ಖಾಸಗಿತನ ಕಾಪಾಡಲು ಆಗದಿದ್ರೆ ದೇಶ ಬಿಡಿ : ವಾಟ್ಸಪ್‌ಗೆ ಸುಪ್ರೀಂ!

KannadaprabhaNewsNetwork |  
Published : Feb 04, 2026, 02:00 AM ISTUpdated : Feb 04, 2026, 06:03 AM IST
Supreme Court warning to Whatsapp

ಸಾರಾಂಶ

ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) 213.14 ಕೋಟಿ ರು. ದಂಡ ವಿಧಿಸಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಮಂಗಳವಾರ ಮೆಟಾ ಪ್ಲಾಟ್‌ಫಾರ್ಮ್ಸ್‌ ಇಂಕ್‌ ಮತ್ತು ವಾಟ್ಸಪ್‌ ವಿರುದ್ಧ ಹರಿಹಾಯ್ದಿದೆ.

 ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) 213.14 ಕೋಟಿ ರು. ದಂಡ ವಿಧಿಸಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಮಂಗಳವಾರ ಮೆಟಾ ಪ್ಲಾಟ್‌ಫಾರ್ಮ್ಸ್‌ ಇಂಕ್‌ ಮತ್ತು ವಾಟ್ಸಪ್‌ ವಿರುದ್ಧ ಹರಿಹಾಯ್ದಿದೆ. ಡೇಟಾ ಹಂಚಿಕೆ ಹೆಸರಿನಲ್ಲಿ ನಾಗರಿಕರ ಖಾಸಗಿತನದ ಹಕ್ಕಿನ ಜತೆಗೆ ಆಟವಾಡುವಂತಿಲ್ಲ. ನಿಮಗೆ ಖಾಸಗಿತನ ಕಾಪಾಡಲು ಆಗದಿದ್ದರೆ ದೇಶ ಬಿಟ್ಟು ಹೊರಡಿ ಎಂದು ಎಚ್ಚರಿಸಿದೆ.

ಫೆ.9ರಂದು ಮೇಲ್ಮನವಿ ಸಂಬಂಧ ಮಧ್ಯಂತರ ಆದೇಶ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾ. ಜೋಯ್‌ಮಲ್ಯ ಬಾಗ್ಚಿ ಹಾಗೂ ನ್ಯಾ. ವಿಪುಲ್‌ ಎಂ. ಪಂಚೋಲಿ ಅವರ ಪೀಠವು ಫೆ.9ರಂದು ಮೇಲ್ಮನವಿ ಸಂಬಂಧ ಮಧ್ಯಂತರ ಆದೇಶ ಹೊರಡಿಸುವುದಾಗಿ ತಿಳಿಸಿದೆ.

‘ಡೇಟಾ ಹಂಚಿಕೆ ಹೆಸರಲ್ಲಿ ಈ ದೇಶದ ನಾಗರಿಕರ ಖಾಸಗಿತನದ ಹಕ್ಕಿನ ಜತೆ ಆಟವಾಡುವಂತಿಲ್ಲ. ನಾಗರಿಕರ ಖಾಸಗಿತನದ ಹಕ್ಕು ಗೌರವಿಸುವುದಾಗಿ ಗ್ಯಾರಂಟಿ ನೀಡದ ಹೊರತು ನೀವು ಒಂದೇ ಒಂದು ಪದವನ್ನೂ ಹಂಚಿಕೊಳ್ಳಲು ನಾವು ಬಿಡುವುದಿಲ್ಲ’ ಎಂದು ವಿಚಾರಣೆ ವೇಳೆ ಕಂಪನಿಗಳಿಗೆ ಕೋರ್ಟ್‌ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?:

ವಾಟ್ಸಪ್‌ ಕಂಪನಿ ತನ್ನ ಬಳಕೆದಾರರಿಗೆ ಅವರ ಡೇಟಾಗಳನ್ನು ಮೆಟಾ ಕಂಪನಿಗಳ ಜತೆಗೆ ಹಂಚಿಕೊಳ್ಳುವ ಅಥವಾ ವಾಟ್ಸಪ್‌ನಿಂದಲೇ ಹೊರಗುಳಿಯುವ ಆಯ್ಕೆ ನೀಡಿದೆ. ಬಳಕೆದಾರರು ಅನ್ಯ ಮಾರ್ಗವಿಲ್ಲದೆ ಮಾಹಿತಿ ಹಂಚಿಕೆಯ ಆಯ್ಕೆಗೆ ಒಪ್ಪಿಗೆ ಸೂಚಿಸಲೇಬೇಕಿದೆ. ಈ ಸಂಬಂಧ ಸಿಸಿಐ ವಿಚಾರಣೆ ನಡೆಸಿ ಮೆಟಾ ಮತ್ತು ವಾಟ್ಸಪ್‌ ವಿರುದ್ಧ 213 ಕೋಟಿ ರು. ದಂಡ ವಿಧಿಸಿತ್ತು. ಸಿಸಿಐ ಆದೇಶವನ್ನು ರಾಷ್ಟ್ರೀಯ ಕಂಪನಿ ಮೇಲ್ಮನವಿ ನ್ಯಾಯಮಂಡಳಿಯೂ ಎತ್ತಿ ಹಿಡಿದು, ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸಂಸ್ಥೆ ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿತ್ತು. ಜತೆಗೆ, ಜಾಹೀರಾತಿನ ಉದ್ದೇಶಕ್ಕೆ ಭಾಗಶಃ ಡೇಟಾ ಹಂಚಿಕೆ ಮಾಡಲು ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಇದೀಗ ಕಂಪನಿ ಸುಪ್ರೀಂ ಕೋರ್ಟ್‌ ಕದ ತಟ್ಟಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ