- ಸುಪ್ರೀಂ ಮಾನವೀಯತೆ ನೀತಿಯಿಂದ ಹಿಂದೆ ಸರಿದಿದೆ: ರಾಹುಲ್
- ನಾಯಿಗಳು ಸೌಮ್ಯ ಜೀವಿಗಳು, ಕ್ರೌರ್ಯಕ್ಕೆ ಅರ್ಹವಲ್ಲ: ಪ್ರಿಯಾಂಕಾ- ಜಾನ್ ಅಬ್ರಹಾಂ, ಜಾಹ್ನವಿ , ವರುಣ್ ಧವನ್ ಸೇರಿ ಹಲವರ ಬೇಸರನವದೆಹಲಿ: ದೆಹಲಿಯ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಕಾಂಗ್ರೆಸ್ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಬಾಲಿವುಡ್‌ನ ಹಲವು ನಟ- ನಟಿಯರು ಆಕ್ಷೇಪಿಸಿದ್ದಾರೆ.ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಈ ತೀರ್ಪಿನಿಂದಾಗಿ ಸುಪ್ರೀಂ ದಶಕ ಗಳ ಮಾನವೀಯ ನೀತಿಯಿಂದ ಹಿಂದಕ್ಕೆ ಸರಿದಿದೆ. ಈ ಧ್ವನಿರಹಿತ ಆತ್ಮಗಳನ್ನು ಅಳಿಸಲು ಅವು ಸಮಸ್ಯೆಗಳು ಅಲ್ಲ. ಆಶ್ರಯಗಳು, ಸಂತಾನಶಕ್ತಿ ಹರಣ, ಲಸಿಕೆ, ಆರೈಕೆಯು ಯಾವುದೇ ಕ್ರೌರ್ಯವಿಲ್ಲದೆ ಬೀದಿಗಳನ್ನು ರಕ್ಷಿಸಬಹುದು. ಇವುಗಳನ್ನು ಇತರೆಡೆಗೆ ಕಳುಹಿಸುವುದು ಕ್ರೂರ’ ಎಂದಿದ್ದಾರೆ. ಪ್ರಿಯಾಂಕಾ ಅಪಸ್ವರ:ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಆಕ್ಷೇಪಿಸಿದ್ದು, ‘ಕೆಲವೇ ವಾರಗಳಲ್ಲಿ ನಗರದಲ್ಲಿನ ಬೀದಿ ನಾಯಿಗಳನ್ನು ಶೆಲ್ಟರ್ ಗಳಿಗೆ ಸ್ಥಳಾಂತರಿಸುವುದು ಭಯಾನಕ ಅಮಾನವೀಯ ವರ್ತನೆ. ಅವುಗಳಿಗೆ ಬೇಕಾದಷ್ಟು ಆಶ್ರಯ ತಾಣಗಳು ಅಸ್ತಿತ್ವದಲ್ಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಖಂಡಿತವಾಗಿಯೂ ಬೇರೆ ವಿಧಾನಗಳಿರುತ್ತದೆ. ನಾಯಿಗಳು ಅತ್ಯಂತ ಸೌಮ್ಯ ಜೀವಿಗಳು, ಈ ರೀತಿಯ ಕ್ರೌರ್ಯಕ್ಕೆ ಅರ್ಹವಲ್ಲ’ ಎಂದಿದ್ದಾರೆ.ನಟರ ಆಕ್ಷೇಪ: ಹಲವು ಬಾಲಿವುಡ್ ನಟ- ನಟಿಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾನ್ ಅಬ್ರಹಾಂ ಸುಪ್ರೀಂ ಆದೇಶ ಮರು ಪರಿಶೀಲಿಸುವಂತೆ ಬಹಿರಂಗ ಅರ್ಜಿ ಸಲ್ಲಿಸಿದ್ದು, ‘ನಾಯಿಗಳೂ ದಿಲ್ಲಿ ನಿವಾಸಿಗಳ ಭಾಗ. ಇವುಗಳು ದೆಹಲಿ ಜನರಿಂದ ತಮ್ಮದೇ ಆದ ರೀತಿಯಲ್ಲಿ ಗೌರವಿಸಲ್ಪಟ್ಟ, ಪ್ರೀತಿಸಲ್ಪಡುವ ನಾಯಿಗಳು. ನಾಗರಿಕರಿಗೆ ನೆರೆಹೊರೆಯವರಾಗಿ ತಲೆಮಾರುಗಳಿಂದ ವಾಸಿಸುತ್ತಿವೆ’ ಎಂದಿದ್ದಾರೆ.
ತಾರೆಯರಾದ ವರುಣ್ ಧವನ್, ಜಾಹ್ನವಿ ಕಪೂರ್, ವೀರ್ ದಾಸ್, ಸಾನ್ಯಾ ಮಲ್ಹೋತ್ರಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.