ಹಿಂಡನ್‌ಬರ್ಗ್‌ ಆರೋಪ ಸುಳ್ಳು: ಇದು ಆಧಾರ ರಹಿತ - ಸೆಬಿ ಅಧ್ಯಕ್ಷೆ ಮಾಧವಿ ಬುಚ್‌, ಅದಾನಿ

KannadaprabhaNewsNetwork |  
Published : Aug 12, 2024, 01:31 AM ISTUpdated : Aug 12, 2024, 05:10 AM IST
 ಸೆಬಿ ಅಧ್ಯಕ್ಷೆ, ಅದಾನಿ | Kannada Prabha

ಸಾರಾಂಶ

  ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹಕ್ಕೆ ಸೇರಿದ ಬೇನಾಮಿ ವಿದೇಶಿ ಕಂಪನಿಗಳಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಕ ಮಂಡಳಿ (ಸೆಬಿ) ಮುಖ್ಯಸ್ಥೆಯ ಹೂಡಿಕೆಯಿದೆ’ ಎಂದು ಅಮೆರಿಕದ ಖಾಸಗಿ ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರೀಸರ್ಚ್‌’ ಆರೋಪ ಮಾಡಿದ ಬೆನ್ನಲ್ಲೇ ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ.

 ನವದೆಹಲಿ :  ‘ಭಾರತದ ನಂ.1 ಶ್ರೀಮಂತ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹಕ್ಕೆ ಸೇರಿದ ಬೇನಾಮಿ ವಿದೇಶಿ ಕಂಪನಿಗಳಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಕ ಮಂಡಳಿ (ಸೆಬಿ) ಮುಖ್ಯಸ್ಥೆಯ ಹೂಡಿಕೆಯಿದೆ’ ಎಂದು ಅಮೆರಿಕದ ಖಾಸಗಿ ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರೀಸರ್ಚ್‌’ ಆರೋಪ ಮಾಡಿದ ಬೆನ್ನಲ್ಲೇ ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ.

‘ಇದು ಬಹುದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸುವುದು ಅನಿವಾರ್ಯ’ ಎಂದು ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಆದರೆ, ಆರೋಪವನ್ನು ತಳ್ಳಿಹಾಕಿರುವ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌, ‘ಇದು ಆಧಾರರಹಿತ ಹಾಗೂ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಮಾಡಿರುವ ಆರೋಪ’ ಎಂದು ಹೇಳಿದ್ದಾರೆ. ಅದಾನಿ ಸಮೂಹ ಕೂಡ ಸ್ಪಷ್ಟನೆ ನೀಡಿದ್ದು, ‘ಆಯ್ದ ಮಾಹಿತಿ ಹರಿಬಿಟ್ಟು ದುರುದ್ದೇಶಪೂರಿತವಾಗಿ ಆರೋಪ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದೆ. ಬಿಜೆಪಿ ಕೂಡ, ‘ದೇಶದ ಆರ್ಥಿಕತೆ ಹಳಿ ತಪ್ಪಿಸಲು ಕಾಂಗ್ರೆಸ್‌ ನಡೆಸಿರುವ ವ್ಯವಸ್ಥಿತ ಷಡ್ಯಂತ್ರ’ ಎಂದಿದೆ.

ಹಿಂಡನ್‌ಬರ್ಗ್‌ ಮಾಡಿದ ಆರೋಪ:

ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮಗಳನ್ನು ಎಸಗಿದೆ ಎಂದು ಹಿಂಡನ್‌ಬರ್ಗ್‌ ಸಂಸ್ಥೆ ಕಳೆದ ವರ್ಷ ಮೊದಲ ಬಾರಿ ಆರೋಪಿಸಿತ್ತು. ಅದು ದೊಡ್ಡ ವಿವಾದವಾಗಿತ್ತು. ಬಳಿಕ ಪ್ರಕರಣ ಸುಪ್ರೀಂಕೋರ್ಟ್‌ವರೆಗೂ ಹೋಗಿ, ಅಲ್ಲಿ ಅದಾನಿಗೆ ಕ್ಲೀನ್‌ಚಿಟ್‌ ಸಿಕ್ಕಿತ್ತು. ಸೆಬಿ ಕೂಡ ಅದಾನಿಯನ್ನು ಆರೋಪಮುಕ್ತಗೊಳಿಸಿತ್ತು. ಇದೀಗ ಹಿಂಡನ್‌ಬರ್ಗ್‌ ಶನಿವಾರ ಮತ್ತೊಂದು ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ‘ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ಹಾಗೂ ಅವರ ಪತಿ ಧವಳ್‌ ಬುಚ್‌ ಅವರು ಗೌತಮ್‌ ಅದಾನಿಯ ಸಹೋದರ ವಿನೋದ್‌ ಅದಾನಿಯ ಜೊತೆಗೆ ನಂಟಿರುವ ಬರ್ಮುಡಾ ಮತ್ತು ಮಾರಿಷಸ್‌ನ ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ವರ್ಷದ ಆರೋಪದಿಂದ ಅದಾನಿಯನ್ನು ಸೆಬಿ ಆರೋಪಮುಕ್ತ ಮಾಡಿರಬಹುದು’ ಎಂದು ಆರೋಪಿಸಿದೆ. 

ಆಧಾರರಹಿತ- ಮಾಧವಿ ಬುಚ್‌:

ಹಿಂಡನ್‌ಬರ್ಗ್‌ ವರದಿಗೆ ಸ್ಪಷ್ಟನೆ ನೀಡಿರುವ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌, ‘ಇದು ಆಧಾರರಹಿತ ಮತ್ತು ನಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮಾಡಿದ ಸುಳ್ಳು ಆರೋಪವಾಗಿದೆ. ನಮ್ಮ ಬದುಕು ಹಾಗೂ ಹಣಕಾಸು ವ್ಯವಹಾರ ತೆರೆದ ಪುಸ್ತಕವಾಗಿದೆ. ಹಿಂಡನ್‌ಬರ್ಗ್‌ ವಿರುದ್ಧ ಸೆಬಿ ಕ್ರಮ ಕೈಗೊಂಡಿತ್ತು. ನೋಟಿಸ್‌ ಕೂಡ ನೀಡಿತ್ತು. ಆದರೆ ನೋಟಿಸ್‌ಗೆ ಉತ್ತರಿಸದೇ, ಹಾದಿ ತಪ್ಪಿಸಲು ಆ ಸಂಸ್ಥೆಯೇ ಈಗ ನಮ್ಮ ಮೇಲೆ ಆರೋಪ ಮಾಡುತ್ತಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ.

ಅಲ್ಲದೆ, ಮತ್ತೊಂದು ಪ್ರತ್ಯೇಕ ಹೇಳಿಕೆ ನೀಡಿರುವ ಮಾಧವಿ ಬುಚ್‌ ಹಾಗೂ ಧವಳ್‌ ಬುಚ್, ‘ಹಿಂಡನ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ ಐಐಎಫ್‌ಎಲ್‌ ನಿಧಿಯಲ್ಲಿ, 2015ರಲ್ಲಿ ನಾವು ಸಿಂಗಾಪುರದಲ್ಲಿ ವಾಸಿಸುತ್ತಿದ್ದಾಗ ಖಾಸಗಿ ವ್ಯಕ್ತಿಗಳಾಗಿ ಹೂಡಿಕೆ ಮಾಡಿದ್ದವು. ಅದು ಮಾಧವಿ ಬುಚ್‌ ಸೆಬಿ ಸೇರುವ 2 ವರ್ಷ ಮೊದಲಿನದಾಗಿತ್ತು. ಸೆಬಿಗೂ ಈ ವ್ಯವಹಾರಕ್ಕೂ ಸಂಬಂಧವಿಲ್ಲ. ಮಾಧವಿ ಸೆಬಿ ಮುಖ್ಯಸ್ಥೆ ಆದ ಬಳಿಕ ಈ ವ್ಯಾವಹಾರಿಕ ನಂಟು ಕಡಿದುಕೊಳ್ಳಲಾಯಿತು’ ಎಂದಿದ್ದಾರೆ.

ದುರುದ್ದೇಶಪೂರಿತ ಆರೋಪ-ಅದಾನಿ:

‘ಹಿಂಡನ್‌ಬರ್ಗ್‌ ಸಂಸ್ಥೆ ಮಾಡಿದ ಆರೋಪ ಆಧಾರರಹಿತವಾದುದು. ಇದು ಆಯ್ದ ಸಾರ್ವಜನಿಕ ಮಾಹಿತಿಯನ್ನು ತಿರುಚಿ ಬಿಡುಗಡೆ ಮಾಡಿದ ವರದಿಯಾಗಿದೆ. ಅದಾನಿ ಸಮೂಹಕ್ಕೂ ಸೆಬಿ ಮುಖ್ಯಸ್ಥೆ ಅಥವಾ ಅವರ ಪತಿಗೂ ಯಾವುದೇ ವಾಣಿಜ್ಯ ಸಂಬಂಧವಿಲ್ಲ. ಹಿಂದೆಯೂ ಇದೇ ರೀತಿ ಆರೋಪ ಮಾಡಿ ಹಿಂಡನ್‌ಬರ್ಗ್‌ ಮುಖಭಂಗಕ್ಕೆ ಈಡಾಗಿತ್ತು’ ಎಂದು ಅದಾನಿ ಸಮೂಹ ಭಾನುವಾರ ಸ್ಪಷ್ಟನೆ ನೀಡಿದೆ.

ಜೆಪಿಸಿ ತನಿಖೆ ನಡೆಸಿ-ಖರ್ಗೆ, ರಾಹುಲ್‌:

‘ಸೆಬಿ ಮುಖ್ಯಸ್ಥೆಯ ವಿರುದ್ಧ ಹಿಂಡನ್‌ಬರ್ಗ್‌ ಆರೋಪ ಬಹಳ ಗಂಭೀರವಾದುದು. ಇದರ ಹಿಂದೆ ದೊಡ್ಡ ಹಗರಣವಿದೆ. ಈ ಬಗ್ಗೆ ಜಂಟಿ ಸದನ ಸಮಿತಿಯ ತನಿಖೆ ನಡೆಯುವವರೆಗೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಪ್ತರನ್ನು ರಕ್ಷಿಸುತ್ತಾ, ಕಳೆದ ಏಳು ದಶಕಗಳಲ್ಲಿ ಬೆಳೆದು ನಿಂತ ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುತ್ತಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ತನ್ಮೂಲಕ ಜೆಪಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತನಾಡಿ, ‘ಏಕೆ ಇನ್ನೂ ಸೆಬಿ ಅಧ್ಯಕ್ಷೆ ರಾಜೀನಾಮೆ ನೀಡಿಲ್ಲ? ಅದಾನಿ, ಮೋದಿ, ಸೆಬಿ ಎಲ್ಲರೂ ಶಾಮೀಲಾದಂತಿದೆ. ಅದಕ್ಕೇ ಜೆಪಿಸಿ ತನಿಖೆಗೆ ಮೋದಿ ಹಿಂದೇಟು ಹಾಕಿದ್ದಾರೆ. ಸುಪ್ರೀಂ ಕೋರ್ಟ್‌ ಈ ವಿಷಯವನ್ನು ಹೊಸದಾಗಿ ಕೈಗೆತ್ತಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಆಮ್‌ ಆದ್ಮಿ ಪಕ್ಷ ಕೂಡ ಪ್ರತಿಕ್ರಿಯೆ ನೀಡಿದ್ದು, ’ಹಿಂಡನ್‌ಬರ್ಗ್‌ನ ವರದಿಯನ್ನು ಸುಪ್ರೀಂಕೋರ್ಟ್‌ ಗಮನಿಸಬೇಕು’ ಎಂದು ಆಗ್ರಹಿಸಿದೆ.

ದೇಶದ ವಿತ್ತ ವ್ಯವಸ್ಥೆ ಹಳಿತಪ್ಪಿಸಲು ಯತ್ನ-ಆರ್‌ಸಿ:

‘ಹಿಂಡನ್‌ಬರ್ಗ್‌ ವರದಿ ವಿಶ್ವಾಸಾರ್ಹವಲ್ಲ. ಕಳೆದ 10 ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ಇಂತಹುದೇ ರಾಜಕೀಯ ಸುಳ್ಳುಗಳನ್ನು ಆಶ್ರಯಿಸಿ ಆರೋಪ ಮಾಡುವ ಕೆಲಸದಲ್ಲಿ ತೊಡಗಿದೆ. ಈಗ ವಿದೇಶಿ ಸಂಸ್ಥೆಯ ನೆರವು ಪಡೆದು ದೇಶದ ಹಣಕಾಸು ವ್ಯವಸ್ಥೆಯನ್ನು ಹಳಿತಪ್ಪಿಸಲು ಯತ್ನಿಸುತ್ತಿದೆ’ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರತಿಕ್ರಿಯೆ ನೀಡಿದ್ದಾರೆ.

ತಾಳ್ಮೆಯಿಂದ ಇರಿ: ಹೂಡಿಕೆದಾರರಿಗೆ ಸೆಬಿ

ಮುಂಬೈ: ಹಿಂಡನ್‌ಬರ್ಗ್‌ ಆರೋಪದ ಬಗ್ಗೆ ಷೇರುಪೇಟೆ ನಿಯಂತ್ರಕ ಸೆಬಿ ಪ್ರತ್ಯೇಕ ಹೇಳಿಕೆ ನೀಡಿ, ‘ಹೂಡಿಕೆದಾರರು ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡದೇ ತಾಳ್ಮೆಯಿಂದ ಇರಬೇಕು’ ಎಂದು ಹೇಳಿದೆ.

‘ಅದಾನಿ ವಿರುದ್ಧದ ಎಲ್ಲ ಆರೋಪಗಳ ನಿಷ್ಪಕ್ಷ ತನಿಖೆ ನಡೆದಿದೆ. ಈವರೆಗೆ 25 ಆರೋಪಗಳ ತನಿಖೆ ನಡೆದಿದ್ದು, ಕೊನೆಯ ಹಾಗೂ 26ನೇ ಆರೋಪದ ತನಿಖೆ ಮಾಡಿದೆ. ಬುಚ್‌ ಅವರು ಹಿತಾಸಕ್ತಿಯ ವೈರುಧ್ಯ ಬಂದಾಗ ಅಂಥ ವಿಷಯಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ತಾಳ್ಮೆಯಿಂದ ಇರಬೇಕು’ ಎಂದಿದೆ.

ಹಿಂಡನ್‌ಬರ್ಗ್‌ ಇಂಥ ಆರೋಪ ಮಾಡಿ ಕೆಲವು ಅದಾನಿ ವಿರೋಧಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಶಂಕೆ ಮೊದಲಿನಿಂದಲೂ ಇದೆ. ಹೀಗಾಗಿ ಸೆಬಿ ಈ ಸ್ಪಷ್ಟನೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!