ಅಮೇಥಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ಅಮೇಠಿಯಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಬಿಜೆಪಿ ಸಂಸದೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಮೇಠಿಗೆ ರಾಹುಲ್ ಗಾಂಧಿ ಆಗಮಿಸಿದ್ದು, ಈ ಕುರಿತಾಗಿ ಸುದ್ದಿಗಾರರ ಜೊತೆ ಸ್ಮೃತಿ ಇರಾನಿ ಮಾತನಾಡಿದರು.
‘ಅಮೇಠಿಯನ್ನು ರಾಹುಲ್ ಗಾಂಧಿ ಅಧಿಕಾರದ ಕೇಂದ್ರವಾಗಿ ಪರಿಗಣಿಸುತ್ತಾರೆ. ಆದರೆ ಯಾವುದೇ ಸೇವೆಯನ್ನು ಇಲ್ಲಿಗೆ ನೀಡಿಲ್ಲ. ಹೀಗಾಗಿಯೇ ಖಾಲಿ ರಸ್ತೆಗಳು ರಾಹುಲ್‌ರನ್ನು ಸ್ವಾಗತಿಸಿದವು.
ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ ಕಾರ್ಯಕರ್ತರು ಅವರ ಯಾತ್ರೆಯಲ್ಲಿ ಭಾಗವಹಿಸಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರಿಗೆ ಧೈರ್ಯವಿದ್ದರೆ ಅಮೇಠಿಯಿಂದ ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ಅಮೇಠಿಯಿಂದ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆದರೆ ವಯನಾಡು ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದರು.