ಬಿಎಸ್ಸೆನ್ನೆಲ್‌ ನಿರ್ದೇಶಕನ ಪ್ರಯಾಗ್‌ರಾಜ್‌ಗೆ ‘ಐಷಾರಾಮಿ ಭೇಟಿ’ ವಿವಾದ!

KannadaprabhaNewsNetwork |  
Published : Feb 26, 2026, 03:15 AM ISTUpdated : Feb 26, 2026, 04:31 AM IST
BSNL Director Vivek Banzal

ಸಾರಾಂಶ

ಬಿಎಸ್‌ಎನ್‌ಎಲ್‌ ನಿರ್ದೇಶಕ ವಿವೇಕ್‌ ಬಂಜಲ್‌ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಫೆ.25-26ರವರೆಗೆ ಭೇಟಿ ನೀಡಿ, ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಪ್ರವಾಸ ವಿವಾದಕ್ಕೀಡಾಗಿದೆ ಐಷಾರಾಮಿ ವ್ಯವಸ್ಥೆ ಕಲ್ಪಿಸಬೇಕು ಎಂದು ಹೊರಡಿಸಿದ್ದ ಆದೇಶ ಕೇಂದ್ರ ಟೆಲಿಕಾಂ ಸಚಿವಾಯದ ಕೆಂಗಣ್ಣಿಗೆ ಗುರಿಯಾಗಿದೆ.

 ನವದೆಹಲಿ: ಬಿಎಸ್‌ಎನ್‌ಎಲ್‌ ನಿರ್ದೇಶಕ ವಿವೇಕ್‌ ಬಂಜಲ್‌ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಫೆ.25-26ರವರೆಗೆ ಭೇಟಿ ನೀಡಿ, ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಪ್ರವಾಸ ವಿವಾದಕ್ಕೀಡಾಗಿದೆ. ನನ್ನ ಸಹಾಯಕ್ಕಾಗಿ 50 ಅಧಿಕಾರಿಗಳನ್ನು ನಿಯೋಜಿಸಬೇಕು. ಪವಿತ್ರ ಸ್ನಾನದ ಬಳಿಕ ಹೊಸ ಬನಿಯನ್‌, ಚಡ್ಡಿ ತಂದಿಡಬೇಕು ಹಾಗೂ ಐಷಾರಾಮಿ ವ್ಯವಸ್ಥೆ ಕಲ್ಪಿಸಬೇಕು ಎಂದು ಹೊರಡಿಸಿದ್ದ ಆದೇಶ ಕೇಂದ್ರ ಟೆಲಿಕಾಂ ಸಚಿವಾಯದ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ.

ಇದರ ಬೆನ್ನಲ್ಲೇ ಅವರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಏನಿದು ವಿವಾದ?: 

ಬಂಜಲ್ ಫೆ.25-26ರವರೆಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಬೇಕಿತ್ತು. ಸಂಗಮದಲ್ಲಿ ಸ್ನಾನ, ದೋಣಿ ವಿಹಾರ, ಬಢೇ ಹನುಮಾನ್ ಮಂದಿರ, ಅಕ್ಷಯವಟ ಮತ್ತು ಪಾತಾಳಪುರಿ ದೇವಾಲಯಗಳಿಗೆ ಭೇಟಿ ನಿಗದಿಯಾಗಿತ್ತು. ತಮ್ಮ ನೆರವಿಗಾಗಿ 50 ಅಧಿಕಾರಿಗಳನ್ನು ನಿಯೋಜಿಸಿ, ಅವರೆಲ್ಲರಿಗೆ ವಿವಿಧ 20 ಕೆಲಸಗಳನ್ನು ವಹಿಸಿದ್ದರು.

‘ನನಗೆ ಪವಿತ್ರ ಸ್ನಾನಕ್ಕೆ ವ್ಯವಸ್ಥೆ ಮಾಡಬೇಕು. ಬಳಿಕ ಟವೆಲ್‌, ಒಳವಸ್ತ್ರ (ಬನಿಯನ್‌-ಚಡ್ಡಿ), ಚಪ್ಪಲಿ, ಬಾಚಣಿಗೆ ಮೊದಲಾದ ವಸ್ತುಗಳನ್ನು ತಂದಿಡಬೇಕು. ನಾನು ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಒಣಹಣ್ಣುಗಳು, ಹಣ್ಣಿನ ಬಟ್ಟಲು, ಶಾಂಪೂ, ಎಣ್ಣೆ ಇತ್ಯಾದಿಗಳ ವ್ಯವಸ್ಥೆ ಮಾಡಬೇಕು’ ಎಂದು ಅವರು ಬಿಎಸ್‌ಎನ್‌ಎಲ್‌ ಲೆಟರ್‌ಹೆಡ್‌ನಲ್ಲಿ ನಿರ್ದೇಶಿಸಿದ್ದರು. ಈ ಅಧಿಕೃತ ಆದೇಶದ ಪ್ರತಿ ವೈರಲ್‌ ಆಗುತ್ತಿದ್ದಂತೆ ವಿವಾದ ಸೃಷ್ಟಿಯಾಗಿದೆ. ಆ ಬಳಿಕ ಬಂಜಲ್‌ ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ.  

ಕ್ರಮಕ್ಕೆ ಆದೇಶ:

 ಪ್ರಕರಣವನ್ನು ‘ಅನುಚಿತ, ಸ್ವೀಕಾರಾರ್ಹವಲ್ಲದ ಮತ್ತು ಆಘಾತಕಾರಿ ಘಟನೆ’ ಎಂದಿರುವ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬಂಜಲ್‌ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಬಂಜಲ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, 7 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.

ಬಿಎಸ್‌ಎನ್‌ಎಲ್‌ ಸ್ಪಷ್ಟನೆ: 

ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‌ಎನ್‌ಎಲ್‌, ‘ಬಂಜಲ್‌ ಅವರ ನಿದರ್ಶನವು ಸಂಸ್ಥೆಯ ವೃತ್ತಿಪರ ಮಾನದಂಡಗಳು ಮತ್ತು ಮೌಲ್ಯಗಳಿಗೆ ಅನುಗುಣವಾಗಿಲ್ಲ. ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಭ್ರಷ್ಟ ಅಧಿಕಾರಿ ಮನೆಯಲ್ಲಿ ₹4.27 ಕೋಟಿ ರು. ನಗದು! 

ಭುವನೇಶ್ವರ :  ಭಷ್ಟಾಚಾರ ಪ್ರಕರಣದಲ್ಲಿ ಮಂಗಳವಾರ ರಾತ್ರಿ ವಿಚಕ್ಷಣಾ ದಳದಿಂದ ಬಂಧಿಸಲ್ಪಟ್ಟಿರುವ ಒಡಿಶಾದ ಗಣಿ ಇಲಾಖೆಯ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಅವರ ಮನೆಯಲ್ಲಿ 4.27 ಕೋಟಿ ರು. ಮೊತ್ತದ ನೋಟುಗಳ ರಾಶಿಯೇ ಪತ್ತೆ ಆಗಿದೆ. ಇದು, ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ವಶಪಡಿಸಿಕೊಂಡ ಅತಿದೊಡ್ಡ ನಗದು ಮೊತ್ತವಾಗಿದೆ.ಈ ಬಗ್ಗೆ ಮಾತನಾಡಿರುವ ವಿಚಕ್ಷಣಾ ನಿರ್ದೇಶಕ ಯಶವಂತ್ ಜೇಥ್ವಾ, ‘ಮೊಹಂತಿಯವರ ಮೇಲೆ 2009ರಲ್ಲೂ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದ್ದು, ಅದರ ವಿಚಾರಣೆ ಇನ್ನೂ ನಡೆಯುತ್ತಿದೆ’ ಹೇಳಿದ್ದಾರೆ.

ಕಲ್ಲಿದ್ದಲು ಮಾರಾಟಗಾರರೊಬ್ಬರಿಂದ 30,000 ರು. ಲಂಚ ಪಡೆಯುತ್ತಿದ್ದ ವೇಳೆ ಮೊಹಂತಿ ಅವರನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ, ಅವರ ಭುವನೇಶ್ವರದ ಮನೆ, ಭದ್ರಕ್‌ ಜಿಲ್ಲೆಯಲ್ಲಿರುವ ನಿವಾಸ ಮತ್ತು ಕಟ್ಟಕ್‌ನ ಕಚೇರಿಗಳಲ್ಲಿ ವಿಚಕ್ಷಣಾ ಇಲಾಖೆ ಶೋಧ ಕೈಗೊಂಡಿತ್ತು. ಮನೆಯಲ್ಲಿ ಕೋಟ್ಯಂತರ ರು. ನಗದು ಪತ್ತೆಯಾದರೆ, ಕಚೇರಿಯಲ್ಲಿ 1.20 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಹೆಸರಲ್ಲಿರುವ 10 ಬ್ಯಾಂಕ್‌ ಖಾತೆ ಮತ್ತು ಲಾಕರ್‌ಗಳನ್ನೂ ಪರಿಶೀಲಿಸಲಾಗುತ್ತಿದೆ.

2009ರಲ್ಲೂ ಅವರ ಮೇಲೆ ಭ್ರಷ್ಟಾಚಾರ ಕೇಸು ದಾಖಲಾಗಿತ್ತು. 

ಬಿಜೆಪಿ ವಿರುದ್ಧ ಕೈ ಟೀಕೆ: ಹಣ ಪತ್ತೆ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರವನ್ನು ವಿಪಕ್ಷ ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದ್ದು, ‘ಇದು ನಿಮ್ಮ ಡಬಲ್‌ ಎಂಜಿನ್‌ ಸರ್ಕಾರದ ಅಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಅನಾವರಣವಾಗಿದೆ’ ಎಂದು ಟೀಕಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಐನಿಂದ ಕರ್ನಾಟಕ ಐಟಿಕಂಪನಿಗಳಿಗೆ ಭಾರೀ ಕುತ್ತು
ಇಂದು ರಶ್ಮಿಕಾ-ವಿಜಯ್‌ ವಿವಾಹ: ಬೆಳಗ್ಗೆ 8ಕ್ಕೆ ಮುಹೂರ್ತ