;Resize=(412,232))
ನವದೆಹಲಿ : ಚಂದ್ರಯಾನ-3ರ ಯಶಸ್ಸು, ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 14 ದಿನ ಇದ್ದು ಬಂದ ಬಳಿಕ ದೇಶದ ಮಕ್ಕಳಲ್ಲಿ ಬಾಹ್ಯಾಕಾಶ ಕ್ಷೇತ್ರದ ಕುರಿತು ಆಸಕ್ತಿ ಹೆಚ್ಚಾಗಿದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿಯೇ ಇದೀಗ ದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಆರಂಭವಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಾಸಿಕ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಅವರು, ಶುಭಾಂಶು ಶುಕ್ಲಾ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಭೂಮಿಗೆ ವಾಪಸಾದ ಬಳಿಕ ದೇಶದ ಜನ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು ಎಂದರು.
ಅದೇ ರೀತಿ 2023ರಲ್ಲಿ ಚಂದ್ರಯಾನ-3ರ ಯಶಸ್ವಿನ ಬಳಿಕವೂ ದೇಶದ ಮಕ್ಕಳಲ್ಲಿ ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಆಸಕ್ತಿ ಹೆಚ್ಚಾಯಿತು. ಈಗ ಸಣ್ಣಮಕ್ಕಳೂ ನಾವು ಅಂತರಿಕ್ಷಕ್ಕೆ ಹೋಗುತ್ತೇವೆ, ಚಂದ್ರನ ಮೇಲೆ ಕಾಲಿಡುತ್ತೇವೆ, ಬಾಹ್ಯಾಕಾಶ ವಿಜ್ಞಾನಿ ಆಗುತ್ತೇವೆ ಎನ್ನುತ್ತಿದ್ದಾರೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ‘ಇನ್‌ಸ್ಪೈರ್-ಮನಕ್ ’ ಅಭಿಯಾನ ಕುರಿತೂ ಪ್ರಸ್ತಾಪಿಸಿದ ಅವರು, ಮಕ್ಕಳಲ್ಲಿ ಹೊಸತನ ಪ್ರೋತ್ಸಾಹಿಸುವ ಉದ್ದೇಶದಿಂದ ಇದನ್ನು ಜಾರಿ ತರಲಾಗಿದೆ. ಈ ಅಭಿಯಾನದಡಿ ಪ್ರತಿ ಶಾಲೆಯಿಂದ 5 ಮಕ್ಕಳನ್ನು ಆಯ್ಕೆ ಮಾಡಲಾಗುತ್ತಿದ್ದು, ಅವರು ಹೊಸ ಐಡಿಯಾ ಸೃಷ್ಟಿಸುತ್ತಾರೆ. ಈವರೆಗೆ ಲಕ್ಷದಷ್ಟು ಮಕ್ಕಳು ಇದರ ಭಾಗವಾಗಿದ್ದಾರೆ. ಚಂದ್ರಯಾನ-3ರ ಬಳಿಕ ಈ ಸಂಖ್ಯೆ ದುಪ್ಪಟ್ಟಾಗಿದೆ ಎಂದರು.
ಈ ನಡುವೆ, ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯೂ ಹೆಚ್ಚಾಗಿದ್ದು, 5 ವರ್ಷದ ಹಿಂದೆ ದೇಶದಲ್ಲಿ ಕೇವಲ 50 ಸ್ಟಾರ್ಟ್ಅಪ್‌ಗಳಿತ್ತು. ಈಗ ಬಾಹ್ಯಾಕಾಶ ಕ್ಷೇತ್ರವೊಂದರಲ್ಲೇ 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ ಎಂದರು.