ವಕ್ಫ್‌: ಮಧ್ಯಂತರ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

KannadaprabhaNewsNetwork | Updated : May 23 2025, 04:17 AM IST
ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಗುರುವಾರ ವಕ್ಫ್‌ ಬೈ ಕೋರ್ಟ್ಸ್‌, ವಕ್ಫ್‌ ಬೈ ಯೂಸರ್‌ ಮತ್ತು ವಕ್ಫ್‌ ಬೈ ಡೀಡ್‌ ಎಂದು ಘೋಷಿಸಲಾದ ಆಸ್ತಿಗಳನ್ನು ಡಿನೋಟಿಫೈ ಮಾಡುವ ಅಧಿಕಾರವೂ ಸೇರಿ 3 ವಿಚಾರಗಳಿಗೆ ಸಂಬಂಧಿಸಿದ ತನ್ನ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.
Follow Us

 ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಗುರುವಾರ ವಕ್ಫ್‌ ಬೈ ಕೋರ್ಟ್ಸ್‌, ವಕ್ಫ್‌ ಬೈ ಯೂಸರ್‌ ಮತ್ತು ವಕ್ಫ್‌ ಬೈ ಡೀಡ್‌ ಎಂದು ಘೋಷಿಸಲಾದ ಆಸ್ತಿಗಳನ್ನು ಡಿನೋಟಿಫೈ ಮಾಡುವ ಅಧಿಕಾರವೂ ಸೇರಿ 3 ವಿಚಾರಗಳಿಗೆ ಸಂಬಂಧಿಸಿದ ತನ್ನ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.

ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ರಾಜೀವ್‌ ಧವನ್‌ ಮತ್ತು ಅಭಿಷೇಕ್‌ ಸಿಂಘ್ವಿ ಹಾಗೂ ಕೇಂದ್ರ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ವಾದವನ್ನು ಸತತ ಮೂರುದಿನಗಳಿಂದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟಿನ್‌ ಜಾರ್ಜ್‌ ಮಸಿಹ ಅವರಿದ್ದ ಪೀಠ ತನ್ನ ಮಧ್ಯಂತರ ಆದೇಶ ಕಾಯ್ದಿರಿಸಿತು.

ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರವು, ವಕ್ಫ್‌ ಎನ್ನುವುದು ಸ್ವರೂಪದಲ್ಲಿ ಜಾತ್ಯತೀತ ಪರಿಕಲ್ಪನೆಯಾಗಿದೆ. ಇದಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ವಾದಿಸಿತು.

ಈ ವೇಳೆ ಸಿಬಲ್‌ ಅವರು, ಈ ತಿದ್ದುಪಡಿ ಕಾಯ್ದೆಯು ಐತಿಹಾಸಿಕ ಕಾನೂನು ಮತ್ತು ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿದೆ. ನ್ಯಾಯಾಂಗೇತರ ಪ್ರಕ್ರಿಯೆ ಮೂಲಕ ವ್ಯವಸ್ಥಿತವಾಗಿ ವಕ್ಫ್‌ ಆಸ್ತಿಯನ್ನು ವಶಕ್ಕೆ ಪಡೆಯುವ ಸಾಧನವಾಗಿದೆ ಎಂದು ವಾದಿಸಿದರು.

ಅರ್ಜಿದಾರರ ಪರ ವಕೀಲರು ಮೂರು ಪ್ರಮುಖ ವಿಚಾರಗಳಿಗೆ ಸಂಬಂಧಿಸಿ ಮಧ್ಯಂತರ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದರು. ಅವು..

1 ವಕ್ಫ್‌ ಬೈ ಕೋರ್ಟ್‌(ನ್ಯಾಯಾಲಯದ ಮೂಲಕ), ವಕ್ಫ್‌ ಬೈ ಯೂಸರ್‌(ಹಲವು ವರ್ಷಗಳಿಂದ ವಕ್ಫ್‌ ಬಳಸುತ್ತಿದ್ದ) ಮತ್ತು ವಕ್ಫ್‌ ಬೈ ಡೀಡ್‌(ಕರಾರು ಪತ್ರ) ಮೂಲಕ ವಕ್ಫ್‌ ಆಸ್ತಿ ಎಂದು ಘೋಷಿಸಲ್ಪಟ್ಟ ಆಸ್ತಿಗಳನ್ನು ಡಿನೋಟಿಫೈ ಮಾಡುವ ಅಧಿಕಾರ.

2 ರಾಜ್ಯ ವಕ್ಫ್‌ ಬೋರ್ಡ್‌ ಮತ್ತು ಕೇಂದ್ರ ವಕ್ಫ್‌ ಕೌನ್ಸಿಲ್‌ನಲ್ಲಿ ಮುಸ್ಲಿಮರೇತರರಿಗೆ ಅವಕಾಶ ನೀಡುವುದು.

3 ಒಂದು ವೇಳೆ ಜಿಲ್ಲಾಧಿಕಾರಿಗಳ ತನಿಖೆ ವೇಳೆ ವಕ್ಫ್‌ ಭೂಮಿಯು ಸರ್ಕಾರಿ ಭೂಮಿಯೆಂದು ತಿಳಿದು ಬಂದರೆ ಆ ಆಸ್ತಿಯನ್ನು ವಕ್ಫ್‌ ಆಸ್ತಿಯೆಂದು ಪರಿಗಣಿಸಲ್ಲ ಎಂಬ ನಿಯಮಕ್ಕೆ ಸಂಬಂಧಿಸಿ ಅರ್ಜಿದಾರರು ತಡೆ ನೀಡುವಂತೆ ಕೋರಿದ್ದಾರೆ.

ವಕ್ಫ್‌ ತಿದ್ದುಪಡಿ ವಿಧೇಯಕವನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಏ.25ರಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ನ್ಯಾಯಾಲಯಕ್ಕೆ 1,332 ಪುಟಗಳ ಅಫಿಡವಿಟ್‌ ಸಲ್ಲಿಸಿತ್ತು. ಜತೆಗೆ, ಈ ಕಾಯ್ದೆಗೆ ತಡೆ ನೀಡದಂತೆ ಮನವಿ ಮಾಡಿತ್ತು. ಏ.5ರಂದು ಕೇಂದ್ರ ಸರ್ಕಾರವು ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ನೋಟಿಫೈ ಮಾಡಿತ್ತು.

Read more Articles on