ಡಿಜಿಟಲ್‌ ಅರೆಸ್ಟ್‌ ಕೇಸ್‌ಗಳ ಸಿಬಿಐ ತನಿಖೆಗೆ ಸುಪ್ರೀಂ ಆದೇಶ

KannadaprabhaNewsNetwork |  
Published : Dec 02, 2025, 01:45 AM ISTUpdated : Dec 02, 2025, 05:22 AM IST
 Digital Arrest

ಸಾರಾಂಶ

 ಹೆಚ್ಚುತ್ತಿರುವ ಡಿಜಿಟಲ್‌ ಅರೆಸ್ಟ್ ಪ್ರಕರಣ  ಕುರಿತು ಏಕೀಕೃತ ತನಿಖೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಸಿಬಿಐಗೆ ಆದೇಶಿಸಿದೆ. ಜತೆಗೆ, ಸಿಬಿಐ ತನಿಖೆಗೆ ಸಮ್ಮತಿ ನೀಡಬೇಕೆಂದು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಾದ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ನಿರ್ದೇಶನ ನೀಡಿದೆ.

 ನವದೆಹಲಿ :  ದೇಶದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಡಿಜಿಟಲ್‌ ಅರೆಸ್ಟ್ ಪ್ರಕರಣಗಳ ಕುರಿತು ಏಕೀಕೃತ ತನಿಖೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಸಿಬಿಐಗೆ ಆದೇಶಿಸಿದೆ. ಜತೆಗೆ, ಸಿಬಿಐ ತನಿಖೆಗೆ ಸಮ್ಮತಿ ನೀಡಬೇಕೆಂದು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಾದ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ನಿರ್ದೇಶನ ನೀಡಿದೆ.

ಹರ್ಯಾಣದ ಹಿರಿಯ ದಂಪತಿ ಸೈಬರ್‌ ಕ್ರಿಮಿನಲ್‌ಗಳಿಂದಾಗಿ ಜೀವಮಾನವಿಡೀ ದುಡಿದ ಹಣ ಕಳೆದುಕೊಂಡ ಪ್ರಕರಣ ಪ್ರಕರಂಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್‌ ಮತ್ತು ನ್ಯಾ. ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠ ಈ ಮಹತ್ವದ ಆದೇಶ ಮಾಡಿದೆ,

‘ಡಿಜಿಟಲ್‌ ಅರೆಸ್ಟ್‌, ಹೂಡಿಕೆ ಹಗರಣ ಮತ್ತು ಪಾರ್ಟ್‌ ಟೈಂ ಜಾಬ್‌ ಹೀಗೆ ಆನ್‌ಲೈನ್‌ ಮೂಲಕ ಮೂರು ರೀತಿ ಜನರನ್ನು ವಂಚಿಸಿ ಕೋಟ್ಯಂತರ ರುಪಾಯಿ ಲೂಟಿ ಮಾಡಲಾಗುತ್ತಿದೆ. ಇವುಗಳಲ್ಲಿ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳನ್ನು ಸಿಬಿಐ ಆದ್ಯತೆ ಮೇಲೆ ತನಿಖೆ ನಡೆಸುವ ಅಗತ್ಯವಿದೆ. ಹೀಗಾಗಿ ಸಿಬಿಐ ಮೊದಲಿಗೆ ಡಿಜಿಟಲ್‌ ಅರೆಸ್ಟ್‌ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಬೇಕು. ನಂತರ ಉಳಿದ 2 ವಿಷಯಗಳ ಬಗ್ಗೆ ತನಿಖೆ ನಡೆಸಬೇಕು. ಈ ಕುರಿತ ತನಿಖೆಗೆ ಅಗತ್ಯಬಿದ್ದರೆ ಇಂಟರ್‌ಪೋಲ್‌ ನೆರವನ್ನೂ ಪಡೆಯಬೇಕು’ ಎಂದು ಸೂಚಿಸಿತು.

ಆರ್‌ಬಿಐಗೆ ಪ್ರಶ್ನೆ:

ಇದೇ ವೇಳೆ, ‘ಸೈಬರ್‌ ಕ್ರಿಮಿನಲ್‌ಗಳು ಬಳಸುವ ಬ್ಯಾಂಕ್‌ ಖಾತೆಯನ್ನು ಜಪ್ತಿ ಮಾಡಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ), ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್‌ ಲರ್ನಿಂಗ್‌ ಟೂಲ್‌ಗಳನ್ನು ಏಕೆ ಬಳಸುತ್ತಿಲ್ಲ?’ ಎಂದು ಪ್ರಶ್ನೆ ಮಾಡಿದ ಕೋರ್ಟ್‌, ‘ಅಂಥ ಖಾತೆಗಳನ್ನು ಜಪ್ತಿ ಮಾಡಲು ಎಐ ಅಥವಾ ಮಷಿನ್‌ ಲರ್ನಿಂಗ್‌ ಟೂಲ್ಸ್‌ ಅನ್ನು ಬಳಸಬಹುದೇ? ಎಂಬ ಕುರಿತು ವಿವರಣೆ ನೀಡುವಂತೆ ಆರ್‌ಬಿಐಗೆ ನೋಟಿಸ್‌ ಜಾರಿ ಮಾಡಿತು.

ಅಲ್ಲದೆ, ಸಿಬಿಐ ಸೇರಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಅವರ ಪೊಲೀಸರು ಜನರಿಗೆ ವಂಚಿಸುವವರ ಬ್ಯಾಂಕ್‌ ಖಾತೆ ಜಪ್ತಿ ಮಾಡಲು ಸ್ವತಂತ್ರರಾಗಿದ್ದಾರೆ ಎಂದೂ ತಿಳಿಸಿತು.

ಜತೆಗೆ, ‘ಗೃಹ ಸಚಿವಾಲಯ, ದೂರಸಂಪರ್ಕ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೂಡ ಈ ಸಂಬಂಧ ತಮ್ಮ ಅಭಿಪ್ರಾಯಗಳನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮೂಲಕ ಸಲ್ಲಿಸಬೇಕು’ ಎಂದು ಅದು ಹೇಳಿತು.

ತನಿಖೆಗೆ ಮುಕ್ತ ಅವಕಾಶ:

ಡಿಜಿಟಲ್‌ ಅರೆಸ್ಟ್‌ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿತು.

ಬ್ಯಾಂಕ್‌ ಖಾತೆಗಳನ್ನು ಡಿಜಿಟಲ್‌ ಹಗರಣದ ಉದ್ದೇಶದಿಂದ ತೆರೆಯಲಾಗಿದ್ದರೆ ಅಂಥ ಪ್ರಕರಣಗಳಲ್ಲಿ 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ಸಿಬಿಐ ನೇರವಾಗಿ ತನಿಖೆ ನಡೆಸಬಹುದು. ಸೈಬರ್‌ ಖದೀಮರು ಇನ್ನೊಬ್ಬರ ಹೆಸರಲ್ಲಿ ಬ್ಯಾಂಕ್‌ ಖಾತೆ ತೆರೆದು ಹಣ ವರ್ಗಾವಣೆ ಮಾಡಿಕೊಳ್ಳುವ ಕಾರಣ ಹಣದ ಮೂಲ ಪತ್ತೆಗೆ ತನಿಖಾ ಸಂಸ್ಥೆಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಹಗರಣದಲ್ಲಿ ಬ್ಯಾಂಕ್‌ ಅಧಿಕಾರಿಗಳ ಪಾತ್ರವನ್ನೂ ಬಯಲಿಗೆಳೆಯಬೇಕು ಎಂದಿತು.

ಇಂಟರ್‌ಪೋಲ್‌ ನೆರವಿಗೆ ಅ‍ವಕಾಶ:

ಹೆಚ್ಚಿನ ವಂಚಕರು ಹೊರದೇಶಗಳಲ್ಲಿ ಕೂತು ಈ ಸೈಬರ್‌ ಅಕ್ರಮ ನಡೆಸುತ್ತಿರುವವರ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಇಂಟರ್‌ಪೋಲ್‌ನ ನೆರವು ಪಡೆಯುವಂತೆಯೂ ಸಿಬಿಐಗೆ ಕೋರ್ಟ್‌ ನಿರ್ದೇಶನ ನೀಡಿತು.

ಸೈಬರ್‌ ಕ್ರೈಂ ಸಮನ್ವಯಕ್ಕೆ ಕೇಂದ್ರ:

ಇಂಥ ಆನ್‌ಲೈನ್‌ ಅಕ್ರಮಗಳಿಗೆ ಕಡಿವಾಣ ಹಾಕಲು ಸಿಬಿಐ ಜತೆಗೆ ಹೆಚ್ಚಿನ ಸಮನ್ವಯಕ್ಕಾಗಿ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳು ಪ್ರಾದೇಶಿಕ ಮತ್ತು ರಾಜ್ಯ ಸೈಬರ್‌ ಕ್ರೈಂ ಸಮನ್ವಯ ಕೇಂದ್ರಗಳನ್ನು ಸ್ಥಾಪಿಸುವಂತೆಯೂ ಸೂಚಿಸಿತು.

ಸಿಮ್‌ ದುರ್ಬಳಕೆ ತಡೆಗೆ ಕ್ರಮ:

ಒಂದೇ ಹೆಸರಲ್ಲಿ ಹಲವು ಸಿಮ್‌ ವಿತರಿಸುವುದರಿಂದ ಆಗುವ ಅಪಾಯವನ್ನೂ ಗಂಭೀರವಾಗಿ ಪರಿಗಣಿಸಿದ ಕೋರ್ಟ್‌, ಈ ಸಂಬಂಧ ದೂರಸಂಪರ್ಕ ಇಲಾಖೆಗೆ ಸಿಮ್‌ಕಾರ್ಡ್‌ಗಳ ದುರ್ಬಳಕೆ ತಡೆಯಲು ಯಾವ ರೀತಿಯ ಕ್ರಮಕೈಗೊಳ್ಳಬಹುದು ಎಂಬ ಪ್ರಸ್ತಾಪ ಸಲ್ಲಿಸಲೂ ಸೂಚಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಂಸತ್‌ ಭವನಕ್ಕೆ ನಾಯಿ ಜತೆ ಬಂದ ರೇಣುಕಾ!
ಸ್ಮಾರ್ಟ್‌ಫೋನ್‌ಗಳಿಗೆ ‘ಸಂಚಾರ್‌ ಸಾಥಿ’ ಆ್ಯಪ್‌ ಕಡ್ಡಾಯ