ನಾನು ಸಿಗರೆಟ್ ಬಿಟ್ಟಿದ್ದೇನೆ. ಆದರೆ ಅದರ ಅಡ್ಡಪರಿಣಾಮ ಇದ್ದೇ ಇವೆ : ಶಾರುಖ್‌ ಖಾನ್‌

KannadaprabhaNewsNetwork | Updated : Nov 04 2024, 05:58 AM IST

ಸಾರಾಂಶ

ಕೆಲ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಸಿಗರೆಟ್‌ ಸೇದುತ್ತಿದ್ದ ನಟ ಶಾರುಖ್‌ ಖಾನ್‌ ಇದೀಗ, ಸಂಪೂರ್ಣವಾಗಿ ಬಿಟ್ಟಿರುವುದಾಗಿ ಹೇಳಿದ್ದಾರೆ.

ನವದೆಹಲಿ: ಕೆಲ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಸಿಗರೆಟ್‌ ಸೇದುತ್ತಿದ್ದ ನಟ ಶಾರುಖ್‌ ಖಾನ್‌ ಇದೀಗ, ಸಂಪೂರ್ಣವಾಗಿ ಬಿಟ್ಟಿರುವುದಾಗಿ ಹೇಳಿದ್ದಾರೆ.

ತಮ್ಮ 59ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾರುಖ್‌, ‘ನಾನು ಸಿಗರೆಟ್ ಬಿಟ್ಟಿದ್ದೇನೆ. ಆದರೆ ಅದರ ಅಡ್ಡಪರಿಣಾಮ ಇದ್ದೇ ಇವೆ’ ಎಂದು ತಮಾಷೆ ಮಾಡಿದ್ದಾರೆ. ಇದರ ವಿಡಿಯೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ಈ ಹಿಂದೆ 2012ರಲ್ಲಿ ಶಾರುಖ್‌ ಮಾಲೀಕತ್ವದ ಕೋಲ್ಕತಾ ನೈಟ್‌ರೈಡರ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ನಡುವಿನ ಐಪಿಎಲ್‌ ಪಂದ್ಯದ ವೇಳೆ ಶಾರುಖ್‌ ಅವರು ಸಿಗರೇಟ್‌ ಸೇದಿ ವಿವಾದಕ್ಕೆ ಕಾರಣರಾಗಿದ್ದರು. ಬಳಿಕ ನ್ಯಾಯಾಲಯ ಇವರಿಗೆ 100 ರು. ದಂಡ ಹಾಕಿತ್ತು. ಇದಾದ ಬಳಿಕ 2017ರಲ್ಲಿ ತಾವು ಸಿಗರೇಟ್‌ ಬಿಡಲು ಯೋಚಿಸುತ್ತಿರುವುದಾಗಿ ಹೇಳಿದ್ದರು.

ವಕ್ಫ್‌ ಮಂಡಳಿ ರಿಯಲ್‌ ಎಸ್ಟೇಟ್‌ ಏಜೆನ್ಸಿ: ಟಿಟಿಡಿ ಅಧ್ಯಕ್ಷ

ಹೈದರಾಬಾದ್‌: ವಕ್ಫ್‌ ಮಂಡಳಿಗಳಿಗೆ ಮುಸ್ಲಿಮೇತರರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಟಿಟಿಡಿ ಮುಖ್ಯಸ್ಥ ಬಿ.ಆರ್‌. ನಾಯ್ಡು ಕೆಂಗಣ್ಣಿಗೆ ಕಾರಣವಾಗಿದೆ.‘ಟಿಟಿಡಿ ಅಧ್ಯಕ್ಷರು ತಿರುಮಲದಲ್ಲಿ ಹಿಂದೂಗಳನ್ನು ಮಾತ್ರ ನೇಮಿಸಬೇಕು ಎಂದು ಘೋಷಿಸಿದ್ದಾರೆ. ಆದರೆ ಮೋದಿ ಸರ್ಕಾರ ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರರೂ ಇರಬೇಕು ಎಂದು ಬಯಸುತ್ತಿದೆ. ಹೀಗೇಕೆ?’ ಎಂದು ಪ್ರಶ್ನಿಸಿದ್ದಾರೆ.

ಆದರೆ ಇದಕ್ಕೆ ತಿರುಗೇಟು ನೀಟಿರುವ ಟಿಟಿಡಿ ಅಧ್ಯಕ್ಷ ನಾಯ್ಡು, ‘ವಕ್ಫ್ ಮಂಡಳಿ ರಿಯಲ್ ಎಸ್ಟೇಟ್ ಕಂಪನಿಯಾಗಿದೆ. ಅದನ್ನು ಟಿಟಿಡಿಗೆ ಒವೈಸಿಯಂಥ ಹಿರಿಯ ರಾಜಕಾರಣಿ ಹೇಗೆ ಹೋಲಿಸುತ್ತಾರೆ? ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ’ ಎಂದಿದ್ದಾರೆ.

ಡಿಜಿಟಲ್‌ ಅರೆಸ್ಟ್‌ ಬಗ್ಗೆ ಮೋದಿ ಬೆನ್ನಲ್ಲೇ ತನಿಖಾ ಸಂಸ್ಥೆ ಎಚ್ಚರಿಕೆ

 ನವದೆಹಲಿ

ದೇಶದಲ್ಲಿ ನಡೆಯುತ್ತಿರುವ ‘ಡಿಜಿಟಲ್‌ ಅರೆಸ್ಟ್‌’ ವಂಚನೆ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸೈಬರ್‌ ಅಪರಾಧಗಳ ತನಿಖೆ ನಡೆಸುವ ಕೇಂದ್ರ ಸರ್ಕಾರದ ಸೈಬರ್‌ ಕ್ರೈಂ ಕೋ-ಆರ್ಡಿನೇಷನ್‌ ಸೆಂಟರ್‌ (ಐ4ಸಿ) ಕೂಡ ಈ ಬಗ್ಗೆ ಜನರಿಗೆ ಎಚ್ಚರಿಕೆಗಳನ್ನು ಬಿಡುಗಡೆ ಮಾಡಿದೆ.

‘ಡಿಜಿಟಲ್‌ ಅರೆಸ್ಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ವಿಡಿಯೋ ಕಾಲ್‌ ಮಾಡುವವರು ಪೊಲೀಸ್‌, ಸಿಬಿಐ, ಕಸ್ಟಮ್ಸ್‌ ಅಧಿಕಾರಿಗಳು ಅಥವಾ ಜಡ್ಜ್‌ಗಳಾಗಿರುವುದಿಲ್ಲ. ಅವರು ಸೈಬರ್‌ ಕ್ರಿಮಿನಲ್‌ಗಳು’ ಎಂದು ಐ4ಸಿ ತಿಳಿಸಿದೆ.‘ಇಂತಹ ತಂತ್ರಗಳಿಗೆ ಯಾರೂ ಬಲಿಯಾಗಬಾರದು. ಈ ರೀತಿಯ ಕರೆಗಳು ಬಂದರೆ ರಾಷ್ಟ್ರೀಯ ಸೈಬರ್‌ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ತಿಳಿಸಬೇಕು ಅಥವಾ www.cybercrime.gov.in ವೆಬ್‌ಸೈಟಿಗೆ ಲಾಗಿನ್‌ ಆಗಿ ದೂರು ನೀಡಬೇಕು’ ಎಂದು ಮಾಹಿತಿ ನೀಡಿದೆ.

ಹಿಜಾಬ್‌ಗೆ ಅಸಮ್ಮತಿ: ತುಂಡುಡುಗೆ ಧರಿಸಿ ಇರಾನಿ ಮಹಿಳೆ ಪ್ರತಿಭಟನೆ

ತೆಹ್ರಾನ್‌: ಇರಾನ್‌ ಸರ್ಕಾರದ ಕಟ್ಟುನಿಟ್ಟಿನ ಹಿಜಾಬ್‌ ನಿಯಮದ ವಿರುದ್ಧ ಯುವ ಮಹಿಳೆಯೊಬ್ಬರು ತುಂಡು ಉಡುಗೆ ಧರಿಸಿ, ವಿಶ್ವ ವಿದ್ಯಾಲಯದಲ್ಲಿ ಓಡಾಟ ನಡೆಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯೊಂದು ಹೇಳಿದೆ.ಇಲ್ಲಿನ ಇಸ್ಲಾಮಿಕ್‌ ಅಜಾದ್‌ ವಿಶ್ವ ವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ಅಧಿಕಾರಿಗಳು ಮಹಿಳೆಯನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿಶ್ವ ವಿದ್ಯಾಲಯದ ವಕ್ತಾರ ಮಾಹಿತಿ ನೀಡಿದ್ದು, ‘ಪೊಲೀಸ್‌ ಠಾಣೆಯಲ್ಲಿ ಆಕೆಯ ವಿಚಾರಣೆ ವೇಳೆ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ’ ಎಂದು ಹೇಳಿದ್ದಾರೆ.

ಹಿಜಾಬ್‌ ವಿರುದ್ಧ 2022ರ ಸೆಪ್ಟೆಂಬರ್‌ನಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ವಶದಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಳಿಕ ಪ್ರತಿಭಟನೆಗಳು ಹೆಚ್ಚಾಗಿವೆ.

ಏಕ ಚುನಾವಣೆ ವಿರುದ್ಧ ವಿಜಯ್‌ ಪಕ್ಷ ನಿರ್ಣಯ

ಚೆನ್ನೈ: ನಟ ಕಮ್ ರಾಜಕಾರಣಿ ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ. ಈ ಯೋಜನೆಯು ಪ್ರಜಾಪ್ರಭುತ್ವ ಮತ್ತು ಫೆಡರಲಿಸಂ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅದು ಹೇಳಿದೆ.ಇದೇ ವೇಳೆ, ನೀಟ್ ಬಗ್ಗೆ ಬಿಜೆಪಿಯನ್ನು ಪಕ್ಷವು ತರಾಟೆಗೆ ತೆಗೆದುಕೊಂಡಿತು ಮತ್ತು ಶಿಕ್ಷಣವನ್ನು ರಾಜ್ಯ ಪಟ್ಟಿಗೆ ತರಬೇಕೆಂದು ಒತ್ತಾಯಿಸಿದೆ.

Share this article