ಪಾಕ್‌, ಚೀನಾ ವಿರುದ್ಧ ಮೋದಿ ಕಿಡಿ

KannadaprabhaNewsNetwork |  
Published : Sep 02, 2026, 03:00 AM IST
ಮೋದಿ | Kannada Prabha

ಸಾರಾಂಶ

ಭಯೋತ್ಪಾದನೆಗೆ ಉತ್ತೇಜನ ನೀಡುವ ಪಾಕಿಸ್ತಾನ ಮತ್ತು ವಿಸ್ತರಣಾವಾದದ ನೀತಿ ಅನುಸರಿಸುತ್ತಿರುವ ಚೀನಾದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಆ ದೇಶಗಳ ನಾಯಕರ ಎದುರೇ ವಿರೋಧ ವ್ಯಕ್ತಪಡಿಸಿದ್ದಾರೆ.

- ಉಗ್ರವಾದ ದಾಳ ಮಾಡಿಕೊಂಡವರ ವಿರುದ್ಧ ಎಸ್‌ಸಿಒ ಒಂದಾಗಬೇಕು

- ಪ್ರಾದೇಶಿಕ ಸಂಪರ್ಕದ ಯೋಜನೆ ಪ್ರಾದೇಶಿಕ ಸಮಗ್ರತೆ ಗೌರವಿಸಬೇಕು

ಬಿಷ್ಕೇಕ್‌: ಭಯೋತ್ಪಾದನೆಗೆ ಉತ್ತೇಜನ ನೀಡುವ ಪಾಕಿಸ್ತಾನ ಮತ್ತು ವಿಸ್ತರಣಾವಾದದ ನೀತಿ ಅನುಸರಿಸುತ್ತಿರುವ ಚೀನಾದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಆ ದೇಶಗಳ ನಾಯಕರ ಎದುರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಇಲ್ಲಿ ಶಾಂಘೈ ಸಹಕಾರ ಸಂಘ (ಎಸ್‌ಸಿಒ)ದ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ಭಯೋತ್ಪಾದನೆಯನ್ನು ತನ್ನ ಸರ್ಕಾರಿ ನೀತಿಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ದೇಶಗಳನ್ನು ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ಕಠಿಣವಾಗಿ ಎದುರಿಸಬೇಕು ಮತ್ತು ಉಗ್ರವಾದಕ್ಕೆ ಆರ್ಥಿಕ ನೆರವು ತಡೆಯುವಲ್ಲಿ ಯಾವುದೇ ದ್ವಂದ್ವ ನೀತಿಗಳನ್ನು ಸಹಿಸಬಾರದು ಎಂದು ಆಗ್ರಹಿಸಿದ್ದಾರೆ. ಈ ಮೂಲಕ, ಉಗ್ರಪೋಷಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಎದುರಲ್ಲೇ ಆ ದೇಶಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ ‘ಭಯೋತ್ಪಾದನೆಯು ಇಡೀ ಮಾನವಕುಲಕ್ಕೆ ಅತ್ಯಂತ ದೊಡ್ಡ ಸವಾಲಾಗಿದೆ. ಈ ಕ್ರೌರ್ಯದ ವಿರುದ್ಧದ ಹೋರಾಟವನ್ನು ಕೇವಲ ಘಟನೆ ಮತ್ತು ಪ್ರತಿಕ್ರಿಯೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಉಗ್ರವಾದವನ್ನು ಪೋಷಿಸುವ ದೇಶಗಳಿಗೆ ಭಯೋತ್ಪಾದನೆ ಎಂದಿಗೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಾವು ತಲುಪಿಸಬೇಕಿದೆ’ ಎಂದು ಕರೆ ನೀಡಿದರು.

‘ಭಯೋತ್ಪಾದನೆಗೆ ಹಣಕಾಸು ನೆರವು, ನೇಮಕಾತಿ, ತೀವ್ರಗಾಮಿ ಚಿಂತನೆಗೆ ಪ್ರಚೋದನೆ ಮತ್ತು ಸುರಕ್ಷಿತ ನೆಲೆಗಳನ್ನು ಒದಗಿಸುವ ಸಂಪೂರ್ಣ ವ್ಯವಸ್ಥೆಯನ್ನು ನಾವು ಬುಡಸಮೇತ ಕಿತ್ತೊಗೆಯಬೇಕಿದೆ. ಈ ಬಗ್ಗೆ ನಾವೆಲ್ಲರೂ ಒಕ್ಕೊರಲಿನಿಂದ ಮಾತನಾಡಬೇಕು ಹಾಗೂ ಈ ಗಂಭೀರ ವಿಷಯದಲ್ಲಿ ದ್ವಂದ್ವ ನಿಲುವಿಗೆ ಯಾವುದೇ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ಚೀನಾ ಬಿಆರ್‌ಐ ಯೋಜನೆಗೆ ಕಿಡಿ:

ಇದೇ ವೇಳೆ ಚೀನಾದ ಬೆಲ್ಟ್ ಆ್ಯಂಡ್ ರೋಡ್ (ಬಿಆರ್‌ಐ) ಯೋಜನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ, ಪ್ರಾದೇಶಿಕ ಸಂಪರ್ಕ ಹೆಚ್ಚಿಸುವ ಯಾವುದೇ ಯೋಜನೆಗಳಾಗಲಿ, ಅವು ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಡ್ಡಾಯವಾಗಿ ಗೌರವಿಸಬೇಕು ಎಂದು ಪ್ರತಿಪಾದಿಸಿದರು.

=

ಯುದ್ಧದ ಬಗ್ಗೆ ಕಳವಳ:

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ‘ಒಂದು ಪ್ರದೇಶದಲ್ಲಿನ ಸಂಘರ್ಷವು ಅಲ್ಲಿಗೆ ಮಾತ್ರ ಸೀಮಿತವಾಗಿರದೆ ಇಡೀ ಜಗತ್ತಿನ ಇಂಧನ ಭದ್ರತೆ, ಸಮುದ್ರ ವ್ಯಾಪಾರ ಮತ್ತು ಪೂರೈಕೆ ಜಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಜಾಗತಿಕ ದಕ್ಷಿಣದ ದೇಶಗಳು ಹೆಚ್ಚು ಸಂಕಷ್ಟಕ್ಕೆ ಈಡಾಗುತ್ತವೆ. ಆದ್ದರಿಂದ ಯಾವುದೇ ಯುದ್ಧವನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳಬೇಕ’ ಎಂದು ಒತ್ತಾಯಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಹಿಳೆಯರು ಮನೆಯಿಂದ ಹೊರಬರಬಾರದು: ಇಸ್ಲಾಂ ಧರ್ಮಗುರು
ಸ್ಥಳೀಯ ಭಾಷೆ ಬಂದವರಿಗಷ್ಟೇ ಹುದ್ದೆ: ಕನ್ನಡಿಗರ ಹೋರಾಟಕ್ಕೆ ಬಿಒಬಿ ಮಣೆ