‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂಬ ಹೇಳಿಕೆ ವಿವಾದ - ನಾನು ಕ್ಷಮೆ ಕೇಳಲ್ಲ: ನಟ ಕಮಲ್‌ ಹಾಸನ್‌

KannadaprabhaNewsNetwork |  
Published : May 29, 2025, 12:59 AM ISTUpdated : May 29, 2025, 04:35 AM IST
ಕಮಲ್‌ ವಿರುದ್ಧ ಪ್ರತಿಭಟನೆ | Kannada Prabha

ಸಾರಾಂಶ

‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್‌ ಹಾಸನ್‌, ಈ ಹೇಳಿಕೆ ಕುರಿತು ಭಾರೀ ಆಕ್ರೋಶ ವ್ಯಕ್ತವಾದರೂ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.

  ಬೆಂಗಳೂರು : ಕನ್ನಡ ಭಾಷೆಗೆ ಸುದೀರ್ಘ ಅವಧಿಯ ಇತಿಹಾಸವಿದೆ. ಕಮಲ್‌ ಹಾಸನ್‌ ಅವರಿಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ತಮಿಳು ನಟ ಕಮಲ್‌ ಹಾಸನ್‌ ಅವರ ಹೇಳಿಕೆ ಕುರಿತಂತೆ ಪುರಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕನ್ನಡ ಭಾಷೆಯ ಇತಿಹಾಸ ಬಹಳ ದೊಡ್ಡದಿದೆ. ದೀರ್ಘ ಕಾಲದಿಂದಲೂ ಕನ್ನಡ ಭಾಷೆಯಿದೆ. ಪಾಪ ಕಮಲ್‌ ಹಾಸನ್‌ ಅವರಿಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಲಿ ಎಂದಿದ್ದಾರೆ.

--ಕಮಲ್‌ ಹಾಸನ್‌ ವಿರುದ್ಧ ಸಿಡಿದೆದ್ದ ಕನ್ನಡಿಗರು!ಬೆಂಗಳೂರು: ಕಮಲ್‌ ಹಾಸನ್‌ ಹೇಳಿಕೆಗೆ ಕನ್ನಡಿಗರು ಸಿಡಿದೆದ್ದಿದ್ದಾರೆ, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ರಾಮನಗರ, ರಾಯಚೂರು, ಹಾಸನ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದಿವೆ, ಕಮಲ್‌ ಹಾಸನ್‌ ಕ್ಷಮೆ ಕೇಳದಿದ್ದರೆ ಚಿತ್ರಕ್ಕೆ ನಿಷೇಧ ಹೇರಬೇಕಾಗುತ್ತದೆ ಎಂದು ಕನ್ನಡ-ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಸಂತೋಷ್‌ ಲಾಡ್‌, ಮಧು ಬಂಗಾರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿ ಅನೇಕರು ಕಿಡಿಕಾರಿದ್ದಾರೆ.

ಭಾರೀ ಆಕ್ರೋಶ

 ತಿರುವನಂತಪುರ :  ‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್‌ ಹಾಸನ್‌, ಈ ಹೇಳಿಕೆ ಕುರಿತು ಭಾರೀ ಆಕ್ರೋಶ ವ್ಯಕ್ತವಾದರೂ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.

ಕನ್ನಡ ಕುರಿತ ಹೇಳಿಕೆಗೆ ಕರ್ನಾಟಕದಲ್ಲಿ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಬುಧವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಈ ಬಗ್ಗೆ ಮಾತನಾಡಿದ ಕಮಲ್‌ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

‘ನಾನು ಹಾಗೆ ಹೇಳಿದ್ದು ಕನ್ನಡದ ಮೇಲಿನ ಪ್ರೀತಿಯಿಂದ. ಪ್ರೀತಿಗೆ ಎಂದೂ ಕ್ಷಮೆ ಕೇಳಲಾರೆ. ಇದು ಉತ್ತರವಲ್ಲ, ವಿವರಣೆ. ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ’ ಎಂದು ಪತ್ರಕರ್ತರೆದುರು ಹೇಳಿದ್ದಾರೆ.

ಇದೇ ವೇಳೆ, ತಮಿಳುನಾಡನ್ನು ‘ಅಪರೂಪದ ರಾಜ್ಯ’ ಎಂದು ಕರೆದಿರುವ ನಟ, ‘ಇಲ್ಲಿ ಮೆನನ್‌, ರೆಡ್ಡಿ, ತಮಿಳಿಗ, ಅಂತೆಯೇ ಕನ್ನಡಿಗರೂ ಮುಖ್ಯಮಂತ್ರಿಯಾಗಿದ್ದಾರೆ’ ಎಂದು ಮಂಡ್ಯ ಮೂಲದವರಾದ ಜಯಲಲಿತಾ ಅವರನ್ನು ಉಲ್ಲೇಖಿಸಿದರು. ಮುಂದುವರೆದು ಮಾತನಾಡಿ, ‘ಕರ್ನಾಟಕದವರಾದ ಮುಖ್ಯಮಂತ್ರಿಯಿಂದ (ಜಯಲಲಿತಾ) ತೊಂದರೆಯಾದಾಗ ನನ್ನ ಬೆಂಬಲಕ್ಕೆ ನಿಂತವರು ಕನ್ನಡಿಗರೇ. ನನಗೆ ಕರ್ನಾಟಕದಲ್ಲಿ ಉಳಿದುಕೊಳ್ಳಲೂ ಹೇಳಿದ್ದರು’ ಎಂದರು.

ರಾಜಕಾರಣಿಗಳು ಅರ್ಹರಲ್ಲ:

‘ಭಾಷೆಯ ಕುರಿತು ಮಾತನಾಡಲು ನನ್ನನ್ನೂ ಸೇರಿದಂತೆ ರಾಜಕಾರಣಿಗಳಿಗೆ ಹಕ್ಕಿಲ್ಲ. ಕಾರಣ, ಅವರಿಗೆ ಆ ಬಗ್ಗೆ ಮಾತಾಡುವಷ್ಟು ಜ್ಞಾನವಿರುವುದಿಲ್ಲ. ಆದ್ದರಿಂದ ಯಾವ ಭಾಷೆ ಪುರಾತನವಾದದ್ದು ಎಂಬ ಚರ್ಚೆಯನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾ ತಜ್ಞರಿಗೆ ಬಿಡುವ’ ಎಂದು ಕಮಲ್‌ ಹೇಳಿದ್ದಾರೆ.

ಜೂ.5ರಂದು ಬಿಡುಗಡೆಯಾಗಲಿರುವ ತಮ್ಮ ‘ಥಗ್‌ ಲೈಫ್‌’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಮಲ್‌ ಮೊದಲಿಗೆ ಡಾ। ರಾಜ್‌ ಹಾಗೂ ಶಿವರಾಜ್‌ ಕುಮಾರ್‌ ಅವರನ್ನು ಹೊಗಳಿ, ‘ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕನ್ನಡ ಪರ ಸಂಘಟನೆಗಳು ಕ್ಷಮೆಗೆ ಆಗ್ರಹಿಸಿದ್ದರು.

PREV
Read more Articles on

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ