ಸೇವಾ ತೀರ್ಥ ಕಟ್ಟಡಕ್ಕೆ ಬೇಲೂರು ಚೆನ್ನಕೇಶವ ದೇಗುಲ ಸ್ಫೂರ್ತಿ!

KannadaprabhaNewsNetwork |  
Published : Feb 14, 2026, 02:00 AM IST
pm modi pmo seva teerth

ಸಾರಾಂಶ

  ಪ್ರಧಾನಮಂತ್ರಿ ನೂತನ ಕಚೇರಿ ಸೇವಾ ತೀರ್ಥ  ಕರ್ನಾಟಕದ ಧೀಮಂತ ರಾಜಮನೆತನವಾದ ಚಾಲುಕ್ಯರ ವಾಸ್ತುಶಿಲ್ಪದಿಂದ ಪ್ರೇರಿತವಾಗಿ, ವಿಶೇಷವಾಗಿ ಹಾಸನ ಬೆಲೂರಿನ ಚೆನ್ನಕೇಶವ ದೇವಾಲಯದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಅನೇಕ ರಚನೆಗಳು ಕರ್ನಾಟಕದ ಪುರಾತನ ದೇಗುಲಗಳ ವಿಶಿಷ್ಟ ವಿನ್ಯಾಸವನ್ನು ಹೋಲುವಂತಿವೆ  

 ನವದೆಹಲಿ: ಬ್ರಿಟಿಷ್‌ ಕಾಲದ ಹಳೆಯ ಕಟ್ಟಡದಿಂದ ಸ್ಥಳಾಂತರವಾಗಿ ಶುಕ್ರವಾರ ಉದ್ಘಾಟನೆಯಾದ ಪ್ರಧಾನಮಂತ್ರಿಗಳ ನೂತನ ಕಚೇರಿ ಸೇವಾ ತೀರ್ಥವನ್ನು ಕರ್ನಾಟಕದ ಧೀಮಂತ ರಾಜಮನೆತನವಾದ ಚಾಲುಕ್ಯರ ವಾಸ್ತುಶಿಲ್ಪದಿಂದ ಪ್ರೇರಿತವಾಗಿ, ವಿಶೇಷವಾಗಿ ಹಾಸನ ಜಿಲ್ಲೆ ಬೆಲೂರಿನ ಚೆನ್ನಕೇಶವ ದೇವಾಲಯದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಇಲ್ಲಿನ ಅನೇಕ ರಚನೆಗಳು ಕರ್ನಾಟಕದ ಪುರಾತನ ದೇಗುಲಗಳ ವಿಶಿಷ್ಟ ವಿನ್ಯಾಸವನ್ನು ಹೋಲುವಂತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಧಾನಿಗಳ ಕಚೇರಿ, ಸಂಪುಟ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಗಳನ್ನು ಒಳಗೊಂಡಿರುವ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಲಾಗಿದೆ. ಇದರ ಪ್ರವೇಶ ದ್ವಾರವನ್ನು ಕ್ರಿ.ಶ.11ರಿಂದ13ರ ಅವಧಿಯಲ್ಲಿ ನಿರ್ಮಾಣವಾದ ಚಾಲುಕ್ಯರ ದೇವಾಲಯಗಳಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಕೆತ್ತಿದ ಕಲ್ಲಿನ ಸ್ತಂಭದ ಪಟ್ಟಿಯು ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ 12ನೇ ಶತಮಾನದ ಚೆನ್ನಕೇಶವ ದೇವಾಲಯದ ಅಚ್ಚುಗಳಿಂದ ಪ್ರೇರಿತವಾಗಿದೆ. ದೇವಸ್ಥಾನದ ಫಲಕಗಳಲ್ಲಿ ಕಂಡುಬರುವ ಚದರ-ಆಧರಿತ ಜ್ಯಾಮಿತೀಯ ಮಾದರಿಯಲ್ಲಿ ಕಲ್ಲಿನ ಮೇಲೆ ಹೂವಿನ ಚಿತ್ತಾರಗಳನ್ನು ಬಿಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೌದ್ಧ ಸ್ತೂಪಗಳಿಂದ ಪ್ರೇರಣೆ:

ಸೇವಾ ತೀರ್ಥಕ್ಕೆ ಬೌದ್ಧ ಸ್ತೂಪಗಳ ರೀತಿಯಲ್ಲಿ ಲೋಹದ ಹೊದಿಕೆಯ ಗುಮ್ಮಟಗಳನ್ನು ಅಳವಡಿಸಲಾಗಿದೆ. ಇದು ಬಾಳಿಕೆ ಮತ್ತು ನಿರ್ವಹಣೆ ಎರಡೂ ದೃಷ್ಟಿಯಿಂದ ಉತ್ತಮ. ಬಿಳಿ ಮತ್ತು ಕೆಂಪು ಮರಳುಗಲ್ಲಿನಿಂದ ಇಡೀ ಕಟ್ಟಡ ಆವೃತವಾಗಿದ್ದು, ಐತಿಹಾಸಿಕ ಭಾರತೀಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವಂತಿದೆ ಎಂದು ತಿಳಿಸಿದ್ದಾರೆ.

ಪರಂಪರೆಗೆ ಆಧುನಿಕತೆ ಸ್ಪರ್ಶ:

ದಿನವಿಡೀ ಕಚೇರಿ ಸ್ಥಳಗಳಲ್ಲಿ ನೈಸರ್ಗಿಕ ಬೆಳಕು ಒಳಬರುವಂತೆ ಮಾಡಲು ಮುಂಭಾಗದ ಉದ್ದಕ್ಕೂ ಜಾಲಿ ಪರದೆಗಳನ್ನು ಅಳವಡಿಸಲಾಗಿದೆ. ಈ ಪರದೆಗಳು ಸಾಂಪ್ರದಾಯಿಕತೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ಬೆಳಕು, ಗಾಳಿ ಮತ್ತು ಖಾಸಗಿತನಕ್ಕೂ ಅನುಕೂಲ ಕಲ್ಪಿಸುತ್ತವೆ. ಕಟ್ಟಡದುದ್ದಕ್ಕೂ ಸಾಂಪ್ರದಾಯಿಕ ಕಲ್ಲಿನ ಕರಕುಶಲತೆ ಕಂಡುಬರುತ್ತದೆ. ಜೊತೆಜೊತೆಗೆ ಆಧುನಿಕತೆಯ ಸ್ಪರ್ಶವೂ ಮನಸೆಳೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಾಲ್ಡಾ ದಿಗ್ಬಂದನ ಸಂಚುಕೋರ ಬೆಂಗಳೂರಿಗೆ ಪರಾರಿ ವೇಳೆ ಸೆರೆ
ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅರಿದಮನ್‌ ಸೇನೆಗೆ