ನನ್ನನ್ನು ಮೌನಗೊಳಿಸಿದ್ದಾರೆ, ಸೋಲಿಸಿಲ್ಲ: ಛಡ್ಡಾ ಪ್ರತಿಕ್ರಿಯೆ

KannadaprabhaNewsNetwork |  
Published : Apr 04, 2026, 01:45 AM IST
ರಾಘವ್‌ | Kannada Prabha

ಸಾರಾಂಶ

ರಾಜ್ಯಸಭೆಯ ಆಮ್‌ ಆದ್ಮಿ ಪಕ್ಷದ (ಆಪ್‌) ಉಪನಾಯಕ ಹುದ್ದೆಯಿಂದ ತಮ್ಮನ್ನು ವಜಾಗೊಳಿಸಿದ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿರುವ ಸಂಸದ ರಾಘವ್‌ ಛಡ್ಡಾ, ‘ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು ಸೋಲಿಸಲಾಗಿಲ್ಲ’ ಎಂದು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಆಪ್‌ ಕೂಡ ಅವರಿಗೆ ತಿರುಗೇಟು ನೀಡಿದ್ದು, ‘ಛಡ್ಡಾ ಕೇಂದ್ರದ ವಿರುದ್ಧ ಮಾತಾಡಲು ನಾಚಿಕೊಳ್ಳುತ್ತಿದ್ದರು ಮತ್ತು ಸರ್ಕಾರದ ಬಗ್ಗೆ ಮೃದುಧೋರಣೆ ಹೊಂದಿದ್ದರು’ ಎಂದು ಆರೋಪಿಸಿದೆ.

ರಾಜ್ಯಸಭೆ ಆಪ್‌ ಉಪನಾಯಕ ಸ್ಥಾನದಿಂದ ವಜಾಕ್ಕೆ ತಿರುಗೇಟು

ಅವರು ಕೇಂದ್ರದ ವಿರುದ್ಧ ಮಾತಾಡುತ್ತಿರಲಿಲ್ಲ: ಆಪ್‌ ಆರೋಪ

ನವದೆಹಲಿ: ರಾಜ್ಯಸಭೆಯ ಆಮ್‌ ಆದ್ಮಿ ಪಕ್ಷದ (ಆಪ್‌) ಉಪನಾಯಕ ಹುದ್ದೆಯಿಂದ ತಮ್ಮನ್ನು ವಜಾಗೊಳಿಸಿದ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿರುವ ಸಂಸದ ರಾಘವ್‌ ಛಡ್ಡಾ, ‘ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು ಸೋಲಿಸಲಾಗಿಲ್ಲ’ ಎಂದು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಆಪ್‌ ಕೂಡ ಅವರಿಗೆ ತಿರುಗೇಟು ನೀಡಿದ್ದು, ‘ಛಡ್ಡಾ ಕೇಂದ್ರದ ವಿರುದ್ಧ ಮಾತಾಡಲು ನಾಚಿಕೊಳ್ಳುತ್ತಿದ್ದರು ಮತ್ತು ಸರ್ಕಾರದ ಬಗ್ಗೆ ಮೃದುಧೋರಣೆ ಹೊಂದಿದ್ದರು’ ಎಂದು ಆರೋಪಿಸಿದೆ.

ಎಕ್ಸ್‌ನಲ್ಲಿ ವಿಡಿಯೋ ಸಂದೇಶ ನೀಡುರುವ ಛಡ್ಡಾ, ‘ನನಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಆಪ್‌ ಸಂಸತ್ತಿಗೆ ತಿಳಿಸಿದೆ. ನನ್ನ ಮೌನವನ್ನು ಸೋಲೆಂದು ತೆಗೆದುಕೊಳ್ಳಬೇಡಿ. ನಾನು ಆಮ್ ಆದ್ಮಿ (ಸಾಮಾನ್ಯ ಜನರಿಗೆ) ಪ್ರಯೋಜನಕಾರಿಯಾದ ಹಲವಾರು ವಿಷಯಗಳನ್ನು ಎತ್ತಿದೆ. ಅದು ಆಮ್ ಆದ್ಮಿ ಪಕ್ಷಕ್ಕೆ ಯಾವ ಹಾನಿಯನ್ನುಂಟುಮಾಡಿತು? ಯಾರಾದರೂ ನನ್ನನ್ನು ಮಾತನಾಡದಂತೆ ತಡೆಯಲು ಏಕೆ ಬಯಸುತ್ತಾರೆ?’ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಇದಕ್ಕೆ ಎಕ್ಸ್‌ ಮೂಲಕವೇ ತಿರುಗೇಟು ನೀಡಿರುವ ದೆಹಲಿ ಆಪ್‌ ಅಧ್ಯಕ್ಷ ಸೌರಭ್‌ ಭಾರದ್ವಾಜ್‌, ‘ಪ್ರತಿಪಕ್ಷಗಳು ಸಂಸತ್ತಿನಲ್ಲಿ ಸಭಾತ್ಯಾಗ ಮಾಡಿದಾಗಲೆಲ್ಲಾ ಛಡ್ಡಾ ಭಾಗವಹಿಸಲಿಲ್ಲ. ಅವರು ಆಯ್ಕೆಯಾದ ಪಂಜಾಬ್ ಬಗ್ಗೆ ವಿಷಯಗಳನ್ನು ಎತ್ತಲಿಲ್ಲ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದಾಗ ಛಡ್ಡಾ ವಿದೇಶದಲ್ಲಿ ಅಡಗಿಕೊಂಡಿದ್ದರು’ ಎಂದು ವಾಗ್ದಾಳಿ ನಡೆಸಿದ್ದಾರೆ.

==

ಭಾರತದತ್ತ ಹೊರಟಿದ್ದ ಇರಾನ್‌ ತೈಲ ಹಡಗು ಚೀನಾಕ್ಕೆ ಯಾನ

ನವದೆಹಲಿ: ಭಾರತದತ್ತ ಹೊರಟಿದ್ದ ಇರಾನ್‌ ತೈಲವಿದ್ದ ಹಡಗೊಂದು ದಿಢೀರ್‌ ಮಾರ್ಗ ಮಧ್ಯೆ ತನ್ನ ಪಥ ಬದಲಿಸಿ ಚೀನಾದತ್ತ ಹೊರಟಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಡಗು ತನ್ನ ಭಾರತದ ಬದಲು ಚೀನಾದತ್ತ ಮುಖಮಾಡಲು ಹಣ ಪಾವತಿ ವಿಚಾರವೇ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಅಮೆರಿಕದ ನಿರ್ಬಂಧದ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಿಂದ ಭಾರತವು ಇರಾನ್‌ ತೈಲ ಖರೀದಿ ಮಾಡಿರಲಿಲ್ಲ. ಆ ಬಳಿಕ ಇದೇ ಮೊದಲ ಬಾರಿಗೆ ಇರಾನ್‌ ತೈಲ ಹೊತ್ತ ಹಡಗೊಂದು ಭಾರತದತ್ತ ಹೊರಟಿತ್ತು. 2002ರಲ್ಲಿ ನಿರ್ಮಿತ ಈ ಪಿಂಗ್‌ಶುನ್‌ ಟ್ಯಾಂಕರ್‌ ಮೇಲೆ 2025ರಿಂದ ಅಮೆರಿಕ ನಿರ್ಬಂಧವಿದೆ. ಕಳೆದ ಮೂರು ದಿನಗಳಿಂದ ಗುಜರಾತ್‌ನ ವಡೋದರಾದ ಕಡೆ ಈ ಹಡಗು ಪ್ರಯಾಣ ನಡೆಸುತ್ತಿತ್ತು. ಇದೀಗ ದಿಢೀರ್‌ ಮಾರ್ಗ ಬದಲಿಸಿ ಚೀನಾದ ಡಾಂಗ್‌ಯಿಂಗ್‌ನತ್ತ ತೆರಳುತ್ತಿದೆ ಎಂದು ಸರಕು ಮಾರುಕಟ್ಟೆ ವಿಶ್ಲೇಷಣೆ ಸಂಸ್ಥೆ ಕೆಪ್ಲರ್‌ನ ಮುಖ್ಯ ಸಂಶೋಧನಾ ವಿಶ್ಲೇಷಕ ಸುಮಿತ್‌ ರಿಟೋಲಿಯಾ ಅವರು ತಿಳಿಸಿದ್ದಾರೆ.

==

ಭಾರತಕ್ಕೆ ಇನ್ನಷ್ಟು ತೈಲ, ಅನಿಲ ಪೂರೈಸಲು ಸಿದ್ಧ: ರಷ್ಯಾ ಆಫರ್‌

ಉಪಪ್ರಧಾನಿ ಮಂಟುರೋವ್ ಭಾರತ ಭೇಟಿ ವೇಳೆ ಘೋಷಣೆ

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿರುವ ನಡುವೆಯೇ, ರಷ್ಯಾ ಭಾರತಕ್ಕೆ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲದ (ಎಲ್‌ಎನ್‌ಜಿ) ಪೂರೈಕೆಯನ್ನು ಹೆಚ್ಚಿಸುವ ಆಫರ್‌ ನೀಡಿದೆ. ಭಾರತ ಪ್ರವಾಸದಲ್ಲಿರುವ ರಷ್ಯಾದ ಉಪಪ್ರಧಾನಿ ಡೆನಿಸ್ ಮಂಟುರೋವ್ ಅವರು ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ, ರಷ್ಯಾ ಕಂಪನಿಗಳು ಭಾರತಕ್ಕೆ ತೈಲ ಮತ್ತು ಎಲ್‌ಎನ್‌ಜಿ ಪೂರೈಕೆಯನ್ನು ಹೆಚ್ಚಿಸಲಿವೆ ಎಂದು ದೃಢಪಡಿಸಿದ್ದಾಗಿ ರಷ್ಯಾ ಹೇಳಿಕೆ ನೀಡಿದೆ.

==

ಇಂಡಕ್ಷನ್‌ ಸ್ಟವ್‌, ಪಾತ್ರೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಚಿಂತನೆ

ಗ್ಯಾಸ್‌ಟ್ರಬಲ್‌ ಹಿನ್ನೆಲೆ, ಕೇಂದ್ರದಿಂದ ಈ ನಿರ್ಧಾರ

ನವದೆಹಲಿ: ಕೊಲ್ಲಿ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಗ್ಯಾಸ್‌ ಟ್ರಬಲ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ರೀತಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಇರಾನ್‌ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿದ್ಯುತ್‌ ಆಧಾರಿತ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ದೇಶದಲ್ಲಿ ಇಂಡಕ್ಷನ್‌ ಕುಕ್ಕರ್‌ಗಳು,ಕಿಟೆಲ್‌ಗಳು, ಪಾತ್ರೆಗಳ ಮಾರಾಟ ಹೆಚ್ಚಾಗಿದೆ.ಇದರ ನಡುವೆಯೇ ವಿದ್ಯುತ್‌ ಇಲಾಖೆ ಕಾರ್ಯದರ್ಶಿ ಪಂಕಜ್‌ ಅಗರ್ವಾಲ್‌ ಸೇರಿ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ಈ ವಿಚಾರವಾಗಿ ಚರ್ಚೆ ನಡೆಸಿದರು. ಇಂಡಕ್ಷನ್‌ ಕುಕ್ಕರ್‌ಗಳು ಹಾಗೂ ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆಯನ್ನು ಯಾವ ರೀತಿ ಹೆಚ್ಚಳ ಮಾಡಬಹುದು ಎಂಬ ಕುರಿತು ಸಮಾಲೋಚನೆ ನಡೆಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಾಲ್ಡಾ ದಿಗ್ಬಂದನ ಸಂಚುಕೋರ ಬೆಂಗಳೂರಿಗೆ ಪರಾರಿ ವೇಳೆ ಸೆರೆ
ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅರಿದಮನ್‌ ಸೇನೆಗೆ