ಮುಂಬೈ: 1659ರಲ್ಲಿ ಬಿಜಾಪುರದ ಆದಿಲ್ ಶಾಹಿ ದೊರೆಗಳ ಸೇನಾಪತಿ ಅಫ್ಜಲ್ ಖಾನ್ ಹತ್ಯೆಗೆ ಮರಾಠ ದೊರೆ ಛತ್ರಪತಿ ಶಿವಾಜಿ ಬಳಸಿದ್ದ ವಾಘ್ ನಖ್ (ವ್ಯಾಘ್ರ ನಖ) ಅನ್ನು ಬುಧವಾರ ಲಂಡನ್‌ನಿಂದ ಮುಂಬೈಗೆ ತರಲಾಗಿದೆ.
ಶುಕ್ರವಾರದಿಂದ ಅದನ್ನು ರಾಜ್ಯದ ಸತಾರಾದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ.ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರದ ಸಚಿವ ಶಂಭುರಾಜ್ ದೇಸಾಯಿ, ‘ಇದೊಂದು ಹೆಮ್ಮೆಯ ಕ್ಷಣ. ವ್ಯಾಘ್ರ ನಖವನ್ನು ಭರ್ಜರಿ ಕಾರ್ಯಕ್ರಮದ ಮೂಲಕ ಮಹಾರಾಷ್ಟ್ರದ ಸತಾರಾಕ್ಕೆ ತರಲಾಗುವುದು. ಸತಾರಾದ ಛತ್ರಪತಿ ಶಿವಾಜಿ ಸಂಗ್ರಹಾಲಯದಲ್ಲಿ ವ್ಯಾಘ್ರ ನಖವನ್ನು ಬುಲೆಟ್‌ಫ್ರೂಫ್ ಭದ್ರತೆಯಲ್ಲಿ 7 ತಿಂಗಳ ಕಾಲ ಇಡಲಾಗುವುದು. ಬಳಿಕ ಮುಂಬೈನ ಮ್ಯೂಸಿಯಂನಲ್ಲಿ ಇಡಲಾಗುವುದು. ಇದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಶತಮಾನಗಳ ಹಿಂದೆ ಭಾರತದಿಂದ ಕಳ್ಳಸಾಗಣೆಯಾಗಿ ಲಂಡನ್‌ನ ಮ್ಯೂಸಿಯಂ ಸೇರಿದ್ದ ವ್ಯಾಘ್ರ ನಖವನ್ನು 3 ವರ್ಷಗಳ ಕಾಲ ರಾಜ್ಯದಲ್ಲಿ ಪ್ರದರ್ಶನ ಮಾಡುವ ಸಲುವಾಗಿ ರಾಜ್ಯ ಸರ್ಕಾರ ತರುತ್ತಿದೆ. ಈ ಸಂಬಂಧ ಅದು ಲಂಡನ್ ಮ್ಯೂಸಿಯಂ ಜೊತೆ ಒಪ್ಪಂದವೊಂದಕ್ಕೆ ಸಹಿಹಾಕಿದೆ.
ಪಾತಕಿ ಅತೀಕ್‌ನ ₹50 ಕೋಟಿ ಆಸ್ತಿ ಯೋಗಿ ಸರ್ಕಾರದ ವಶಕ್ಕೆ
ಪ್ರಯಾಗ್‌ರಾಜ್: ಉತ್ತರಪ್ರದೇಶದ ಭೂಗತ ಪಾತಕಿ ಮತ್ತು ರಾಜಕಾರಣಿ ಅತೀಕ್ ಅಹಮದ್‌ಗೆ ಸೇರಿದ್ದ 50 ಕೋಟಿ ರು. ಮೌಲ್ಯದ 2.377 ಹೆಕ್ಟೇರ್ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದೆ.ರಾಜ್ಯದಲ್ಲಿ ಕೊಲೆ, ಸುಲಿಗೆ ಸೇರಿದಂತೆ 100ಕ್ಕೂ ಹೆಚ್ಚು ಪ್ರಕರಣಗಳ ಆರೋಪಿಯಾಗಿದ್ದ ಅತೀಕ್, ಪ್ರಯಾಗ್‌ರಾಜ್‌ನಲ್ಲಿ 50 ಕೋಟಿ ಮೌಲ್ಯದ ಭೂಮಿಯನ್ನು ಹೂಬಾಬಾಲ್ ಎಂಬ ಮೇಸ್ತ್ರಿಗೆ ಹೆದರಿಸಿ ಆತನ ಹೆಸರಲ್ಲಿ ನೋಂದಣಿ ಮಾಡಿಸಿದ್ದ. ಅಗತ್ಯ ಬಿದ್ದಾಗ ಅದನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳುವುದಾಗಿ ಹೇಳಿದ್ದ. ಕಳೆದ ವರ್ಷ ಈ ಆಸ್ತಿಯನ್ನು ರಾಜ್ಯ ಸರ್ಕಾರ ಜಪ್ತಿ ಮಾಡಿತ್ತು.
ತನಿಖೆ ವೇಳೆ ಆತ ಅಕ್ರಮ ಮಾರ್ಗದಲ್ಲಿ ಸಂಪಾದಿಸಿದ ಹಣದಿಂದ ಆಸ್ತಿ ಖರೀದಿ ಮಾಡಿದ್ದು ಖಚಿತವಾದ ಹಿನ್ನೆಲೆಯಲ್ಲಿ ಸರ್ಕಾರ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದೆ. ಕಳೆದ ವರ್ಷ ಪೊಲೀಸರ ವಶದಲ್ಲಿದ್ದ ವೇಳೆಯೇ ಅನಾಮಿಕ ವ್ಯಕ್ತಿಗಳು ಅತೀಕ್‌ನನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.
ಪುರಿ ದೇಗುಲ ರತ್ನಭಂಡಾರ ಇಂದು ಮತ್ತೆ ಓಪನ್
ಪಿಟಿಐ ಪುರಿ: ಪುರಿ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯು ದೇವಾಲಯದ ರತ್ನ ಭಂಡಾರದ ಒಳಕೋಣೆಯನ್ನು ಗುರುವಾರ ಮತ್ತೆ ತೆರೆಯಲಿದ್ದು, ವಿಗ್ರಹ, ಚಿನ್ನಾಭರಣಗಳನ್ನು ತಾತ್ಕಾಲಿಕ ಉಗ್ರಾಣಕ್ಕೆ ಸ್ಥಳಾಂತರಿಸಲಿದೆ.
46 ವರ್ಷ ಬಳಿಕ ಕಳೆದ ಭಾನುವಾರ ರತ್ನಭಂಡಾರ ತೆರೆಯಲಾಗಿತ್ತು. ಆದರೆ ದೈನಂದಿನ ಪೂಜೆಗೆ ಬಳಸುವ ಆಭರಣ ಇಡುವ ಹೊರಕೋಣೆಯ ಆಭರಣ ಮಾತ್ರ ಸ್ಥಳಾಂತರಿಸಲಾಗಿತ್ತು. ಹೊರಕೋಣೆಯ ಆಭರಣಗಳನ್ನು ಜಗನ್ನಾಥ ಉತ್ಸವ ಮುಗಿದ ಬಳಿಕ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಈ ಬಗ್ಗೆ ಮಾತನಾಡಿದ ರತ್ನಭಂಡಾರ ಸಮಿತಿ ಅಧ್ಯಕ್ಷ ನ್ಯಾ। ವಿಶ್ವನಾಥ ರಾಥ್, ‘ಜು.18ರಂದು ಬೆಳಿಗ್ಗೆ 9.51 ಮತ್ತು ಮಧ್ಯಾಹ್ನ 12.15ರ ನಡುವೆ ಒಳಲೋಣೆ ಭಂಡಾರವನ್ನು ಪ್ರವೇಶಿಸಿ ಆಭರಣಗಳನ್ನು ತಾತ್ಕಾಲಿಕ ಸ್ಟೋರ್‌ರೂಮ್‌ಗೆ ವರ್ಗಾಯಿಸುತ್ತೇವೆ. ಇಡೀ ಕಾರ್ಯಕ್ರಮವನ್ನು ವೀಡಿಯೊಗ್ರಾಫ್ ಮಾಡಲಾಗುವುದು’ ಎಂದರು.