ನವದೆಹಲಿ: ಮಹಾರಾಷ್ಟ್ರದ ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಜೊತೆಗೆ ಪಕ್ಷದ ಹೆಸರು ಮತ್ತು ಗೋಡೆ ಗಡಿಯಾರದ ಚಿಹ್ನೆ ಎರಡನ್ನೂ ಅಜಿತ್ ಪವಾರ್ ಬಣಕ್ಕೆ ದಯಪಾಲಿಸಿದೆ.
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿರುವ ಹೊರಬಿದ್ದ ಈ ಆದೇಶ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಶಾಕ್ ನೀಡಿದೆ.
ಈ ನಡುವೆ ಚುನಾವಣಾ ಆಯೋಗ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಬಣ, ಪ್ರಜಾಪ್ರಭುತ್ವದ ಕಗ್ಗೊಲೆ. ಇದರ ವಿರುದ್ಧ ಮುಂದಿನ 48 ಗಂಟೆಗಳಲ್ಲಿ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಹೇಳಿದೆ. ಇನ್ನೊಂದೆಡೆ ಆದೇಶವನ್ನು ಹೃದಯಪೂರ್ವಕವಾಗಿ ಸ್ವೀಕರಿಸುವುದಾಗಿ ಅಜಿತ್ ಪವಾರ್ ಬಣ ಹೇಳಿದೆ.
ಅಜಿತ್ ಬಣಕ್ಕೆ ಜಯ: ಕಳೆದ ವರ್ಷ ಜು.2ರಂದು ಅಜಿತ್ ಪವಾರ್ ಮತ್ತು ಎನ್‌ಸಿಪಿಯ ಇತರೆ 8 ಶಾಸಕರು ಬಂಡೆದ್ದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರವನ್ನು ಸೇರಿದ್ದರು.
ಈ ಸೇರ್ಪಡೆಗೂ ಮುನ್ನ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದ ಅಜಿತ್ ಬಣ, ತಮ್ಮದೇ ನಿಜವಾದ ಬಣ. ಹೀಗಾಗಿ ತಮಗೆ ಪಕ್ಷದ ಹೆಸರು ಮತ್ತು ಚಿಹ್ನೆ ನೀಡಬೇಕೆಂದು ಮನವಿ ಮಾಡಿತ್ತು. ಆದರೆ ಇದನ್ನು ಶರದ್ ಪವಾರ್ ಬಣ ವಿರೋಧಿಸಿತ್ತು.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವೂ ಎರಡೂ ಬಣಗಳಿಂದ ನೀವೇ ನಿಜವಾದ ಬಣ ಎನ್ನಲು ಸಾಕ್ಷ್ಯಗಳೇನು, ಎರಡೂ ಬಣದ ಅಂಕಿಸಂಖ್ಯೆಗಳೇನು ಎಂದು ದಾಖಲೆ ಸಮೇತ ವರದಿ ಕೇಳಿತ್ತು.
ಅದರನ್ವಯ ಎರಡೂ ಬಣಗಳು ಸಲ್ಲಿಸಿದ್ದ ದಾಖಲೆ, ಮಂಡಿಸಿದ್ದ ವಾದ ಆಲಿಸಿದ ಮೂವರು ಸದಸ್ಯರನ್ನು ಒಳಗೊಂಡ ಚುನಾವಣಾ ಆಯೋಗ, ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಮಂಗಳವಾರ ತೀರ್ಪು ನೀಡಿ, ಎನ್‌ಸಿಪಿ ಹೆಸರು ಮತ್ತು ಗಡಿಯಾರದ ಚಿಹ್ನೆಯನ್ನು ಅಜಿತ್ ಬಣಕ್ಕೆ ನೀಡಿದೆ.
ಜೊತೆಗೆ ವಿಶೇಷ ಅವಕಾಶವಾಗಿ, ನೀವು ಆಯ್ಕೆ ಮಾಡಿಕೊಳ್ಳಲು ಬಯಸುವ ಮೂರು ಹೆಸರು ಮತ್ತು ಚಿಹ್ನೆಗಳನ್ನು ಬುಧವಾರ ಸಂಜೆಯೊಳಗೆ ಸಲ್ಲಿಸಿದರೆ ಅದನ್ನು ನೀಡುವುದಾಗಿ ಶರದ್ ಪವಾರ್ ಬಣಕ್ಕೆ ಸೂಚಿಸಿದೆ.
ಪಕ್ಷದ ಸಂವಿಧಾನದ ಗುರಿಗಳು ಮತ್ತು ಉದ್ದೇಶಗಳನ್ನು ಪರೀಕ್ಷೆ ನಡೆಸಲಾಗಿತ್ತು. ಈ ಸಮಯದಲ್ಲಿ ಎರಡೂ ಬಣಗಳು ಪಕ್ಷದ ಸಂವಿಧಾನ ಮತ್ತು ಸಾಂಸ್ಥಿಕ ಚುನಾವಣೆಗಳಿಗೆ ಹೊರತಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಅಂತಿಮವಾಗಿ ಸಂಖ್ಯಾಬಲವನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಜಾಪ್ರಭುತ್ವದ ಕಗ್ಗೊಲೆ: ಚುನಾವಣಾ ಆಯೋಗದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಶರದ್ ಪವಾರ್ ಬಣ ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಒತ್ತಡದಲ್ಲಿ ಆಯೋಗ ನಿರ್ಧಾರ ಕೈಗೊಂಡಿದೆ ಎಂದು ಹೇಳಿದೆ. ಶರದ್ ಪವಾರ್ ಅವರು ಎನ್‌ಸಿಪಿಯನ್ನು ಸ್ಥಾಪನೆ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿದೆ.
ಅಲ್ಲದೇ ಅವರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಚುನಾವಣಾ ಈ ರೀತಿಯ ನಿರ್ಧಾರ ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡಿದೆ ಎಂದು ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.