ಸಿಇಸಿ ಆಯ್ಕೆ ಜಟಾಪಟಿ

KannadaprabhaNewsNetwork | Published : Feb 19, 2025 12:45 AM

ಸಾರಾಂಶ

ಚುನಾವಣಾ ಆಯುಕ್ತರ ಆಯ್ಕೆ ಸಮಿತಿ ಬಗ್ಗೆ 2023ರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ ಬುಧವಾರ ವಿಚಾರಣೆ ನಡೆಸಲಿದೆ.

ನವದೆಹಲಿ: ಚುನಾವಣಾ ಆಯುಕ್ತರ ಆಯ್ಕೆ ಸಮಿತಿ ಬಗ್ಗೆ 2023ರಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ ಬುಧವಾರ ವಿಚಾರಣೆ ನಡೆಸಲಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಸಮಿತಿಗಳ ಮೂಲಕವೇ ಚುನಾವಣ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕ ಮಾಡುವಂತೆ ಸ್ವತಃ ಸುಪ್ರೀಂಕೋರ್ಟ್‌ ಸೂಚಿಸಿದ್ದರೂ, ಸಿಜೆಐ ಹೊರಗಿಟ್ಟು ಆಯ್ಕೆ ಸಮಿತಿ ರಚಿಸಲಾಗಿದೆ ಎಂದು ಆರೋಪಿಸಿ ಸರ್ಕಾರೇತರ ಸಂಘಟನೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ.

==

ನೂತನ ಸಿಇಸಿಯಾಗಿ ಇಂದು ಜ್ಞಾನೇಶ್‌ ಅಧಿಕಾರ ಸ್ವೀಕಾರನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರ ಅವಧಿ ಮಂಗಳವಾರ ಮುಕ್ತಾಯವಾಯಿತು. ನೂತನ ಸಿಇಸಿಯಾಗಿ ಆಯ್ಕೆಯಾಗಿರುವ ಜ್ಞಾನೇಶ್‌ ಕುಮಾರ್‌ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಇವರ ಅವಧಿ 2029ರ ಜ.26ರ ವರೆಗೆ ಇರಲಿದೆ. ಈ ನಡುವೆ ಜ್ಞಾನೇಶ್‌ ಅವರ ಜಾಗಕ್ಕೆ 1989ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ವಿವೇಕ್‌ ಜೋಶಿ ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದಾರೆ.

ಈ ಹಿಂದಿನ ನೀತಿಯ ಅನ್ವಯ ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಸಮಿತಿ ಇಸಿ ಮತ್ತು ಸಿಇಸಿಗಳ ನೇಮಕ ಮಾಡುತ್ತಿತ್ತು. ಆದರೆ 2023ರಲ್ಲಿ ಕೇಂದ್ರ ಸರ್ಕಾರ ಹೊಸ ಕಾಯ್ದೆಯ ಮೂಲಕ ಪ್ರಧಾನಿ, ಲೋಕಸಭೆ ವಿಪಕ್ಷ ನಾಯಕ ಮತ್ತು ಪ್ರಧಾನಿ ಸೂಚಿಸುವ ಕೇಂದ್ರ ಸಚಿವರೊಬ್ಬರನ್ನು ಸಮಿತಿ ಸದಸ್ಯರೆಂದು ಬದಲಾವಣೆ ಮಾಡಿತ್ತು.

==

ಕರ್ನಾಟಕದ ಮಾಜಿ ರಾಜ್ಯಪಾಲೆ ರಮಾದೇವಿ ಆಯ್ಕೆ ಕೆದಕಿದ ಬಿಜೆಪಿ

ಕರ್ನಾಟಕ ರಾಜ್ಯಪಾಲೆ ಆಗಿದ್ದ ಹಾಗೂ 1990ರಲ್ಲಿ ಮೊದಲ ಮಹಿಳಾ ಮುಖ್ಯ ಚುನಾವಣಾ ಆಯುಕ್ತೆಯೂ ಆಗಿದ್ದ ವಿ.ಎಸ್‌. ರಮಾದೇವಿ ಅವರ ನೇಮಕವನ್ನು ಕೆದಕಿರುವ ಬಿಜೆಪಿ, ಮುಖ್ಯ ಚುನಾವಣಾ ಆಯುಕ್ತರಾಗಿ ಈಗ ಆಯ್ಕೆ ಆಗಿರುವ ಜ್ಞಾನೇಶ್‌ ಕುಮಾರ್‌ ಅವರ ನೇಮಕವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.ಮುಖ್ಯ ಚುನಾವಣಾ ಆಯುಕ್ತೆ ಆಗಿದ್ದ ರಮಾದೇವಿ ಅವರು ನಿವೃತ್ತಿಯ ನಂತರ 1999ರಿಂದ 2002ರವರೆಗೆ ಕರ್ನಾಟಕ ರಾಜ್ಯಪಾಲರಾದರು. ಹೀಗೆ ತಮಗೆ ಅನುಕೂಲ ಮಾಡಿಕೊಟ್ಟವರಿಗೆ ಕಾಂಗ್ರೆಸ್‌ ಆಯಕಟ್ಟಿನ ಸ್ಥಾನ ನೀಡಿತು. ಇದು ಪಕ್ಷಪಾತವಲ್ಲದೇ ಮತ್ತೇನು ಎಂದು ಬಿಜೆಪಿ ವಕ್ತಾರ ಅಮಿತ್‌ ಮಾಳವೀಯ ಪ್ರಶ್ನಿಸಿದ್ದಾರೆ.

‘ಇನ್ನು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಕೆವಿಕೆ ಸುರೇಂದ್ರನ್‌ ಅವರಿಗೆ ಪದ್ಮಪ್ರಶಸ್ತಿ ಹಾಗೂ ಕಾನೂನು ಆಯೋಗದ ಮುಖ್ಯಸ್ಥ ಹುದ್ದೆ ನೀಡಲಾಯಿತು. ಟಿ.ಎನ್‌. ಶೇಷನ್‌ ಅವರಿಗೆ ಕಾಂಗ್ರೆಸ್‌ನಿಂದ 1996ರಲ್ಲಿ ಟಿಕೆಟ್‌ ನೀಡಲಾಗಿತ್ತು. ಎಂ.ಎಸ್‌. ಗಿಲ್‌ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ಕೇಂದ್ರ ಮಂತ್ರಿ ಮಾಡಲಾಗಿತ್ತು. ಜೆ.ಎಂ. ಲಿಂಗ್ಡೋ ಕಾಂಗ್ರೆಸ್‌ ಸೇರಿದ್ದರು. ಎನ್‌. ಗೋಪಾಲಸ್ವಾಮಿ ಅವರಿಗೆ ಪದ್ಮಭೂಷಣ ನೀಡಲಾಗಿತ್ತು. ಈ ರೀತಿ ಆಯುಕ್ತರನ್ನು ಕಾಂಗ್ರೆಸ್‌ ತನ್ನ ಲಾಭಕ್ಕೆ ಬಳಸಿಕೊಂಡಿತ್ತು’ ಎಂದು ಅವರು ಕಿಡಿಕಾರಿದ್ದಾರೆ.

==

ಮಧ್ಯರಾತ್ರಿ ಸಿಇಸಿ ಆಯ್ಕೆ ಸಂವಿಧಾನದ ಸ್ಫೂರ್ತಿಗೆ ಮಾಡಿದ ಅಪಚಾರ: ರಾಹುಲ್‌

ನವದೆಹಲಿ: ಸೋಮವಾರ ತಡರಾತ್ರಿ ಭಾರತದ ಚುನಾವಣಾ ಆಯೋಗದ ಹೊಸ ಮುಖ್ಯ ಆಯುಕ್ತರಾಗಿ ಜ್ಞಾನೇಶ್‌ ಅವರನ್ನು ನೇಮಿಸಿದ್ದನ್ನು ಟೀಕಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಆಯ್ಕೆ ಪ್ರಕ್ರಿಯೆ ಸಂಬಂಧಿತ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವಾಗ, ಮಧ್ಯರಾತ್ರಿ ಹೊಸ ಆಯುಕ್ತರ ಆಯ್ಕೆ ಮಾಡಿರುವುದು ಪ್ರಧಾನಿ ಹಾಗೂ ಗೃಹ ಸಚಿವರ ಅಗೌರವಯುತ ಹಾಗೂ ಅವಿವೇಕದ ನಡೆ’ ಎಂದು ಹೇಳಿದ್ದಾರೆ.ಆಯ್ಕೆ ಸಮಿತಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್‌ ಆಗಲೂ ಮುಖ್ಯ ಆಯುಕ್ತರ ಘೋಷಣೆ ಮುಂದೂಡುವಂತೆ ಆಗ್ರಹಿಸಿದ್ದರು.

ಎಕ್ಸ್‌ ಪೋಸ್ಟ್‌ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ರಾಹುಲ್‌, ‘ಮುಖ್ಯ ಚುನಾವಣಾ ಆಯುಕ್ತರು ಹಾಗೂ ಅನ್ಯ ಆಯುಕ್ತರ ಆಯ್ಕೆಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಇರಬಾರದು. ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ತೆಗೆದುಹಾಕುವ ಮೂಲಕ ಮೋದಿ ಸರ್ಕಾರ ಲಕ್ಷಾಂತರ ಮತದಾರರ ಕಳವಳಕ್ಕೆ ಕಾರಣವಾಗಿದೆ’ ಎಂದರು.ಇದೇ ವೇಳೆ, 1949ರಲ್ಲಿ ಸಂವಿಧಾನ ಸಭೆಯಲ್ಲಿ ಸ್ವತಂತ್ರ ಚುನಾವಣಾ ಆಯೋಗ ಸ್ಥಾಪನೆಯ ಬಗ್ಗೆ ಮಾತನಾಡಿದ್ದ ಬಿ.ಆರ್‌. ಅಂಬೇಡ್ಕರ್‌ ಅವರು ಕಾರ್ಯಾಂಗದ ಹಸ್ತಕ್ಷೇಪದ ಬಗ್ಗೆ ಎಚ್ಚರಿಸಿದ್ದರು ಎಂದೂ ರಾಹುಲ್‌ ನೆನಪಿಸಿದರು. ಜೊತೆಗೆ, ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ವಿಪಕ್ಷ ನಾಯಕ ಹಾಗೂ ಮುಖ್ಯ ನ್ಯಾಯಮೂರ್ತಿ ಇರಬೇಕು ಎಂಬ ಸುಪ್ರೀಂ ಕೋರ್ಟ್‌ನ 2023ರ ಮಾ.2ರ ತೀರ್ಪನ್ನು ಉಲ್ಲೇಖಿಸುತ್ತಾ, ‘ಕೇಂದ್ರ ಸರ್ಕಾರವು ಮುಖ್ಯ ನ್ಯಾಯಮೂರ್ತಿಗಳ ಬದಲಿಗೆ ಕೇಂದ್ರ ಸಚಿವರೊಬ್ಬರನ್ನು ನೇಮಿಸಿತು’ ಎಂದರು.

Share this article