₹60 ಕೋಟಿ ವಂಚನೆ ಪ್ರಕರಣ : ನಟಿ ಶಿಲ್ಪಾ ಶೆಟ್ಟಿ ವಿಚಾರಣೆ

KannadaprabhaNewsNetwork |  
Published : Oct 08, 2025, 01:00 AM ISTUpdated : Oct 08, 2025, 04:26 AM IST
Shilpa Shetty

ಸಾರಾಂಶ

ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿದ ಪ್ರಕರಣದ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟಿ, ‘ಪ್ರಕರಣದಲ್ಲಿ ಉ್ಲಲೇಖಿಸಲಾಗಿರುವ ಕಂಪನಿಯ ವ್ಯವಹಾರದಲ್ಲಿ ನಾನು ತೊಡಗಿರಲಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಮುಂಬೈ: ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿದ ಪ್ರಕರಣದ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟಿ, ‘ಪ್ರಕರಣದಲ್ಲಿ ಉ್ಲಲೇಖಿಸಲಾಗಿರುವ ಕಂಪನಿಯ ವ್ಯವಹಾರದಲ್ಲಿ ನಾನು ತೊಡಗಿರಲಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.ಅ.4ರಂದು ತಮ್ಮ ನಿವಾಸದಲ್ಲಿ ನಡೆದ ವಿಚಾರಣೆ ವೇಳೆ ಮಾತನಾಡಿದ ಶಿಲ್ಪಾ, ‘ನಾನು ಕಂಪನಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿರಲಿಲ್ಲ. 

ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದುದಕ್ಕಾಗಿ ನನಗೆ ಸಂಭಾವನೆ ಕೊಡಲಾಗುತ್ತಿತ್ತು’ ಎಂದಿದ್ದಾರೆ.ಶಿಲ್ಪಾ ಹಾಗೂ ಅವರ ಪತಿ ರಾಜ್‌ ಕುಂದ್ರಾ, ಶಾಪಿಂಗ್‌ ವೇದಿಕೆಯಾಗಿರುವ ‘ಬೆಸ್ಟ್‌ ಡೀಲ್‌ ಟಿವಿ’ಯ ಸಹ-ಸಂಸ್ಥಾಪಕರಾಗಿದ್ದಾರೆ. ಶಿಲ್ಪಾ ದಂಪತಿ ಉದ್ಯಮಿ ದೀಪಕ್‌ ಕೊಠಾರಿಗೆ ಔದ್ಯಮಿಕ ಉದ್ದೇಶಕ್ಕೆಂದು 60 ಕೋಟಿ ರು. ಸಾಲ ಪಡೆದು ಅನ್ಯ ಕಾರ್ಯಕ್ಕೆ ಬಳಸಿದ್ದರು. ಅಷ್ಟರಲ್ಲೇ ಕಂಪನಿ ದಿವಾಳಿಯಾದ ಕಾರಣ ಸಾಲ ಕಟ್ಟದೇ ವಂಚಿಸಿದ್ದರು ಎಂಬ ಆರೋಪವಿದೆ.

ಜಲ ಉಗ್ರವಾದ ಮಾಡುವ ಮೋದಿಗೆ ಪಾಠ ಕಲಿಸುವೆ: ಲಷ್ಕರ್‌ ಉಗ್ರ ಬೆದರಿಕೆ

ಕರಾಚಿ: ಭಾರತದಿಂದ ಸರ್ವವಿಧದಲ್ಲಿ ಏಟು ತಿಂದು ಮಣ್ಣು ಮುಕ್ಕಿದರೂ ಪಾಕಿಸ್ತಾನದ ಉಗ್ರರ ಸೊಕ್ಕಡಗಿದಂತೆ ಕಾಣಿಸುತ್ತಿಲ್ಲ. ‘ಪಾಕ್‌ ವಿರುದ್ಧ ಭಾರತ ಜಲ ಭಯೋತ್ಪಾದನೆಯಲ್ಲಿ ತೊಡಗಿದೆ. ಇದಕ್ಕೆ ಪ್ರತಿಯಾಗಿ ಮೇ 10ರಂದು ಮಾಡಿದಂತೆ ಮೋದಿಗೆ ಪಾಠ ಕಲಿಸುತ್ತೇವೆ’ ಎಂದು ಪಹಲ್ಗಾಂ ಉಗ್ರದಾಳಿಯ ಮಾಸ್ಟರ್‌ಮೈಂಡ್‌, ಲಷ್ಕರ್‌ ಸಂಘಟನೆಯ ಉಪಮುಖ್ಯಸ್ಥ ಸೈಫುಲ್ಲಾ ಕಸೂರಿ ಬೆದರಿಸಿದ್ದಾನೆ.ವಿಡಿಯೋ ಬಿಡುಗಡೆ ಮಾಡಿರುವ ಕಸೂರಿ, ಇತ್ತೀಚೆಗೆ ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹಕ್ಕೆ ಭಾರತವೇ ಕಾರಣ ಎಂದಿದ್ದಾನೆ. ‘ಭಾರತ ಉದ್ದೇಶಪೂರ್ವಕವಾಗಿ ಹೆಚ್ಚು ನೀರನ್ನು ಹರಿಸಿ ಪಾಕಿಸ್ತಾನದಲ್ಲಿ ನೆರೆ ಉಂಟಾಗುವಂತೆ ಮಾಡುತ್ತಿದೆ. ಇದಕ್ಕೆ ಉತ್ತರವಾಗಿ, ಆಪರೇಷನ್‌ ಸಿಂದೂರಕ್ಕೆ ಪ್ರತಿಯಾಗಿ ಮೇ 10ರಂದು ನಾವು ನಡೆಸಿದ ದಾಳಿಯಂತಹ ಘೋರ ಕ್ರಮವನ್ನು ಕೈಗೊಂಡು ಫೀಲ್ಡ್‌ ಮಾರ್ಷಲ್‌ ಆಸಿಂ ಮುನೀರ್‌ ಅವರು ಪ್ರಧಾನಿ ಮೋದಿಗೆ ಪಾಠ ಕಲಿಸಬೇಕು’ ಎಂದು ಕಸೂರಿ ಆಗ್ರಹಿಸಿದ್ದಾನೆ.ಈ ಮೊದಲು, ಸಿಂಧೂ ಒಪ್ಪಂದ ಸ್ಥಗಿತಗೊಳಿಸುವ ಮೂಲಕ ಭಾರತ ಜಲ ಭಯೋತ್ಪಾದನೆ ಮಾಡುತ್ತಿದೆ ಎಂದು ಪಾಕ್‌ ಬಾಯಿಬಡಿದುಕೊಳ್ಳುತ್ತಿತ್ತು.

ಪುಟಿನ್‌ಗೆ ಮೋದಿ ಜನ್ಮದಿನ ಶುಭಾಶಯ: ಭಾರತಕ್ಕೆ ಆಹ್ವಾನ

ಪಿಟಿಐ ನವದೆಹಲಿಭಾರತ-ಅಮೆರಿಕ ಸಂಬಂಧ ಹಳಸಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 73ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಮುಂಬರುವ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ಅವರನ್ನು ಭಾರತದಲ್ಲಿ ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

‘ಮೋದಿ ಮತ್ತು ಪುಟಿನ್ ಫೋನ್‌ ಸಂಭಾಷಣೆಯಲ್ಲಿ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಭಾರತ-ರಷ್ಯಾ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆ ಪ್ರದರ್ಶಿಸಿದರು. ರಷ್ಯಾ ನಾಯಕರನ್ನು ಭಾರತದಲ್ಲಿ ಸ್ವಾಗತಿಸಲು ಎದುರು ನೋಡುತ್ತಿರುವುದಾಗಿ ಮೋದಿ ಅವರಿಗೆ ತಿಳಿಸಿದರು’ ಎಂದು ಮೂಲಗಳು ಹೇಳಿವೆ.ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ಡಿಸೆಂಬರ್ ಆರಂಭದಲ್ಲಿ ನಡೆಯಲಿದೆ.

ಬೆಂಗಳೂರಲ್ಲಿ ಚಿನ್ನದ ಬೆಲೆ ₹1.25 ಲಕ್ಷಕ್ಕೆ: ದಾಖಲೆ

ನವದೆಹಲಿ: ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನ ಸಾರ್ವಕಾಲಿಕ ದಾಖಲೆಯ 1,25,600 ರು.ಗೆ ಏರಿದೆ. ಆಭರಣ ಚಿನ್ನದ ಬೆಲೆಯು ಗ್ರಾಂಗೆ 11520 ರು.ಗೆ ತಲುಪಿದೆ. ಬೆಳ್ಳಿ ಬೆಲೆ ಕೂಡ ದಾಖಲೆಯ 1,58,800 ರು.ಗೆ ಏರಿದೆ.ದೆಹಲಿಯಲ್ಲಿ 99.9 ಶುದ್ಧತೆ ಚಿನ್ನ 10 ಗ್ರಾಂಗೆ 700 ರು. ಏರಿಕೆಯಾಗಿ 1.24 ಲಕ್ಷ ರು.ಗೆ, 99.5 ಶುದ್ಧತೆಯ ಚಿನ್ನ ಸಹ 700 ರು. ಜಿಗಿದು 1,23 ಲಕ್ಷ ರು.ಗೆ ತಲುಪಿದೆ. ಬೆಳ್ಳಿ ಬೆಲೆಯು ಕೇಜಿಗೆ 3400 ರು. ಕುಸಿದು, 1.54 ಲಕ್ಷಕ್ಕೆ ತಲುಪಿದೆ. ದೆಹಲಿಯಲ್ಲಿ ಸೋಮವಾರ ಚಿನ್ನವು 2700 ರು. ಜಿಗಿದಿತ್ತು.

ಬುಕ್‌ ಆದ ರೈಲು ಟಿಕೆಟ್‌ ದಿನಾಂಕ ಬದಲಾವಣೆಗೆ ಜನವರಿಯಿಂದ ಅವಕಾಶ

ನವದೆಹಲಿ: ಇದೇ ಮೊದಲ ಬಾರಿಗೆ ರೈಲ್ವೆ ಇಲಾಖೆಯು ಟಿಕೆಟ್‌ನಲ್ಲಿ ಪ್ರಯಾಣ ದಿನಾಂಕ ಬದಲಿಸಲು ಅವಕಾಶ ನೀಡುವ ವ್ಯವಸ್ಥೆಯನ್ನು ಜನವರಿಯಿಂದ ಜಾರಿಗೆ ತರಲಿದೆ.‘ಈವರೆಗೆ ಒಮ್ಮೆ ಟಿಕೆಟ್‌ ಬುಕ್‌ ಆಯಿತು ಎಂದರೆ ಪ್ರಯಾಣ ದಿನಾಂಕ ಬದಲಾವಣೆಗೆ ಅವಕಾಶ ಇರಲಿಲ್ಲ. ಪ್ರಯಾಣ ದಿನಾಂಕ ಬದಲಾದರೆ ಟಿಕೆಟ್ ರದ್ದು ಮಾಡಿಸಿ ಹೊಸ ಬುಕ್ಕಿಂಗ್‌ ಮಾಡಬೇಕಿತ್ತು. ಆದರೆ ಇದಕ್ಕೆ ಈಗ ತಿಲಾಂಜಲಿ ನೀಡಿ ದಿನಾಂಕ ಬದಲಿಸಲು ಅವಕಾಶ ನೀಡಲಾಗುತ್ತದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

‘ಪ್ರಯಾಣ ದಿನಾಂಕ ಬದಲಿಸುವವರು ಯಾವುದೇ ಹೆಚ್ಚುವರಿ ಶುಲ್ಕ ತೆರಬೇಕಿಲ್ಲ. ಬುಕ್ಕಿಂಗ್‌ ರದ್ದತಿ ವೇಳೆ ಆಗುವ ಹಣ ಕಡಿತದಂತೆ ಇಲ್ಲಿ ಆಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

PREV
Read more Articles on

Recommended Stories

ಸಿಜೆಐ ಮೇಲಿನ ಶೂ ದಾಳಿಗೆ ಪಶ್ಚಾತ್ತಾಪವೇನಿಲ್ಲ : ವಕೀಲ
ಹಿಮಾಚಲ: ಬಸ್‌ ಮೇಲೆ ಗುಡ್ಡ ಕುಸಿದು 18 ಸಾವು