ನವದೆಹಲಿ: ಅದಾನಿ ಸಮೂಹದ ವಿರುದ್ಧ ಕೇಳಿಬಂದ ಅಕ್ರಮದ ಆರೋಪದ ಪ್ರಕರಣದಲ್ಲಿ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಯ ಮಾಜಿ ಮುಖ್ಯಸ್ಥೆ ಮಾಧವಿ ಬುಚ್ ಅವರ ಪಾಲೂ ಇದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರನ್ನು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಪಾಲ ವಜಾಗೊಳಿಸಿದೆ. ಜತೆಗೆ, ಸಲ್ಲಿಕೆಯಾಗಿದ್ದ ದೂರುಗಳನ್ನು ಆಧಾರರಹಿತ ಊಹೆಗಳು ಎಂದು ಕರೆದಿದೆ.
‘ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸೇರಿದಂತೆ ಉಳಿದವರು ಸಲ್ಲಿಸಿದ ದೂರು, ಅದಾನಿ ಸಮೂಹದ ಅಕ್ರಮ ಬಯಲು ಮಾಡಲು ಶಾರ್ಟ್ ಸೆಲ್ಲರ್ ಕಂಪನಿ (ಹಿಂಡನ್‌ಬರ್ಗ್) ತಯಾರಿಸಿದ್ದ ವರದಿಯ ಆಧಾರದಲ್ಲಿವೆ. ಆದಕಾರಣ ಇದನ್ನು ವಜಾಗೊಳಿಸಲಾಗುತ್ತಿದೆ’ ಎಂದು ಲೋಕಪಾಲ ಅಧ್ಯಕ್ಷರ ನೇತೃತ್ವದ 6 ಸದಸ್ಯರ ಪೀಠ ಹೇಳಿದೆ.
2014ರ ಆ.10ರಂದು ಹಿಂಡನ್‌ಬರ್ಗ್ ಪ್ರಕಟಿಸಿದ್ದ ವರದಿಯಲ್ಲಿ, ಅದಾನಿ ಸಮೂಹದ ಅಕ್ರಮ ಹಣ ವರ್ಗಾವಣೆಯಲ್ಲಿ ಬುಚ್ ಹಾಗೂ ಅವರ ಪತಿಯ ಪಾಲೂ ಇತ್ತು ಎಂದು ಆರೋಪಿಸಿತ್ತು.