ಕೇಜ್ರಿಗೆ ಜಾಮೀನು, ಬಿಡುಗಡೆ ಭಾಗ್ಯವಿಲ್ಲ

KannadaprabhaNewsNetwork | Updated : Jul 13 2024, 06:50 AM IST

ಸಾರಾಂಶ

ರಾಜಧಾನಿ ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.)ದ ತನಿಖೆಗೆ ಗುರಿಯಾಗಿರುವ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಪರಮೋಚ್ಚ ನಾಯಕ ಅರವಿಂದ ಕೇಜ್ರಿವಾಲ್‌ ಅವರಿಗೆ ಶುಕ್ರವಾರ ಸುಪ್ರೀಂಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

 ನವದೆಹಲಿ :  ರಾಜಧಾನಿ ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.)ದ ತನಿಖೆಗೆ ಗುರಿಯಾಗಿರುವ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಪರಮೋಚ್ಚ ನಾಯಕ ಅರವಿಂದ ಕೇಜ್ರಿವಾಲ್‌ ಅವರಿಗೆ ಶುಕ್ರವಾರ ಸುಪ್ರೀಂಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಇದೇ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಕೇಜ್ರಿವಾಲ್‌ ಅವರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ.

ಇ.ಡಿ. ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನ್ಯಾ। ಸಂಜೀವ್‌ ಖನ್ನಾ ಹಾಗೂ ನ್ಯಾ। ದೀಪಂಕರ್‌ ದತ್ತಾ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ, ತಮ್ಮ ಬಂಧನದ ಸಿಂಧುತ್ವ ಪ್ರಶ್ನಿಸಿರುವ ಕೇಜ್ರಿ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದೆ.

ಮತ್ತೊಂದೆಡೆ, ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್‌ ಅವರ ಅವಧಿಯನ್ನು ದೆಹಲಿಯ ವಿಶೇಷ ನ್ಯಾಯಾಲಯ ಶುಕ್ರವಾರ ಜು.25ರವರೆಗೂ ವಿಸ್ತರಣೆ ಮಾಡಿದೆ.

ಕಚೇರಿ ಭೇಟಿ, ಸಹಿ ನಿಷಿದ್ಧ:

ಅಬಕಾರಿ ಹಗರಣ ಸಂಬಂಧ ಹಲವು ಸಮನ್ಸ್‌ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಮಾರ್ಚ್‌ನಲ್ಲಿ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದರು. ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಮೇ 10ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆಗ ವಿಧಿಸಲಾಗಿದ್ದ ಷರತ್ತುಗಳೇ ಈಗಲೂ ಅನ್ವಯವಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆ ಪ್ರಕಾರ, ಕೇಜ್ರಿವಾಲ್‌ ಅವರು ಮಧ್ಯಂತರ ಜಾಮೀನು ಅವಧಿಯಲ್ಲಿ ದೆಹಲಿ ಸಚಿವಾಲಯಕ್ಕೆ ಹೋಗುವುದಿಲ್ಲ. ಉಪರಾಜ್ಯಪಾಲರ ಅನುಮತಿ ಪಡೆಯದೇ ಯಾವುದೇ ಕಡತಕ್ಕೂ ಸಹಿ ಹಾಕುವಂತಿಲ್ಲ.

ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ಶರಣಾಗಿದ್ದ ಕೇಜ್ರಿವಾಲ್‌ ಅವರು, ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜೂ.20ರಂದು ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್‌ ಅದಕ್ಕೆ ತಡೆ ನೀಡಿತ್ತು. ಇದೀಗ ಸುಪ್ರೀಂಕೋರ್ಟ್‌ ಜಾಮೀನು ನೀಡಿದೆ.

ಸಿಎಂ ಸ್ಥಾನ ತ್ಯಜಿಸುವಂತೆ ಕೇಜ್ರಿಗೆ ಹೇಳಲ್ಲ: ಸುಪ್ರೀಂ

ನವದೆಹಲಿ: ದೆಹಲಿ ಅಬಕಾರಿ ಹಗರಣ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂಕೋರ್ಟ್‌, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಕುರಿತು ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ.

ಕೇಜ್ರಿವಾಲ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ಹೇಳಿಕೆ ನೀಡಿದ ಪೀಠ, ‘ಅರವಿಂದ ಕೇಜ್ರಿವಾಲ್‌ ಅವರೊಬ್ಬ ಚುನಾಯಿತ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ. ಮಹತ್ವದ ಹಾಗೂ ಪ್ರಭಾವದ ಹುದ್ದೆಯನ್ನು ಹೊಂದಿದ್ದಾರೆ. ಅವರಿಗೆ ನಾವು ಯಾವುದೇ ನಿರ್ದೇಶನ ನೀಡುವುದಿಲ್ಲ. ಚುನಾಯಿತ ನಾಯಕನನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಅಥವಾ ಮುಖ್ಯಮಂತ್ರಿ ಅಥವಾ ಸಚಿವರಾಗಿ ಕಾರ್ಯನಿರ್ವಹಿಸದಂತೆ ನ್ಯಾಯಾಲಯ ನಿರ್ದೇಶನ ನೀಡಬಹುದೇ ಎಂಬ ಬಗ್ಗೆ ನಮಗೆ ಸಂದೇಹವಿದೆ. ಹೀಗಾಗಿ ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ಕೇಜ್ರಿವಾಲ್‌ ಅವರಿಗೇ ಬಿಡುತ್ತೇವೆ’ ಎಂದು ತಿಳಿಸಿದೆ.

ಯಾವುದೇ ಕಾರಣ ನೀಡದೇ ಜಾಮೀನಿಗೆ ತಡೆ ಬೇಡ: ಸುಪ್ರೀಂ

ನವದೆಹಲಿ: ನ್ಯಾಯಾಲಯಗಳು ಯಾಂತ್ರಿಕ ವಿಧಾನದಲ್ಲಿ ಹಾಗೂ ಯಾವುದೇ ಕಾರಣ ನೀಡದೇ ಆರೋಪಿಯ ಜಾಮೀನು ಆದೇಶವನ್ನು ತಡೆಹಿಡಿಯುವುದನ್ನು ನಿಲ್ಲಿಸಬೇಕು. ಅಪರೂಪದ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಆರೋಪಿಯ ಜಾಮೀನು ಆದೇಶವನ್ನು ತಡೆಹಿಡಿಯಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ತಿಳಿಸಿದೆ.ವಿಚಾರಣಾ ನ್ಯಾಯಾಲಯ ನೀಡಿದ ಜಾಮೀನು ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಪರ್ವಿಂದರ್ ಸಿಂಗ್ ಖುರಾನಾ ಸಲ್ಲಿಸಿದ ಮನವಿ ವಿಚಾರಣೆಯಲ್ಲಿ ಕೋರ್ಟ್‌ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ನ್ಯಾಯಾಲಯಗಳು ಉಗ್ರರು ಭಾಗಿಯಾಗಿರುವಂತಹ ಅಥವಾ ಇತರ ಗಂಭೀರ ಪ್ರಕರಣಗಳಲ್ಲಿ ಮಾತ್ರ ಜಾಮೀನು ಆದೇಶವನ್ನು ತಡೆಹಿಡಿಯಬೇಕು. ಸಾಧಾರಣ ಪ್ರಕರಣಗಳಲ್ಲಿ ಜಾಮೀನಿಗೆ ತಡೆ ನೀಡಿದರೆ ಸ್ವಾತಂತ್ರ್ಯವನ್ನು ನಿರ್ಬಂಧಿಸಿದಂತೆ ಎಂದು ಪೀಠ ಹೇಳಿತು.

Share this article