ಸಿಎಎ ಜಾರಿ ತಡೆಗೆ ಸುಪ್ರೀಂಕೋರ್ಟ್‌ ನಕಾರ

KannadaprabhaNewsNetwork |  
Published : Mar 20, 2024, 01:19 AM ISTUpdated : Mar 20, 2024, 12:35 PM IST
caa | Kannada Prabha

ಸಾರಾಂಶ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ. ಆದರೆ ಕಳೆದ ವಾರ ಜಾರಿ ಆಗಿದ್ದ ಈ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 237 ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿರುವ ಪೀಠ, ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ 3 ವಾರಗಳ ಕಾಲಾವಕಾಶವನ್ನು ನೀಡಿದೆ. 

ಏ.9ರಂದು ಮುಂದಿನ ವಿಚಾರಣೆ ನಡೆಸಲಿದೆ.ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್, ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ನ್ಯಾ। ಮನೋಜ್ ಮಿಶ್ರಾ ಅವರ ಪೀಠದ ಮುಂದೆ ವಾದ ಮಂಡಿಸಿ ಅರ್ಜಿದಾರರು, ‘ಸಿಎಎ ತಾರತಮ್ಯದಿಂದ ಕೂಡಿದೆ ಮತ್ತು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ.

ಹೀಗಾಗಿ ಕೋರ್ಟು ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಕಾಯ್ದೆಗೆ ತಡೆ ನೀಡಬೇಕು’ ಎಂದು ಕೋರಿದರು.ಇದಕ್ಕೆ ಆಕ್ಷೇಪಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಇದು (ಸಿಎಎ) ಯಾವುದೇ ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ’ ಎಂದರು ಹಾಗೂ ದಾವೆದಾರರ ಅರ್ಜಿಗಳಿಗೆ ಉತ್ತರ ಸಲ್ಲಿಸಲು 4 ವಾರಗಳ ಅಗತ್ಯವಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾಯ್ದೆಗೆ ತಡೆ ನೀಡಲು ನಿರಾಕರಿಸಿ ಕೇಂದ್ರಕ್ಕೆ ಉತ್ತರ ಸಲ್ಲಿಸಲು 3 ವಾರದ ಅವಕಾಶ ನೀಡಿತು ಹಾಗೂ ವಿಚಾರಣೆ ಮುಂದೂಡಿತು.

ಅರ್ಜಿದಾರರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ವಿರೋಧ ಪಕ್ಷದ ನಾಯಕರಾದ ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಕೂಡ ಸೇರಿದ್ದಾರೆ.

ಕಾಯ್ದೆಯ ಪ್ರಕಾರ, ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ಸಿಗಲಿದೆ.

PREV

Recommended Stories

ಚುನಾವಣೆಗೆ ಮುನ್ನ ಲಾಲು ಕುಟುಂಬಕ್ಕೆ ಭಾರೀ ಶಾಕ್‌
ಶೇ.100ರಷ್ಟು ಇಪಿಎಫ್‌ ಹಣ ಹಿಂಪಡೆಯುವಿಕೆಗೆ ಅವಕಾಶ