6 ವರ್ಷಗಳ ಬಳಿಕ ಎನ್‌ಡಿಎತೆಕ್ಕೆಗೆ ಮರಳಿದ ಅಕಾಲಿದಳ

KannadaprabhaNewsNetwork |  
Published : Nov 25, 2026, 01:45 AM IST
ಬಿಜೆಪಿ  | Kannada Prabha

ಸಾರಾಂಶ

ಪಂಜಾಬ್‌ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆರು ವರ್ಷಗಳಿಂದ ಮುನಿಸಿಕೊಂಡು ದೂರವಾಗಿದ್ದ ಹಳೆಯ ಮಿತ್ರ ಪಕ್ಷಗಳಲ್ಲೊಂದಾದ ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ವು ಎನ್‌ಡಿಎ ತೆಕ್ಕೆಗೆ ಅಧಿಕೃತವಾಗಿ ವಾಪಸಾಗಿದೆ.

- ಪಂಜಾಬ್‌ ಚುನಾವಣೆಗೂ ಮುನ್ನ ಒಂದಾದ ಹಳೇ ದೋಸ್ತಿಗಳು

- 2020ರಲ್ಲಿ ಕೃಷಿ ಕಾನೂನಿನಿಂದಾಗಿ ದೂರವಾಗಿದ್ದ ಅಕಾಲಿದಳ

- ಅಮಿತ್‌ ಶಾ ಸಮ್ಮುಖದಲ್ಲಿ ಈಗ ಮತ್ತೆ ಎನ್‌ಡಿಎ ತೆಕ್ಕೆಗೆ ವಾಪಸ್‌

ನವದೆಹಲಿ: ಪಂಜಾಬ್‌ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆರು ವರ್ಷಗಳಿಂದ ಮುನಿಸಿಕೊಂಡು ದೂರವಾಗಿದ್ದ ಹಳೆಯ ಮಿತ್ರ ಪಕ್ಷಗಳಲ್ಲೊಂದಾದ ಶಿರೋಮಣಿ ಅಕಾಲಿ ದಳ(ಎಸ್‌ಎಡಿ)ವು ಎನ್‌ಡಿಎ ತೆಕ್ಕೆಗೆ ಅಧಿಕೃತವಾಗಿ ವಾಪಸಾಗಿದೆ. ಮಂಗಳವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಅಕಾಲಿದಳ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌ ಅವರ ಉಪಸ್ಥಿತಿಯಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಯಿತು.

ಪಂಜಾಬ್‌ನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿತ್ರಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಅಕಾಲಿ ದಳಕ್ಕೇ ಹೋಗಲಿದೆ. ಈ ಮೈತ್ರಿಕೂಟದಲ್ಲಿ ಅಕಾಲಿದಳ ಹಿರಿಯಣ್ಣ ಎಂದು ಈ ವೇಳೆ ಅಮಿತ್‌ ಶಾ ಸ್ಪಷ್ಪಪಡಿಸಿದ್ದು, ಅಕಾಲಿದಳದ ವಾಪಸಾತಿಯಿಂದ ಎನ್‌ಡಿಎ ಮೈತ್ರಿಕೂಟ ಈಗ ಪರಿಪೂರ್ಣವಾದಂತಾಗಿದೆ ಎಂದೂ ಬಣ್ಣಿಸಿದ್ದಾರೆ.

ಕೇಂದ್ರ ಅನುಷ್ಠಾನಕ್ಕೆ ತರಲುದ್ದೇಶಿಸಿದ್ದ ಕೃಷಿ ಕಾನೂನು ವಿಚಾರವಾಗಿ ಪಂಜಾಬ್‌ನಲ್ಲಿ ಉಂಟಾಗಿದ್ದ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ 2020ರಲ್ಲಿ ಅಕಾಲಿದಳವು ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿತ್ತು. ಈ ಮೂಲಕ ಎನ್‌ಡಿಎ ಜತೆಗಿನ ಅಕಾಲಿದಳದ 24 ವರ್ಷಗಳ ಮೈತ್ರಿ ಮುರಿದುಬಿದ್ದಿತ್ತು. ಬಳಿಕ 2021ರಲ್ಲಿ ವಿವಾದಿತ ಕೃಷಿ ಕಾನೂನನ್ನು ಕೇಂದ್ರ ಹಿಂಪಡೆದಿತ್ತು.

==

50ರ ದಶಕದ ಮಿತ್ರತ್ವ

ಬಿಜೆಪಿ, ಅಕಾಲಿ ದಳದ ನಡುವೆ 50, 60ರ ದಶಕದಲ್ಲೇ ಇತ್ತು. ಆದರೆ ಈ ಮೈತ್ರಿಗೆ ಗಟ್ಟಿ ಅಡಿಪಾಯ ಬಿದ್ದಿದ್ದು ಮಾತ್ರ ಪ್ರಕಾಶ್‌ ಸಿಂಗ್ ಬಾದಲ್‌ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಕಾಲದಲ್ಲಿ. ವಾಜಪೇಯಿ ನೇತೃತ್ವದಲ್ಲಿ ರಚನೆಯಾದ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಬೆಂಬಲಿಗ ಪಕ್ಷ ಅಕಾಲಿದಳ ಆಗಿತ್ತು.

1967ರಲ್ಲಿ ಮೊದಲ ಬಾರಿ ಪಂಜಾಬ್‌ನಲ್ಲಿ ಅಕಾಲಿದಳ ನೇತೃತ್ವದ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಆಗಿನ ಜನಸಂಘ ಬೆಂಬಲಿಸಿತ್ತು. 1996ರಲ್ಲಿ ಬಿಜೆಪಿ-ಅಕಾಲಿದಳ ನಡುವೆ ಅಧಿಕೃತವಾಗಿ ಮೈತ್ರಿ ಆರಂಭವಾಯಿತು. 1997, 2002, 2007, 2012 ಮತ್ತು 2017ರಲ್ಲಿ ಮೈತ್ರಿಕೂಟ ಸ್ಪರ್ಧಿಸಿ, ಮೂರು ಬಾರಿ ಗೆದ್ದಿತ್ತು. ಸತತ 15 ವರ್ಷ ಅಧಿಕಾರ ನಡೆಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಕೊನೆ ಬಾರಿಗೆ ಜತೆಯಾಗಿ ಎರಡೂ ಪಕ್ಷ ಸ್ಪರ್ಧಿಸಿದ್ದವು. 2020ರಲ್ಲಿ ಕೃಷಿ ಕಾನೂನು ವಿಚಾರವಾಗಿ ಪಂಜಾಬ್‌ನಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದ ಭಾಗವಾಗಿದ್ದ ಅಕಾಲಿದಳ ಮೈತ್ರಿ ಮುರಿಯಿತು.

===

ಅಕಾಲಿದಳ- ಬಿಜೆಪಿಯ

ಮೈತ್ರಿಗೆ ಕೆಲಸ ಮಾಡಿದ್ದಅಮರಿಂದರ್‌ಸಿಂಗ್‌ ಗೈರು

ನವದೆಹಲಿ: ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ ಎನ್‌ಡಿಎ ಕೂಟ ಸೇರುವ ಕಾರ್ಯಕ್ರಮದಲ್ಲಿ, ಮಾಜಿ ಸಿಎಂ, ಬಿಜೆಪಿ ನಾಯಕ ಅಮರೀಂದರ್‌ ಸಿಂಗ್‌ ಗೈರು ಭಾರೀ ಗಮನ ಸೆಳೆದಿದೆ. ವಾಸ್ತವವಾಗಿ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಮರಳಲು ಬಿಜೆಪಿ-ಶಿರೋಮಣಿ ಮೈತ್ರಿ ಅನಿವಾರ್ಯ ಎಂದು ಪ್ರತಿಪಾದಿಸಿದ್ದೇ ಸಿಂಗ್‌. ಜೊತೆಗೆ ಈ ಸಂಬಂಧ ಎರಡೂ ಬಣಗಳ ಒಗ್ಗೂಡಿಸುವಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು. ಹೀಗಿರುವಾಗ ಮಂಗಳವಾರ ಅವರ ಗೈರಾಗಿದ್ದು ನಾನಾ ಊಹಾಪೋಹಾಗಳಿಗೆ ನಾಂದಿ ಹಾಡಿದೆ. 2021ರಲ್ಲಿ ಕಾಂಗ್ರೆಸ್‌ ತೊರೆದಿದ್ದ ಮಾಜಿ ಸಿಎಂ ಅಮರಿಂದರ್‌ 2022ರಲ್ಲಿ ಬಿಜೆಪಿ ಸೇರಿದ್ದರು. ಆದರೆ ಪಂಜಾಬ್‌ ವಿಧಾನಸಭಾ ಚುನಾವಣೆಗೂ ಮುನ್ನ ಅಮರೀಂದರ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ವದಂತಿ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂ ಆದೇಶಕ್ಕೇ ತ.ನಾಡಿನ ವಿಜಯ್‌ ಸರ್ಕಾರ ಸಡ್ಡು
ನನ್ನನ್ನೂ ಪ್ರಧಾನಿ ಹುದ್ದೆ ಸೆಳೆದಿತ್ತು: ಸೋನಿಯಾ