೋಟಿ ಹೂಡಿಕೆ: ವರದಿ
- 30 ಕೋಟಿ ಪಾಲಿಸಿದಾರರ 33,000 ಕೋಟಿ ಹಣ ದುರ್ಬಳಕೆ
- ಈ ಬಗ್ಗೆ ಜೆಪಿಸಿ ತನಿಖೆ ಆಗಲಿ: ಕಥ ವಕ್ತಾರ ಜೈರಾಂ ಆಗ್ರಹ
- ಹೂಡಿಕೆ ನಿಯಮಬದ್ಧ, ಒತ್ತಡ ಇರಲಿಲ್ಲ: ಎಲ್‌ಐಸಿ