ಅಸ್ಸಾಂ ವಲಸಿಗರಿಗೆ ಭಾರತದ ನಾಗರಿಕತ್ವ ನೀಡುವ ಪೌರತ್ವ ಕಾಯ್ದೆ : ಎತ್ತಿ ಹಿಡಿದ ಸುಪ್ರೀಂ

KannadaprabhaNewsNetwork |  
Published : Oct 18, 2024, 12:10 AM ISTUpdated : Oct 18, 2024, 06:53 AM IST
ಅಸ್ಸಾಂ | Kannada Prabha

ಸಾರಾಂಶ

1966ರ ಜ.1ರಿಂದ 1971ರ ಮಾ.25ರೊಳಗೆ ಅಸ್ಸಾಂ ಪ್ರವೇಶಿಸಿದ ವಲಸಿಗರಿಗೆ ಭಾರತದ ನಾಗರಿಕತ್ವ ನೀಡುವ ಪೌರತ್ವ ಕಾಯ್ದೆಯ ಸೆಕ್ಷನ್‌ 6ಎ ಸುಪ್ರೀಂಕೋರ್ಟ್‌ನ ಕಾನೂನು ಪರೀಕ್ಷೆಯಲ್ಲಿ ಗೆದ್ದಿದೆ. 

  ನವದೆಹಲಿ : 1966ರ ಜ.1ರಿಂದ 1971ರ ಮಾ.25ರೊಳಗೆ ಅಸ್ಸಾಂ ಪ್ರವೇಶಿಸಿದ ವಲಸಿಗರಿಗೆ ಭಾರತದ ನಾಗರಿಕತ್ವ ನೀಡುವ ಪೌರತ್ವ ಕಾಯ್ದೆಯ ಸೆಕ್ಷನ್‌ 6ಎ ಸುಪ್ರೀಂಕೋರ್ಟ್‌ನ ಕಾನೂನು ಪರೀಕ್ಷೆಯಲ್ಲಿ ಗೆದ್ದಿದೆ. ಸೆಕ್ಷನ್‌ 6 ಎಯ ಸಾಂವಿಧಾನಿಕ ಸಿಂಧುತ್ವವನ್ನು ಪಂಚಸದಸ್ಯ ಸಾಂವಿಧಾನಿಕ ಪೀಠ 4:1 ಬಹುಮತದ ತೀರ್ಪಿನೊಂದಿಗೆ ಎತ್ತಿ ಹಿಡಿದಿದೆ.

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಏರ್ಪಟ್ಟಿದ್ದ ಅಸ್ಸಾಂ ಒಪ್ಪಂದ ಅಕ್ರಮ ವಲಸಿಗರ ಸಮಸ್ಯೆಗೆ ಒಂದು ರಾಜಕೀಯ ಪರಿಹಾರ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸಣ್ಣ ರಾಜ್ಯವಾದ ಅಸ್ಸಾಂಗೆ ವಲಸಿಗರ ಪ್ರವೇಶ ಹೆಚ್ಚಿನ ಪ್ರಮಾಣದಲ್ಲಿದೆ. ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವುದು ಸುದೀರ್ಘ ಪ್ರಕ್ರಿಯೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಸೆಕ್ಷನ್‌ 6ಎಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದರು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಎಂ.ಎಂ. ಸುಂದರೇಶ್‌ ಹಾಗೂ ಮನೋಜ್‌ ಮಿಶ್ರಾ ಅವರು ಮುಖ್ಯ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಅನುಮೋದಿಸಿ, ಸಂಸತ್ತು ಹಾಗೂ ವಿಧಾನಸಭೆಗಳಿಗೆ ಅಂತಹ ಕಾಯ್ದೆ ರೂಪಿಸುವ ಅಧಿಕಾರ ಇದೆ ಎಂದು ಹೇಳಿದರು. ಆದರೆ ನ್ಯಾ। ಜೆ.ಪಿ. ಪರ್ದೀವಾಲಾ ಅವರು ಮಾತ್ರ ಭಿನ್ನ ತೀರ್ಪು ನೀಡಿ, ಸೆಕ್ಷನ್‌ 6ಎ ಅಸಾಂವಿಧಾನಿಕ ಎಂದು ಘೋಷಿಸಿದರು.

ಅಸ್ಸಾಂನೊಳಕ್ಕೆ ಪ್ರವೇಶಿಸಲು ಹಾಗೂ ಪೌರತ್ವ ಪಡೆಯಲು ನಿಗದಿಪಡಿಸಿರುವ 1971ರ ಮಾ.25ರ ಗಡುವು ಸರಿ ಇದೆ ಎಂದು ಬಹುಮತದ ತೀರ್ಪು ಹೇಳಿದೆ.

ಏನಿದು ಪ್ರಕರಣ?:

ಅಕ್ರಮ ವಲಸಿಗರ ಸಮಸ್ಯೆ ಬಗ್ಗೆ ದೊಡ್ಡ ಹೋರಾಟವೇ ಅಸ್ಸಾಂನಲ್ಲಿ ನಡೆದಿತ್ತು. ಈ ಹೋರಾಟ ಅಂತ್ಯಗೊಳಿಸಲು ರಾಜೀವ್‌ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಎಎಎಸ್‌ಯು) ನಡುವೆ 1985ರಲ್ಲಿ ಒಪ್ಪಂದವೇರ್ಪಟ್ಟಿತ್ತು. ಅದರ ಪ್ರಕಾರ ಪೌರತ್ವ ಕಾಯ್ದೆಗೆ ಸೆಕ್ಷನ್‌ 6ಎ ಸೇರ್ಪಡೆ ಮಾಡಿ, ಪೌರತ್ವ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು.

1966ರ ಜ.1ರಿಂದ 1971ರ ಮಾ.25ರೊಳಗೆ ಬಂದವರನ್ನು ಗುರುತಿಸಿ ಪೌರತ್ವ ನೀಡುವುದು, ಅನಂತರ ಬಂದವರನ್ನು ಗಡೀಪಾರು ಮಾಡುವುದು ಇದರ ಉದ್ದೇಶವಾಗಿತ್ತು. ಆದರೆ 1971ರ ಬದಲು ಕಟಾಫ್‌ ವರ್ಷವನ್ನು 1951 ಎಂದು ನಿಗದಿಪಡಿಸಬೇಕು ಎಂದು ವಾದಿಸಿ ಸೆಕ್ಷನ್‌ 6ಎ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಅದರ ತೀರ್ಪು ಈಗ ಹೊರಬಿದ್ದಿದೆ.

ಬಿಹಾರದಲ್ಲಿ ಕಳ್ಳಬಟ್ಟಿ ದುರಂತಕ್ಕೆ 25 ಬಲಿ 

ಸಿವಾನ್‌/ಸರಣ್‌: ಮದ್ಯ ಮಾರಾಟ ನಿಷೇಧವಿರುವ ಬಿಹಾರದ ಸಿವಾನ್‌ ಹಾಗೂ ಸರಣ್‌ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆ ಪ್ರಕರಣ ಸಂಬಂಧ ಮತ್ತೆ 19 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ 2 ದಿನಗಳಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿದೆ.

ಈ ಪೈಕಿ ಸಿವಾನ್‌ನಲ್ಲಿ 20 ಹಾಗೂ ಸರಣ್‌ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. 

ಈ ನಡುವೆ ನಕಲಿ ಮದ್ಯ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ನಿತೀಶ್‌ ಕುಮಾರ್‌, ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇದೇ ವೇಳೆ ದುರ್ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ‘ನಕಲಿ ಮದ್ಯ ಸೇವನೆಗೆ 25 ಮಂದಿ ಸಾವನ್ನಪ್ಪಿರುವುದು ದುರದೃಷ್ಟಕರ. ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ನಿಷೇಧವಿದ್ದರೂ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿದೆ’ ಎಂದು ಕಿಡಿಕಾರಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ‘ಅವಕಾಶವಾದಿ ಡಬಲ್‌ ಎಂಜಿನ್‌ ಸರ್ಕಾರ ಬಿಹಾರದಲ್ಲಿ ಅಮಾಯಕರ ಸಾವಿಗೆ ಕಾರಣವಾಗಿದೆ’ ಎಂದು ಟೀಕಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!