ಮುಂಬೈ: ಸತತ 5 ದಿನಗಳಿಂದ ಕುಸಿತ ಕಾಣುತ್ತಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 602 ಅಂಕಗಳ ಏರಿಕೆ ಕಂಡು 80005ರಲ್ಲಿ ಮುಕ್ತಾಯಾಗಿದೆ. ಮಧ್ಯಂತರ ಅವಧಿಯಲ್ಲಿ 1137 ಅಂಕಗಳವರೆಗೆ ಏರಿದ್ದ ಸೂಚ್ಯಂಕ ಬಳಿಕ ಕುಸಿತ ಕಂಡಿತು. ಇನ್ನೊಂದೆಡೆ ನಿಫ್ಟಿ ಕೂಡಾ 158 ಅಂಕ ಏರಿ 24339ರಲ್ಲಿ ಕೊನೆಗೊಂಡಿತು. ಐಸಿಐಸಿಐ ಬ್ಯಾಂಕ್ ಷೇರುಮೌಲ್ಯ ಏರಿಕೆ, ಜಾಗತಿಕ ಷೇರುಪೇಟೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರ ಖರೀದಿಗೆ ಸೂಚ್ಯಂಕವನ್ನು ಮೇಲಕ್ಕೆ ಏರಿಸಿತು. ಸೋಮವಾರ ಷೇರುಪೇಟೆಯಲ್ಲಿ ನೊಂದಾಯಿತ ಷೇರುಗಳ ಮೌಲ್ಯ ಏರಿಕೆ ಪರಿಣಾಮ ಹೂಡಿಕೆದಾರರ ಸಂಪತ್ತು 4.21 ಲಕ್ಷ ಕೋಟಿ ರು. ಏರಿತು.
ಬಿಷ್ಣೋಯಿಗೆ ಎಚ್ಚರಿಸಿದ್ದ ಪಪ್ಪುಗೆ ಜೀವ ಬೆದರಿಕೆ: ಝಡ್ ಭದ್ರತೆಗೆ ಕೋರಿಕೆ
ನವದೆಹಲಿ: ಬಿಹಾರದ ಪುರ್ನಿಯಾ ಕ್ಷೇತ್ರದ ಲೋಕಸಭಾ ಸದಸ್ಯ ಪಪ್ಪು ಯಾದವ್, ತನಗೆ ಲಾರೆನ್ಸ್ ಬಿಷ್ಣೋಯಿ ತಂಡದಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಝಡ್ ಪ್ಲಸ್ ಭದ್ರತೆ ಒದಗಿಸುವಂತೆ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಈ ಕುರಿತು ಬಿಹಾರ ಡಿಜಿಪಿಗೂ ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ. ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಪಪ್ಪು, 24 ಗಂಟೆಯೊಳಗೆ ನಿಮ್ಮ ತಂಡ ವಿಸರ್ಜಿಸಿ ಎಂದು ಬಿಷ್ಣೋಯಿ ಗ್ಯಾಂಗ್‌ಗೆ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಅವರಿಗೆ ಜೀವ ಬೆದರಿಕೆ ಕರೆ ಮಾಡಲಾಗಿದೆ.
ಹಿಂದೂಗಳ ಕಡಿವೆ ಎಂದಿದ್ದ ಟಿಎಂಸಿ ನಾಯಕನ ಹೂತುಹಾಕ್ತೇವೆ: ಮಿಥುನ್ ಚಕ್ರವರ್ತಿ
ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಹಿಂದೂಗಳ ಕಡಿದು ನದಿಗೆ ಎಸಿತೀವಿ ಎಂದಿದ್ದ ಟಿಎಂಸಿ ನಾಯಕ ಹುಮಾಯೂನ್ ಹಬೀರ್ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ, ನಟ ಮಿಥುನ್ ಚಕ್ರವರ್ತಿ, ‘ ನಾವು ಅವರನ್ನು ಕೊಚ್ಚಿ ನೆಲದಲ್ಲಿ ಹೂತು ಹಾಕುತ್ತೇವೆ. ಸಿಂಹಾಸನ ಗೆಲ್ಲಲು ಏನು ಬೇಕಾದರೂ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಸಮ್ಮುಖದಲ್ಲೇ ಮಾತನಾಡಿದ ಮಿಥುನ್ ‘ಶೇ.70ರಷ್ಟು ಮುಸ್ಲಿಮರು , ಶೇ.30ರಷ್ಟಿರುವ ಹಿಂದೂಗಳನ್ನು ಭಾಗೀರಥಿಯಲ್ಲಿ ಕತ್ತರಿಸಿ ಎಸೆಯುತ್ತಾರೆ ಎಂದು ನಾಯಕರೊಬ್ಬರು ಹೇಳುತ್ತಾರೆ. ಈ ಬಗ್ಗೆ ಮಮತಾ ಪ್ರತಿಕ್ರಿಯಿಸಲಿಲ್ಲ. ಆದರೆ ನಾವು ಅವರನ್ನು ಕೊಚ್ಚಿ ನೆಲದಲ್ಲಿ ಹೂತು ಹಾಕುತ್ತೇವೆ. ಬಂಗಾಳ ಗೆಲ್ಲಲು ಏನೂ ಬೇಕಿದ್ದರೂ ಮಾಡುತ್ತೇವೆ’ ಎಂದಿದ್ದಾರೆ.
ಮತ್ತೆ 60 ವಿಮಾನಗಳಿಗೆ ಬಾಂಬ್ ಬೆದರಿಕೆ
ನವದೆಹಲಿ: ದೇಶದಲ್ಲಿ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶದ ಸರಣಿ ಮುಂದುವರೆದಿದೆ. ಸೋಮವಾರ ಮತ್ತೆ 60ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಕರೆ ಬಂದಿದ್ದು, ಮೂಲಕ ಕಳೆದ 15 ದಿನಗಳಲ್ಲಿ ಸುಮಾರು 410 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಂತಾಗಿದೆ. ಸೋಮವಾರ ಏರಿಂಡಿಯಾ ಮತ್ತು ಇಂಡಿಗೋದ ತಲಾ 21 ಮತ್ತು ವಿಸ್ತಾರದ 20 ವಿಮಾನಗಳಿಗೆ ಬೆದರಿಕೆ ಕರೆ ಬಂದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚಿನ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳನ್ನು ಪೂರ್ವ ನಿಗದಿತ ಶಿಷ್ಟಾಚಾರದ ಅನ್ವಯ ತಪಾಸಣೆಗೆ ಒಳಪಡಿಸಿ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕಾಶ್ಮೀರದಲ್ಲಿ ಸೇನಾ ವಾಹನ, ಆ್ಯಂಬುಲೆನ್ಸ್ ಮೇಲೆ ಉಗ್ರ ದಾಳಿ: ಪ್ರತಿದಾಳಿಗೆ ಉಗ್ರ ಬಲಿ
ಶ್ರೀನಗರ: ಉಗ್ರರ ಗುಂಪೊಂದು ಸೋಮವಾರ ಜಮ್ಮುವಿನ ಅಕ್ನೂರ್ ವಲಯದಲ್ಲಿ ಸೇನಾ ವಾಹನ ಮತ್ತು ಆ್ಯಂಬುಲೆನ್ಸ್ ಗುರಿಯಾಗಿಸಿ ದಾಳಿ ನಡೆಸಿ ಪರಾರಿಯಾಗಿದೆ. ಬಳಿಕ ಉಗ್ರರ ಪತ್ತೆಗೆ ಸಮೀಪದ ಅರಣ್ಯದಲ್ಲಿ ಸೇನೆ ಶೋಧ ಆರಂಭಿಸಿದೆ. ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಮತ್ತು ಮೊದಲ ಬಾರಿಗೆ ರಷ್ಯಾ ನಿರ್ಮಿತ ಬಿಎಂಪಿ-2 ಯುದ್ಧ ವಾಹನ ಬಳಸಲಾಗಿದೆ. ಇದಲ್ಲದೆ ಎನ್‌ಎಸ್‌ಜಿ ಕಮಾಂಡೋಗಳು, ವಿಶೇಷ ಪಡೆ, ಸ್ಥಳೀಯ ಪೊಲೀಸರು ಕೂಡಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಮಧ್ಯಾಹ್ನ ಉಗ್ರರು ಮತ್ತು ಭದ್ರತಾ ಪಡೆಗಳು ಮುಖಾಮುಖಿಯಾಗಿದ್ದು, ಈ ವೇಳೆ ಉಗ್ರರ ಗುಂಡಿಗೆ ಸೇನಾಪಡೆಯ ಶ್ವಾನವೊಂದು ಸಾವನ್ನಪ್ಪಿದೆ. ಜೊತೆಗೆ ಸೇನೆಗೆ ಗುಂಡಿಗೆ ಓರ್ವ ಉಗ್ರ ಕೂಡಾ ಹತನಾಗಿದ್ದಾನೆ. ಇನ್ನೂ ಇಬ್ಬರು ಉಗ್ರರಿಗಾಗಿ ಹುಡುಕಾಟ ಮುಂದುವರೆದಿದೆ.