)
ನಾಸಿಕ್: ‘ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ರಾಹುಲ್ ಗಾಂಧಿಯವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ. ಅದು ಸಾಧ್ಯವಾಗದಿದ್ದರೆ, ಅವರ ಬೆಂಗಾವಲು ಪಡೆಯ ಮೇಲೆ ಕಲ್ಲೆಸೆಯುತ್ತೇವೆ’ ಎಂದು ಶಿವಸೇನೆ (ಯುಬಿಟಿ)ಯ ಸ್ಥಳೀಯ ಮುಖಂಡ ಬಾಳಾ ದರಾಡೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಬಣದ ಶಿವಸೇನೆ ಕಾಂಗ್ರೆಸ್‌ನ ಮಿತ್ರಪಕ್ಷವಾಗಿದ್ದು, ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಭಾಗವಾಗಿದೆ. ಅಲ್ಲದೆ ಎರಡೂ ಪಕ್ಷಗಳು ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಇಂಡಿ ಮೈತ್ರಿಕೂಟದ ಭಾಗವೂ ಆಗಿವೆ. ಹೀಗಿರುವಾಗ ತಮ್ಮದೇ ಮಿತ್ರಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ಬಂದಿರುವುದು ರಾಜಕೀಯ ಸಂಚಲನ ಸೃಷ್ಟಿಸಿದೆ.
ಇಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ)ಯ ನಾಸಿಕ್ ಉಪನಗರ ಘಟಕದ ಮುಖ್ಯಸ್ಥ ಬಾಳಾ ದರಾಡೆ, ‘ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜನ್ಮಭೂಮಿಯಲ್ಲಿ ವಾಸಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಸಾವರ್ಕರ್ ಅವರನ್ನು ಮಾಫಿ ವೀರ (ಕ್ಷಮಾ ವೀರ) ಎಂದು ಕರೆದ ರಾಹುಲ್ ಗಾಂಧಿ ಹೇಳಿಕೆ ಅವಮಾನಕರವಾಗಿತ್ತು. ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ. ರಾಹುಲ್ ಗಾಂಧಿಯವರು ನಾಸಿಕ್‌ಗೆ ಬಂದರೆ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಅವರ ಬೆಂಗಾವಲು ಪಡೆಯ ಮೇಲೆ ಕಲ್ಲು ಎಸೆಯುತ್ತೇವೆ’ ಎಂದಿದ್ದಾರೆ.