ಸೆನ್ಸೆಕ್ಸ್‌ 1272 ಅಂಕ ಇಳಿದು 84299ರಲ್ಲಿ ಅಂತ್ಯ: 3.5 ಲಕ್ಷ ಕೋಟಿ ರು. ಹೂಡಿಕೆ ನಷ್ಟ

KannadaprabhaNewsNetwork |  
Published : Oct 01, 2024, 01:19 AM ISTUpdated : Oct 01, 2024, 05:04 AM IST
ಶೇರುಪೇಟೆ ಕುಸಿತ | Kannada Prabha

ಸಾರಾಂಶ

ಸೋಮವಾರದ ವಿನಿಮಯದಲ್ಲಿ ಸೆನ್ಸೆಕ್ಸ್ 1272 ಅಂಕಗಳ ಕುಸಿತ ಕಂಡು 84,299ಕ್ಕೆ ಕುಸಿದಿದೆ, ಇದರಿಂದಾಗಿ ಹೂಡಿಕೆದಾರರಿಗೆ ₹3.57 ಲಕ್ಷ ಕೋಟಿ ನಷ್ಟವಾಗಿದೆ. ಬ್ಯಾಂಕಿಂಗ್ ಮತ್ತು ಐಟಿ ಕಂಪನಿಗಳ ಷೇರುಗಳು ಕುಸಿತ ಕಂಡ 반면, ಲೋಹ ವಲಯವು ಏರಿಕೆಯನ್ನು ದಾಖಲಿಸಿದೆ.

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕದವಾದ ಸೆನ್ಸೆಕ್ಸ್‌ ಸೋಮವಾರ 1272 ಅಂಕಗಳ ಭಾರೀ ಕುಸಿತ ಕಂಡು 84,299ರಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿ 368 ಅಂಕ ಕುಸಿತು 25810ರಲ್ಲಿ ಮುಕ್ತಾಯವಾಯಿತು. ಬ್ಯಾಂಕಿಂಗ್‌ ಮತ್ತು ಐಟಿ ವಲಯದ ಬಹುತೇಕ ಕಂಪನಿಗಳ ಷೇರು ಮೌಲ್ಯ ಇಳಿದರೆ, ಲೋಹದ ಕಂಪನಿಗಳ ಷೇರು ಬೇಲೆ ಏರಿಕೆ ಕಂಡಿತು. ಮಧ್ಯಪ್ರಾಚ್ಯ ಬಿಕ್ಕಟ್ಟು, ಚೀನಾದಲ್ಲಿ ಆರ್ಥಿಕತೆ ಕುಸಿತ, ಜಪಾನ್‌ ಸರ್ಕಾರ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ, ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿದ್ದು ಸೂಚ್ಯಂಕವನ್ನು ಭಾರೀ ಪ್ರಮಾಣದಲ್ಲಿ ಕೆಳಗೆ ಎಳೆಯಿತು. ಇದರಿಂದಾಗಿ ಒಂದೇ ದಿನ ಹೂಡಿಕೆದಾರರಿಗೆ 3.57 ಲಕ್ಷ ಕೋಟಿ ರು.ನಷ್ಟವಾಯಿತು.

==

ತಡೆ ಇದ್ದರೂ ಬುಲ್ಡೋಜರ್‌ ಬಳಸಿ ಕಟ್ಟಡ ಧ್ವಂಸ ಕೇಸು: ಅಸ್ಸಾಂಗೆ ಸುಪ್ರೀಂ ನೋಟಿಸ್‌

ನವದೆಹಲಿ: ಯಾವುದೇ ಪ್ರಕರಣದಲ್ಲಿ ಕಟ್ಟಡ ಧ್ವಂಸಕ್ಕೆ ತಡೆ ನೀಡಿದ್ದರೂ, ಬುಲ್ಡೋಜರ್‌ ಬಳಸಿ ಕಟ್ಟಡ ಧ್ವಂಸ ಮುಂದುವರೆಸಿದ್ದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನ್ಯಾಯಾಂಗ ನಿಂದನಾ ನೋಟಿಸ್‌ ಜಾರಿ ಮಾಡಿದೆ. ಸರ್ಕಾರ ಬುಲ್ಡೋಜರ್‌ ಬಳಸಿ ಕಟ್ಟಡ ಧ್ವಂಸ ಮಾಡುತ್ತಿದೆ ಎಂದು ಆರೋಪಿಸಿ 48 ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಧ್ವಂಸ ಪ್ರಕ್ರಿಯೆಗೆ ತಡೆ ನೀಡಿದ್ದೂ ಅಲ್ಲದೆ, 21 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಸರ್ಕಾರಿ ಜಾಗದಲ್ಲಿ ಕಟ್ಟಡ ಕಟ್ಟಿಕೊಂಡವರ ತೆರವಿಗೆ ಅಸ್ಸಾಂ ಹಿಮಂತ ಬಿಸ್ವ ಶರ್ಮಾ ಸರ್ಕಾರ ಇತ್ತೀಚೆಗೆ ಕಾರ್ಯಾಚರಣೆ ಆರಂಭಿಸಿತ್ತು.

==

ಲೈಂಗಿಕ ಕಿರುಕುಳ ಆರೋಪಿ ಮಲಯಾಳಂ ನಟ ಸಿದ್ಧಿಕಿಗೆ ಸುಪ್ರೀಂಕೋರ್ಟ್‌ ಜಾಮೀನು

ನವದೆಹಲಿ: ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸುತ್ತಿರುವ ಮೀಟು ಪ್ರಕರಣದಲ್ಲಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ಸಿದ್ಧಿಕಿಗೆ ಸೋಮವಾರ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದ್ದು, ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಸಿದ್ಧಿಕಿ ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಸೆ.24ರಂದು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್‌ ಜಾಮೀನು ನಿರಾಕರಿಸಿತ್ತು. ಈ ತೀರ್ಪು ಪ್ರಶ್ನಿಸಿ ನಟ ಸಿದ್ಧಿಕಿ ಸುಪ್ರೀಂ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂನ ದ್ವಿಸದಸ್ಯ ಪೀಠ, ಕೇರಳ ಸರ್ಕಾರ ಮತ್ತು ಸಂತ್ರಸ್ತೆಗೆ ನೋಟಿಸ್‌ ನೀಡಿದ್ದು, ನಟ ಸಿದ್ಧಿಕಿಗೆ ಮಂಜೂರು ಮಾಡಿದೆ.

==

10 ವರ್ಷದಲ್ಲಿ ಪಾಕ್‌ ಜೈಲಲ್ಲಿ 24 ಭಾರತೀಯ ಬೆಸ್ತರು ಸಾವು: ಆರ್‌ಟಿಐ

ಮುಂಬೈ: ಕಳೆದ 10 ವರ್ಷದಲ್ಲಿ ಪಾಕಿಸ್ತಾನದಲ್ಲಿ 24 ಭಾರತೀಯ ಮೀನುಗಾರರು ಸಾವನ್ನಪ್ಪಿದ್ದಾರೆ ಎಂದು ಆರ್‌ಟಿಐ ಅಡಿ ಮಾಹಿತಿ ಲಭಿಸಿದೆ. ಮುಂಬೈ ಮೂಲದ ಜತಿನ್‌ ದೇಸಾಯ್‌ ಅವರು ಪಾಕಿಸ್ತಾನದ ಹೈಕಮಿಷನ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಮಾಹಿತಿ ದೊರೆತಿದೆ. ಉಭಯ ದೇಶಗಳು ಬಂಧಿತರ ರಾಷ್ಟ್ರೀಯತೆ ತಿಳಿದು, ಬಂಧಿತರ ಶಿಕ್ಷೆ ಅವಧಿ ಮುಕ್ತಾಯಗೊಂಡ ಒಂದು ತಿಂಗಳ ಒಳಗಾಗಿ ಅವರನ್ನು ಆಯಾ ದೇಶಗಳಿಗೆ ಕಳುಹಿಸಬೇಕು. ಆದರೆ ಪಾಕಿಸ್ತಾನ ಇದನ್ನು ಮಾಡುತ್ತಿಲ್ಲ. ಪಾಕಿಸ್ತಾನದಿಂದ 180 ಭಾರತೀಯರು ಸುಮಾರು ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಇವರಲ್ಲಿ 50 ಜನರು 3 ವರ್ಷಕ್ಕಿಂತ ಅಧಿಕ, 150 ಜನರು 2 ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂದು ಆರ್‌ಟಿಐ ಹೇಳಿದೆ.

==

ನೇಪಾಳ ಪ್ರವಾಹ, ಭೂಕುಸಿತ ಅನಾಹುತಕ್ಕೆ 200 ಬಲಿ: ರಕ್ಷಣಾ ಕಾರ್ಯ ತೀವ್ರ

ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆ ಮತ್ತು ನಾಪತ್ತೆಯಾದವರ ಶೋಧ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದೆ. ದೇಶದಲ್ಲಿ ಭಾರೀ ಮಳೆಯಿಂದ ಘಟಿಸಿದ ವಿಪತ್ತಿನಲ್ಲಿ ಇದುವರೆಗೆ ಸಾವನ್ನಪ್ಪಿರುವವರ ಸಂಖ್ಯೆ 200ರ ಗಡಿ ದಾಟಿದೆ. ವಾರಾಂತ್ಯದಲ್ಲಿ ನೇಪಾಳದಲ್ಲಿ ಸಂಭವಿಸಿದ ಭಾರೀ ಮಳೆ ದೊಡ್ಡ ಅನಾಹುತ ಸೃಷ್ಟಿಸಿದ್ದು, ಪ್ರವಾಹ ಮತ್ತು ಭೂಕುಸಿತದಲ್ಲಿ ಇದುವರೆಗೆ ಕನಿಷ್ಠ 204 ಮಂದಿ ಸಾವನ್ನಪ್ಪಿದ್ದು, 89 ಜನರು ಗಾಯಗೊಂಡಿದ್ದಾರೆ. ಜೊತೆಗೆ 33 ಮಂದಿ ನಾಪತ್ತೆಯಾಗಿದ್ದಾರೆ. ಇದುವರೆಗೆ ಸುಮಾರು 4,500 ನಾಗರಿಕರನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿದ್ದು, ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆ ಮತ್ತು ಶೋಧ ಕಾರ್ಯ ಇನ್ನೂ ಮುಂದುವರೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ