ಅಂಬೇಡ್ಕರ್‌ ಬಿಟ್ಟು ದೇವರ ಜಪ ಮಾಡಿ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಭಾರೀ ಆಕ್ರೋಶ

KannadaprabhaNewsNetwork |  
Published : Dec 19, 2024, 12:32 AM ISTUpdated : Dec 19, 2024, 04:15 AM IST
ಸಂಸತ್‌ | Kannada Prabha

ಸಾರಾಂಶ

‘ಇತ್ತೀಚೆಗೆ ಅಂಬೇಡ್ಕರ್ ಜಪ ಫ್ಯಾಶನ್ ಆಗಿದೆ. ಇದರ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು’ ಎಂದು ಸಂವಿಧಾನ ಕುರಿತ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆ ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ನವದೆಹಲಿ:  ‘ಇತ್ತೀಚೆಗೆ ಅಂಬೇಡ್ಕರ್ ಜಪ ಫ್ಯಾಶನ್ ಆಗಿದೆ. ಇದರ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು’ ಎಂದು ಸಂವಿಧಾನ ಕುರಿತ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆ ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

‘ಶಾ ನುಡಿಯು ಅಂಬೇಡ್ಕರ್‌ಗೆ ಮಾಡಿದ ಅವವಾನ’ ಎಂದಿರುವ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟದ ಪಕ್ಷಗಳು ಶಾ ರಾಜೀನಾಮೆ ಅಥವಾ ವಜಾಗೆ ಒತ್ತಾಯಿಸಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಶಾ ಬೆಂಬಲಕ್ಕೆ ಧಾವಿಸಿದ್ದು, ‘ಶಾ ಕಾಂಗ್ರೆಸ್‌ನ ಕರಾಳ ಕೃತ್ಯ ಬಯಲಿಗೆಳೆದಿದ್ದಾರೆ’ ಎಂದಿದ್ದಾರೆ. ಇನ್ನು ರಾಜೀನಾಮೆಗೆ ನಿರಾಕರಿಸಿರುವ ಅಮಿತ್‌ ಶಾ, ‘ನಾನು ಆಡಿದ ಮಾತುಗಳನ್ನು ಕಾಂಗ್ರೆಸ್‌ ತಿರುಚಿ ಪ್ರಚಾರ ಮಾಡುತ್ತಿದೆ’ ಎಂದು ತಿರುಗೇಟು ನೀಡಿದ್ದಾರೆ.

ಸಂಸತ್ತಿನಲ್ಲಿ ಕೋಲಾಹಲ:

ಏತನ್ಮಧ್ಯೆ ಶಾ ಹೇಳಿಕೆ ಖಂಡಿಸಿ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗಿದೆ. ಪರಿಣಾಮ, ಇಡೀ ದಿನ ಕಲಾಪ ನಡೆಯದೇ ಗುರುವಾರಕ್ಕೆ ಸದನ ಮುಂದೂಡಲಾಗಿದೆ. ಸಂಸತ್ತಿನ ಹೊರಗೆ ಹಾಗೂ ದೇಶದ ಅನೇಕ ಕಡೆ ಪ್ರತಿಪಕ್ಷಗಳಿಂದ ಅಮಿತ್‌ ಶಾ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ ಠಾಕ್ರೆ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್‌ ಅವರು ಅಮಿತ್‌ ಶಾ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಾ ವಿರುದ್ಧ ಹಕ್ಕುಚ್ಯುತಿ:

ಅಂಬೇಡ್ಕರ್‌ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಶಾ ವಿರುದ್ಧ ಟಿಎಂಸಿ ಸಂಸದ ಡೆರೆಕ್‌ ಒ’ಬ್ರಿಯಾನ್ ಹಕ್ಕುಚ್ಯುತಿ ಮಂಡನೆ ನೋಟಿಸ್‌ ನೀಡಿದ್ದಾರೆ. ನಿಯಮ 187ರ ಅಡಿಯಲ್ಲಿ ಅಡಿಯಲ್ಲಿ ನೋಟಿಸ್‌ ನೀಡಲಾಗಿದೆ ಮತ್ತು ನೋಟಿಸ್‌ನಲ್ಲಿ ಮಂಗಳವಾರ ಮೇಲ್ಮನೆಯಲ್ಲಿ ಶಾ ಹೇಳಿರುವ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.

ಶಾ ಹೇಳಿದ್ದೇನು?

‘ಇತ್ತೀಚೆಗೆ ಅಂಬೇಡ್ಕರ್ ಜಪ ಮಾಡುವುದು ಫ್ಯಾಶನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಎಂದು ಜಪಿಸುತ್ತಾರೆ. ಇದರ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು’ ಎಂದು ರಾಜ್ಯಸಭೆಯಲ್ಲಿ ಅಮಿತ್‌ ಶಾ ಮಂಗಳವಾರ ಹೇಳಿದ್ದರು.

ಶಾ ವಜಾಗೆ ಖರ್ಗೆ ಪಟ್ಟು

ಸಂವಿಧಾನ ಶಿಲ್ಪಿಗೆ ಅಮಿತ್‌ ಶಾ ಅಗೌರವ ತೋರಿದ್ದಾರೆ. ಅವರು ರಾಜೀನಾಮೆ ನೀಡಬೇಕು. ಅವರು ನೀಡದೇ ಹೋದರೆ ಹಾಗೂ ಅಂಬೇಡ್ಕರರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವವಿದ್ದರೆ ಅವರು ಇಂದೇ ಗೃಹ ಸಚಿವರನ್ನು ವಜಾ ಮಾಡಬೇಕು

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

ಶಾರಿಂದ ಕೈ ಕರಾಳ ಕೃತ್ಯ ಬಯಲು

ರಾಜ್ಯಸಭೆಯಲ್ಲಿನ ಅಮಿತ್‌ ಶಾ ಹೇಳಿಕೆಗಳು ದೇಶದ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಬಯಲು ಮಾಡಿದೆ. ಶಾ ಅವರು ತಮ್ಮ ಮಾತಿನಲ್ಲಿ ಬಹಿರಂಗಪಡಿಸಿದ ಸತ್ಯಗಳಿಂದಾಗಿ ಕಾಂಗ್ರೆಸ್ಸಿಗರಿಗೆ ಚುಚ್ಚಿದಂತಾಗಿದ್ದು, ಅ‍ವರು ದಿಗ್ಭ್ರಮೆಗೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಇದೀಗ ನಾಟಕ ಶುರುಮಾಡಿದ್ದಾರೆ.

- ನರೇಂದ್ರ ಮೋದಿ, ಪ್ರಧಾನಿ

ನನ್ನ ಹೇಳಿಕೆ ತಿರುಚಲಾಗಿದೆ

ಕಾಂಗ್ರೆಸ್‌ ನಾಯಕರು ಗೊಂದಲ ಹರಡಲು ಮತ್ತು ಜನರನ್ನು ದಾರಿತಪ್ಪಿಸಲು ಅಂಬೇಡ್ಕರ್ ಕುರಿತ ನನ್ನ ಹೇಳಿಕೆಗಳನ್ನು ತಿರುಚಿದ್ದಾರೆ ಮತ್ತು ವಿರೂಪಗೊಳಿಸಿದ್ದಾರೆ. ಖರ್ಗೆಗೆ ಸಂತೋಷವಾಗುತ್ತದೆ ಎಂದರೆ ನಾನು ರಾಜೀನಾಮೆ ನೀಡಬಹುದು. ಆದರೆ ನನ್ನ ರಾಜೀನಾಮೆಯಿಂದ ಅವರಿಗೆ ಪ್ರಯೋಜನ ಆಗಲ್ಲ. ಏಕೆಂದರೆ ಅವರು ಇನ್ನೂ 15 ವರ್ಷಗಳ ಕಾಲ ವಿಪಕ್ಷ ನಾಯಕ ಸ್ಥಾನದಲ್ಲೇ ಇರಬೇಕಾಗುತ್ತದೆ.

- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ