;Resize=(412,232))
ಮುಂಬೈ: ಕಳೆದ ವರ್ಷ ಬೆಂಗಳೂರು ಸಂಗೀತ ಕಾರ್ಯಕ್ರಮದ ವೇಳೆ ಕನ್ನಡ ಹಾಡಿಗೆ ಮನವಿ ಮಾಡಿದ್ದನ್ನು ಪಹಲ್ಗಾಂ ಭಯೋತ್ಪಾದಕ ದಾಳಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಗಾಯಕ ಸೋನು ನಿಗಮ್ ಇದೀಗ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರ ಬಳಿ ಮಾತುಕತೆ ನಡೆಸಿ ಕೊನೆಗೂ ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.
ಸೋಮವಾರ ವಿಡಿಯೋ ಮೂಲಕ ಕ್ಷಮೆ ಕೋರಿರುವ ಅವರು, ‘ನನ್ನ ಪ್ರೀತಿಯ ಕರ್ನಾಟಕ ಕುಟುಂಬ, ಸತ್ಯ ನನಗೆ ಗೊತ್ತು. ಸರ್ವಶಕ್ತ ಭಗವಂತ ಮತ್ತು ಅಂದಿನ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲಾ ಜನರಿಗೆ ಸತ್ಯ ಗೊತ್ತು. ಹಾಗಿದ್ದರೂ, ನಾನು ನಾರಾಯಣ ಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಒಬ್ಬ ಅದ್ಭುತ ವ್ಯಕ್ತಿ ಮತ್ತು ನಮ್ಮದು ಬಹಳ ಆತ್ಮೀಯ ಹಾಗೂ ಗೌರವಾನ್ವಿತ ಚರ್ಚೆಯಾಗಿತ್ತು. ನನಗೆ ಅವರ ಬಗ್ಗೆ ಅಪಾರ ಗೌರವವಿದೆ. ಹಾಗಾಗಿ, ನಾನು ಹೇಳುವುದಿಷ್ಟೆ. ನೀವು ಯಾರನ್ನಾದರೂ ಪ್ರೀತಿಸಿದಾಗ ಮತ್ತು ಆ ಸಂಬಂಧ ಉಳಿಯಬೇಕೆಂದು ಬಯಸಿದಾಗ, ಸಾವಿರ ಬಾರಿ ಕ್ಷಮೆ ಕೇಳಲು ನೀವು ಹಿಂದೆಮುಂದೆ ನೋಡುವುದಿಲ್ಲ. ಆದ್ದರಿಂದ ನಾನು ಅಜಾಗರೂಕತೆಯಿಂದ ಯಾವುದಾದರೂ ಮಾತುಗಳನ್ನು ಆಡಿ ನಿಮ್ಮನ್ನು ನೋಯಿಸಿದ್ದರೆ, ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.
‘ನಾನು ಯಾರ ಮನಸ್ಸನ್ನೂ ನೋಯಿಸುವ ವ್ಯಕ್ತಿಯಲ್ಲ ಎಂಬುದು ನಿಮಗೆ ತಿಳಿದಿದೆ, ಅದರಲ್ಲೂ ವಿಶೇಷವಾಗಿ ನನ್ನ ಕರ್ನಾಟಕದ ಕುಟುಂಬವನ್ನು ನೋಯಿಸುವವನಲ್ಲ. ಕಳೆದ 30 ವರ್ಷಗಳಲ್ಲಿ ನೀವು ನನಗೆ ನೀಡಿದ ಅಪಾರ ಪ್ರೀತಿ ಮತ್ತು ಗೌರವಕ್ಕೆ ಯಾವುದೇ ರೀತಿಯ ಸಣ್ಣ ತಪ್ಪು ತಿಳಿವಳಿಕೆ ಕಳಂಕ ತರಬಾರದು ಅಥವಾ ಕಹಿ ಉಂಟುಮಾಡಬಾರದು ಎಂದು ಬಯಸುತ್ತೇನೆ. ದೇವರು ನಿಮ್ಮನ್ನು ಆಶೀರ್ವದಿಸಲಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ.
2025ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ, ವಿದ್ಯಾರ್ಥಿಯೊಬ್ಬರು ಕನ್ನಡ ಹಾಡು ಹಾಡುವಂತೆ ಕೋರಿದ್ದಕ್ಕೆ ಸೋನು ನಿಗಮ್ ಪಹಲ್ಗಾಂ ಉಗ್ರ ದಾಳಿಯನ್ನು ಉಲ್ಲೇಖಿಸಿ ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೂರು ದಾಖಲಿಸಿತ್ತು. ಇದೇ ಅ.24ರಂದು ಬೆಂಗಳೂರಿನಲ್ಲಿ ಸೋನು ಅವರ ಮತ್ತೊಂದು ಕಾರ್ಯಕ್ರಮ ಆಯೋಜನೆಯಾಗಿದ್ದು, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ನಾರಾಯಣ ಗೌಡ ಅವರ ಜತೆ ಸೋನು ಮಾತುಕತೆ ನಡೆಸಿ, ಬಳಿಕ ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.
- ಕಳೆದ ವರ್ಷ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಕನ್ನಡ ಎಂದಿದ್ದ ಜನರು
- ಆ ಬೇಡಿಕೆಯನ್ನು ಪಹಲ್ಗಾಂ ದಾಳಿಗೆ ಹೋಲಿಕೆ ಮಾಡಿ ಗಾಯಕನ ವಿವಾದ
- ಕನ್ನಡಿಗರಿಂದ ತೀವ್ರ ಆಕ್ರೋಶ. ಸೋನು ನಿಗಮ್‌ಗೆ ರಾಜ್ಯದಲ್ಲಿ ನಿಷೇಧ
- ಇದರ ಬೆನ್ನಲ್ಲೇ ಅ.24ಕ್ಕೆ ಬೆಂಗಳೂರಿನಲ್ಲಿ ಕಾರ್ಯಕ್ರಮ. ಕರವೇ ವಿರೋಧ
- ನಾರಾಯಣಗೌಡರ ಜತೆ ಮಾತುಕತೆ ನಡೆಸಿ ಕ್ಷಮೆ ಕೇಳಿದ ಸೋನು ನಿಗಂ