ನವದೆಹಲಿ: ದೇಶದಲ್ಲಿ ಚಿನ್ನ, ಬೆಳ್ಳಿ ದರ ಏರಿಕೆ ಪರ್ವ ಮುಂದುವರೆದಿದ್ದು, ಬೆಳ್ಳಿ ಬೆಲೆ ಕೆಜಿಗೆ ದಾಖಲೆಯ 1.98 ಲಕ್ಷ ರು.ಗೆ ತಲುಪಿದ್ದರೆ, ಚಿನ್ನದ ಬೆಲೆ ದಾಖಲೆ 1.3 ಲಕ್ಷ ರು.ಗೆ ತಲುಪಿದೆ.
ಕಳೆದ 10 ತಿಂಗಳಿನಿಂದ ಸತತ ಏರುಗತಿಯಲ್ಲೇ ಇರುವ ಬೆಳ್ಳಿಯ ಬೆಲೆ ಮಂಗಳವಾರ ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 8600 ರು.ಏರಿಕೆ ಕಂಡು 1,98,700 ರು.ಗೆ ತಲುಪಿದೆ. ಇನ್ನು 10 ಗ್ರಾಂ ಚಿನ್ನದ ದರ 1.21 ಲಕ್ಷ ರು.ಗೆ ತಲುಪಿದೆ.
ಇನ್ನು ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 2850 ರು. ಏರಿಕೆ ಕಂಡು 1,30,800 ರು.ಗೆ ಮುಟ್ಟಿದೆ.
ದಾಖಲೆ ಏರಿಕೆ:
ಅಂಕಿಅಂಶಗಳ ಅನ್ವಯ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 78950 ರು. ಇತ್ತು. ಅದು ಕಳೆದ 10 ತಿಂಗಳಲ್ಲಿ 51850 ರು.ಏರಿಕೆ ಕಂಡು 1.30 ಲಕ್ಷ ರು. ತಲುಪಿದೆ.
ಇನ್ನೊಂದೆಡೆ ಕಳೆದ ಡಿಸೆಂಬರ್‌ನಲ್ಲಿ 89700 ರು. ಇದ್ದ 1 ಕೆಜಿ ಬೆಳ್ಳಿ ಬೆಲೆ 2025ರ ಜೂ.5ರಂದು 1 ಲಕ್ಷ ರು. ತಲುಪಿತ್ತು. ಅದಾದ ಕೇವಲ 4 ತಿಂಗಳಲ್ಲಿ ಹೆಚ್ಚು ಕಡಿಮೆ ಮತ್ತೆ 98000 ರು. ಏರಿಕೆ ಕಂಡಿದೆ.ಇನ್ನು ವಿಶಾಖಪಟ್ಟಣ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳ್ಳಿ ಬೆಲೆ 9000 ರು. ಏರಿಕೆ ಕಂಡು ಪ್ರತಿ ಕೆಜಿಗೆ 200600 ರು. ತಲುಪಿದೆ.
ದರ ಏರಿಕೆಗೆ ಕಾರಣಗಳೇನು?:
ಭೌಗೋಳಿಕ ರಾಜಕೀಯ ಕಾರಣಗಳು, ಜಾಗತಿಕ ಸಂಘರ್ಷ, ಮಾರುಕಟ್ಟೆಯಗೆ ಪೂರೈಕೆಯಲ್ಲಿನ ಕಡಿತ, ಹಬ್ಬದ ಋತು ಆರಂಭವಾಗಿರುವುದು, ಜನತೆ ಬೆಳ್ಳಿ ಮತ್ತು ಬಂಗಾರದ ಮೇಲಿನ ಹೂಡಿಕೆ ಹೆಚ್ಚಿರುವುದು ಈ ಪ್ರಮಾಣದ ದರ ಏರಿಕೆಗೆ ಕಾರಣವೆನ್ನಲಾಗಿದೆ. ಇನ್ನೊಂದೆಡೆ ದಾಖಲೆ ಪ್ರಮಾಣ ತಲುಪಿರುವ ತನ್ನ ಸಾಲದ ಮೊತ್ತ ಕಡಿಮೆ ಮಾಡಲು ಅಮೆರಿಕ ಉದ್ದೇಶಪೂರ್ವಕಾಗಿ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂಬ ವರದಿಗಳೂ ಇವೆ.
ಬೆಳ್ಳಿ ದರ ಸಾಗಿದ ಹಾದಿ
1970 500 ರು.
1975 1000 ರು.
1987 5000 ರು.
2004 10000 ರು.
2009 25000 ರು.
2020 50000 ರು.
2023 75000 ರು.
2025 100000 ರು.
2025 200000 ರು.