ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ ಬದ್ಧ : ಸುಪ್ರೀಂ

KannadaprabhaNewsNetwork |  
Published : Jul 11, 2025, 01:47 AM ISTUpdated : Jul 11, 2025, 04:52 AM IST
ಬಿಹಾರ | Kannada Prabha

ಸಾರಾಂಶ

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ತರಾತುರಿಯಲ್ಲಿ ನಡೆಸಲುದ್ದೇಶಿಸಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಲು ನಿರಾಕರಿಸಿದೆ.

ನವದೆಹಲಿ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ತರಾತುರಿಯಲ್ಲಿ ನಡೆಸಲುದ್ದೇಶಿಸಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಲು ನಿರಾಕರಿಸಿದೆ. ಆಯೋಗದ ಕಾರ್ಯ ಸಂವಿಧಾನಬದ್ಧವಾಗಿದೆ ಎಂದಿರುವ ಕೋರ್ಟ್, ಈ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಸಮಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.

ಇದೇ ವೇಳೆ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಸಲ್ಲಿಸಬೇಕಿರುವ 11 ದಾಖಲೆಗಳ ಪಟ್ಟಿಗೆ ಆಧಾರ್‌ಕಾರ್ಡ್‌, ಪಡಿತರ ಚೀಟಿ ಮತ್ತು ವೋಟರ್‌ ಐಡಿಗಳನ್ನು ಸೇರಿಸುವಂತೆಯೂ ಆಯೋಗಕ್ಕೆ ಸೂಚಿಸಿದೆ. ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ। ಸುಧಾಂಶು ಧುಲಿಯಾ ಮತ್ತು ಜೋಯ್‌ಮಲ್ಯಾ ಬಗಾಚಿ ಅವರಿದ್ದ ಪೀಠ ಈ ನಿರ್ದೇಶನ ನೀಡಿತು.

‘ನಾವು ಆಯೋಗದ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿಲ್ಲ. ಆಯೋಗದ ಕಾರ್ಯವನ್ನು ತಡೆಯುವ ಉದ್ದೇಶವೂ ನಮಗಿಲ್ಲ. ಯಾಕೆಂದರೆ ಇದು ಸಂವಿಧಾನಬದ್ಧವಾಗಿದೆ’ ಎಂದು ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿಗೆ ತಿಳಿಸಿತು.

ಇದೇ ವೇಳೆ 10 ರಾಜಕೀಯ ಪಕ್ಷಗಳು ಸೇರಿ ಯಾವುದೇ ಅರ್ಜಿದಾರರು ಚುನಾವಣಾ ಆಯೋಗದ ಕಾರ್ಯಕ್ಕೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿಲ್ಲ ಎಂದ ಪೀಠ, ಮುಂದಿನ ವಿಚಾರಣೆಯನ್ನು ಜು.28ಕ್ಕೆ ಮುಂದೂಡಿತು.

ಆಧಾರ್‌ ನಾಗರಿಕತ್ವದ ದಾಖಲೆ ಅಲ್ಲ:

ವಿಚಾರಣೆ ವೇಳೆ ಆಧಾರ್‌ ಕಾರ್ಡ್‌ ಅನ್ನು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನೀಡಬೇಕಿರುವ 11 ದಾಖಲೆಗಳ ಪಟ್ಟಿಯಲ್ಲಿ ಯಾಕಿಲ್ಲ ಎಂಬುದನ್ನು ಪೀಠ ಪ್ರಶ್ನಿಸಿತು. ಆಗ ಆಯೋಗದ ಪರ ವಕೀಲ ದ್ವಿವೇದಿ ಅವರು, ‘ಭಾರತದ ಪ್ರಜೆ ಅಲ್ಲದವರೂ ಆಧಾರ್‌ ಹೊಂದಬಹುದು. ಸಂವಿಧಾನದ 326ನೇ ವಿಧಿ ಪ್ರಕಾರ ಪ್ರತಿ ಮತದಾರರೂ ದೇಶದ ಪ್ರಜೆಯಾಗಿರಬೇಕು ಮತ್ತು ಆಧಾರ್‌ ಕಾರ್ಡ್‌ ಎಂಬುದು ನಾಗರೀಕತ್ವಕ್ಕೆ ದಾಖಲೆ ಅಲ್ಲ’ ಎಂದು ವಾದಿಸಿದರು.

ಆಗ ನ್ಯಾಯಮೂರ್ತಿ ಧುಲಿಯಾ, ಒಂದು ವೇಳೆ ನೀವು ನಾಗರಿಕತ್ವವನ್ನು ಪರಿಶೀಲಿಸುವುದೇ ಆಗಿದ್ದರೆ ಮೊದಲೇ ಪರಿಷ್ಕರಣೆ ಕಾರ್ಯ ಆರಂಭಿಸಬೇಕಿತ್ತು. ಈಗ ತುಂಬಾ ವಿಳಂಬವಾಗಿದೆ ಎಂದರು.

ಇದಕ್ಕೂ ಮೊದಲು ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಸಮರ್ಥಿಸಿಕೊಂಡ ದ್ವಿವೇದಿ, ಕೆಲ ಅರ್ಜಿದಾರರೇ 2003ರಿಂದೀಚೆಗೆ 1.1 ಕೋಟಿ ಮಂದಿ ಮೃತಪಟ್ಟಿದ್ದಾರೆ. 70 ಲಕ್ಷ ಮಂದಿ ವಲಸೆ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ವಿಚಾರವೇ ವಿಶೇಷ ತೀವ್ರ ಪರಿಷ್ಕರಣೆಯ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ತಿಳಿಸಿದರು.

ಜತೆಗೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆಯೋಗವಲ್ಲದೆ ಮತ್ಯಾರು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಈಗಾಗಲೇ ಶೇ.60ರಷ್ಟು ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಿದ್ದಾರೆ. ನಾವು ಯಾವುದೇ ವ್ಯಕ್ತಿಯ ಅಭಿಪ್ರಾಯ ಆಲಿಸದೆ ಮತದಾರರ ಪಟ್ಟಿಯಿಂದ ಹೊರಗಿಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಕಳೆದ ತಿಂಗಳಷ್ಟೇ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಯ ಘೋಷಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪ್ರಶ್ನಿಸಿ ಆರ್‌ಜೆಡಿ ಸೇರಿ 10 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಮುಖಂಡರು, ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಎನ್‌ಜಿಒ ಕೂಡ ಅರ್ಜಿ ಸಲ್ಲಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ