ಯಾವುದೇ ಒಂದು ನಿರ್ದಿಷ್ಟ ಆನ್‌ಲೈನ್ ಅಗ್ರಿಗೇಟರ್ ಜತೆಗೆ ಕನಿಷ್ಠ 90 ದಿನ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ (ಡೆಲಿವರಿ ಬಾಯ್‌ಗಳು) ಆರೋಗ್ಯ ಸೇವೆಯಂಥ ಸೌಲಭ್ಯ ಕಲ್ಪಿಸುವ ಸಾಮಾಜಿಕ ಭದ್ರತೆ(ಕೇಂದ್ರ) ನಿಯಮಗಳ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
- ಸ್ವಿಗ್ಗಿ, ಝೊಮೆಟೋ ನೌಕರರಿಗೆ ಸಿಗಲಿದೆ ವಿಮಾ ಸೌಲಭ್ಯ
- ಕೇಂದ್ರದಿಂದ ಸೇವಾಭದ್ರತೆ ಕರಡು ನಿಯಮ ಬಿಡುಗಡೆ- ಒಂದೇ ಕಂಪನಿ ಜತೆ 90 ದಿನ ಕೆಲಸ ಮಾಡಿದರೆ ಭದ್ರತೆ
ನವದೆಹಲಿ: ಯಾವುದೇ ಒಂದು ನಿರ್ದಿಷ್ಟ ಆನ್‌ಲೈನ್ ಅಗ್ರಿಗೇಟರ್ ಜತೆಗೆ ಕನಿಷ್ಠ 90 ದಿನ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ (ಡೆಲಿವರಿ ಬಾಯ್‌ಗಳು) ಆರೋಗ್ಯ ಸೇವೆಯಂಥ ಸೌಲಭ್ಯ ಕಲ್ಪಿಸುವ ಸಾಮಾಜಿಕ ಭದ್ರತೆ(ಕೇಂದ್ರ) ನಿಯಮಗಳ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.ಅದರಂತೆ ಇನ್ನು ಆನ್‌ಲೈನ್ ಪ್ಲಾಟ್‌ಫ್ಲಾರ್ಮ್‌ಗಳಿಗಾಗಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೂ ಆರೋಗ್ಯ, ಜೀವ ಮತ್ತು ವೈಯಕ್ತಿಕ ಅಪಘಾತ ವಿಮೆ ಸೌಲಭ್ಯಗಳು ಸಿಗಲಿವೆ.
ಇತ್ತೀಚೆಗೆ ತಮಗೆ ಸೇವಾ ಭದ್ರತೆ ಇಲ್ಲ ಎಂದು ಗಿಗ್ ಕಾರ್ಮಿಕರು ಮುಷ್ಕರ ಮಾಡಿದ್ದರು. ಇದರ ಬೆನ್ನಲ್ಲೇ ಈ ಕರಡು ನಿಯಮಗಳು ಪ್ರಕಟವಾಗಿವೆ.ಏನಿದೆ ಕರಡು ನಿಯಮದಲ್ಲಿ?:
ಹಣಕಾಸು ವರ್ಷವೊಂದರಲ್ಲಿ ಒಂದೇ ಆನ್‌ಲೈನ್ ಅಗ್ರಿಗೇಟರ್‌ಗಾಗಿ ಕನಿಷ್ಠ 90 ದಿನ, ಅದೇ ರೀತಿ ಒಂದಕ್ಕಿಂತ ಹೆಚ್ಚು ಆನ್‌ಲೈನ್ ಅಗ್ರಿಗೇಟರ್ ಪರ ಕೆಲಸ ಮಾಡಿದ್ದರೆ ಅವರಿಗೆ ಸೇವಾ ಭದ್ರತೆ ಸೌಲಭ್ಯ ಅನ್ವಯವಾಗಲಿವೆ.ಇನ್ನು ವಿವಿಧ ಅಗ್ರಿಗೇಟರ್‌ಗಳ ಪರವಾಗಿ ಕನಿಷ್ಠ 120 ದಿನ ಕೆಲಸ ಮಾಡಿದ್ದರೆ ಅಂಥ ಗಿಗ್ ಕಾರ್ಮಿಕರಿಗೆ (ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಕಾರ್ಮಿಕರು) ಆರೋಗ್ಯ, ಜೀವ ಮತ್ತು ವೈಯಕ್ತಿಕ ಅಪಘಾತ ವಿಮೆ ಸೌಲಭ್ಯಗಳು ಸಿಗಲಿವೆ.
ಒಂದು ವೇಳೆ ಒಬ್ಬ ಗಿಗ್ ಕಾರ್ಮಿಕ ಒಂದೇ ದಿನ ಮೂರು ಅಗ್ರಿಗೇಟರ್‌ಗಳ ಜತೆ ಕೆಲಸ ಮಾಡಿದರೆ ಆತನ ಒಂದು ದಿನದ ಸೇವೆಯನ್ನು 3 ದಿನದ ಕೆಲಸ ಎಂದು ಪರಿಗಣಿಸಿ ಸೇವಾ ಭದ್ರತೆ ಸೌಲಭ್ಯಗಳಿಗಾಗಿ ಪರಿಗಣಿಸಲಾಗುತ್ತದೆ.ಹೇಗೆ ಸಿಗುತ್ತೆ ಸೌಲಭ್ಯ?:
16 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಗಿಗ್ ಕಾರ್ಮಿಕರು ತಮ್ಮ ಆಧಾರ್ ನಂಬರ್ ಮತ್ತು ಇತರೆ ಅಗತ್ಯ ದಾಖಲಾತಿಗಳನ್ನು ಕೊಟ್ಟು ನೋಂದಣಿ ಮಾಡಿಸಿಕೊಳ್ಳಬೇಕು. ಅಗ್ರಿಗೇಟರ್‌ಗಳು ಗಿಗ್ ಕಾರ್ಮಿಕರು ಅಥವಾ ಪ್ಲ್ಯಾಟ್‌ಫಾರ್ಮ್ ನೌಕರರ ಈ ಮಾಹಿತಿಗಳನ್ನು ಯುನಿವರ್ಸಲ್ ಅಕೌಂಟ್ ನಂಬರ್ ಅಥವಾ ವಿಶೇಷ ಐಡಿ ಸೃಷ್ಟಿಗಾಗಿ ಕೇಂದ್ರೀಯ ಪೋರ್ಟಲ್ ಜತೆಗೆ ಹಂಚಿಕೊಳ್ಳಬೇಕು. ಆ ಬಳಿಕ ಪ್ರತಿ ಅರ್ಹ ಗಿಗ್ ಕಾರ್ಮಿಕನಿಗೆ ಡಿಜಿಟಲ್ ಅಥವಾ ಭೌತಿಕ ಗುರುತಿನ ಚೀಟಿ ವಿತರಿಸಲಾಗುತ್ತದೆ. ನಿರ್ದಿಷ್ಟ ಪೋರ್ಟಲ್ ಮೂಲಕ ಈ ಗುರುತಿನ ಚೀಟಿ ಡೌಲ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ಇನ್ನು ಕೇಂದ್ರ ಸರ್ಕಾರವು ಅಗ್ರಿಗೇಟರ್‌ಗಳಿಂದ ದಾಖಲೆಗಳನ್ನು ಸಂಗ್ರಹಿಸಲು ನಿರ್ದಿಷ್ಟ ಅಧಿಕಾರಿ ಅಥವಾ ಏಜೆನ್ಸಿಯನ್ನು ನಿಯೋಜಿಸಬೇಕಾಗುತ್ತದೆ.
60 ವರ್ಷ ಪೂರ್ಣವಾದರೆ ಅಥವಾ 90ರಿಂದ 120 ದಿನಗಳ ಕಾಲ ಕೆಲಸ ಮಾಡದಿದ್ದರೆ ಅಂಥ ಗಿಗ್ ಕಾರ್ಮಿಕರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.