ಗಿಗ್‌, ಸಿನಿ, ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕೆ ಅಧಿನಿಯಮ

| Published : Jul 13 2025, 01:18 AM IST

ಸಾರಾಂಶ

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ, ಸಾಂಸ್ಕೃತಿಕ ಕ್ಷೇತ್ರದ ಕಲಾ ಕಾರ್ಮಿಕರು, ಮನೆಗೆಲಸದ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮ ರೂಪಿಸಿದ್ದು, ಸದನದಲ್ಲಿ ಅಧಿಸೂಚನೆ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಯಾಗಿ ಜಾರಿಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

- ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸಿ ಸಚಿವ ಸಂತೋಷ್ ಲಾಡ್ ಹೇಳಿಕೆ । ಸಿನಿಮಾ ಟಿಕೆಟ್‌ ಮೇಲೆ ಸೆಸ್‌ಗೆ ಸಿಎಂ ಜತೆ ಚರ್ಚೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ, ಸಾಂಸ್ಕೃತಿಕ ಕ್ಷೇತ್ರದ ಕಲಾ ಕಾರ್ಮಿಕರು, ಮನೆಗೆಲಸದ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮ ರೂಪಿಸಿದ್ದು, ಸದನದಲ್ಲಿ ಅಧಿಸೂಚನೆ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಯಾಗಿ ಜಾರಿಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದ ದೊಡ್ಡ ಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿ.ಪಂ. ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಿದೆ. ಗಿಗ್ ಕಾರ್ಮಿಕರನ್ನು ನೋಂದಾಯಿಸಿ, ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು, ಸಂಪನ್ಮೂಲ ಕ್ರೋಡೀಕರಣಕ್ಕಾಗಿ ‘ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಅಧಿನಿಯಮ-2025 ಜಾರಿ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ವರ್ಷಕ್ಕೆ ಸುಮಾರು 4 ಕೋಟಿ ಸಿನಿಮಾ ಟಿಕೆಟ್‌ ಮಾರಾಟವಾಗುತ್ತವೆ. ಟಿಕೆಟ್‌ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆಸಲಾಗುತ್ತಿದೆ. ಇದಕ್ಕಾಗಿ ‘ಕರ್ನಾಟಕ ಸಿನಿಮಾ ಮತ್ತು ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-2024’ ರಚಿಸಲಾಗಿದೆ. ಮನೆಗೆಲಸದ ಕಾರ್ಮಿಕರ ಕಲ್ಯಾಣಕ್ಕೆ ‘ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ-2025’ ರಚಿಸಲಾಗಿದೆ. ಈ ಎಲ್ಲ ಅಧಿನಿಯಮಗಳ ನಿಯಾವಳಿ ರೂಪಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ ಎಸ್. ಲಾಡ್ ಜಿಲ್ಲೆಯಲ್ಲಿ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ವಿತರಿಸುತ್ತಿದ್ದು, ಸರ್ಕಾರದ ಯೋಜನೆ, ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ಯೋಜನೆ, ಸೌಲಭ್ಯಗಳನ್ನು ಸಮಪರ್ಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಸಚಿವ ಲಾಡ್ ತಮ್ಮ ಇಲಾಖೆ ಮುಖಾಂತರ ಅನೇಕ ಜನ ಕಲ್ಯಾಣ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಕಾರ್ಮಿಕ ಇಲಾಖೆಗಷ್ಟೆ ಕಾರ್ಮಿಕ ದಿನಾಚರಣೆ ಲಾಡ್ ಸಚಿವರಾದ ನಂತರ ಮೇ 1ರಂದು ಎಲ್ಲ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತದೆ ಎಂದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನೌಡ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿಟ್ಟೆ ಮಾಧವ ವಿಠಲ ರಾವ್, ಕಾಂಗ್ರೆಸ್ ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ ಇತರರು ಇದ್ದರು.

ಕಾರ್ಮಿಕ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ ಶಿಂದಿಹಟ್ಟಿ, ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವಿಕುಮಾರ ಕಾರ್ಯಕ್ರಮ ನಡೆಸಿಕೊಟ್ಟರು. ಚೇತನ್ ಸಂಗಡಿಗರ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಅಪಘಾತದಿಂದ ಮೃತಪಟ್ಟ ಖಾಸಗಿ ವಾಣಿಜ್ಯ ಚಾಲಕರ ಅವಲಂಬಿತ ಮಹಿಳೆ ಜಗಳೂರಿನ ಗೌರಮ್ಮಗೆ ₹5 ಲಕ್ಷ ಪರಿಹಾರಧನ, ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ₹10 ಸಾವಿರ ಶೈಕ್ಷಣಿಕ ಧನಸಹಾಯದ ಚೆಕ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಯಿತು.

- - -

(ಟಾಪ್‌ ಕೊಟ್‌) ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿಗೊಳಿಸಿದ್ದು, ಈವರೆಗೂ ರಾಜ್ಯದಲ್ಲಿ 25,45,607 ಕಾರ್ಮಿಕರು, ದಾವಣಗೆರೆ ಜಿಲ್ಲೆಯಲ್ಲಿ 89,493 ಕಾರ್ಮಿಕರು ನೋಂದಣಿಯಾಗಿದ್ದಾರೆ. ಮೋಟಾರು ಕ್ಷೇತ್ರದಲ್ಲಿ ದುಡಿಯವ ಎಲ್ಲ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ. ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಅಭ್ಯರ್ಥಿಗಳನ್ನು ನೇಮಿಸಲು ‘ಆಶಾದೀಪ’ ಯೋಜನೆ ಸರ್ಕಾರ ಜಾರಿಗೊಳಿಸಿದೆ.

- ಸಂತೋಷ ಲಾಡ್, ಕಾರ್ಮಿಕ ಸಚಿವ

- - -

-12ಕೆಡಿವಿಜಿ13.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಶೈಕ್ಷಣಿಕ ನೆರವಿನ ಚೆಕ್ ವಿತರಿಸಿದರು.