ಸೋನಿಯಾ ಗಾಂಧಿ ಆರೋಗ್ಯ ಸ್ಥಿರ : ವೈದ್ಯರ ಮಾಹಿತಿ

KannadaprabhaNewsNetwork |  
Published : Jun 17, 2025, 02:38 AM ISTUpdated : Jun 17, 2025, 05:53 AM IST
ಸೋನಿಯಾ ಗಾಂಧಿ | Kannada Prabha

ಸಾರಾಂಶ

ಹೊಟ್ಟೆ ನೋವಿನ ಕಾರಣ ಭಾನುವಾರ ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಸೋಮವಾರ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ನವದೆಹಲಿ: ಹೊಟ್ಟೆ ನೋವಿನ ಕಾರಣ ಭಾನುವಾರ ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಸೋಮವಾರ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆ ಮುಖ್ಯಸ್ಥ ಡಾ. ಅಜಯ್‌ ಸ್ವರೂಪ್, ‘ಸೋನಿಯಾ ಅವರು ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರಲಾಜಿ ವಿಭಾಗದಲ್ಲಿ ದಾಖಲಾಗಿದ್ದಾರೆ. ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ವೈದ್ಯರು ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ’ ಎಂದಿದ್ದಾರೆ. ಜೂ.9ರಂದು ಕೂಡ ಸೋನಿಯಾ ಗಾಂಧಿ ಇದೇ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಅದಕ್ಕೂ ಮುನ್ನ ಶಿಮ್ಲಾದಲ್ಲಿ ಅಧಿಕ ರಕ್ತದೊತ್ತಡದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ದೇಶದ ಹಲವೆಡೆ ಜಿಯೋ ಇಂಟರ್ನೆಟ್ ಡೌನ್; ಬಳಕೆದಾರರ ಪರದಾಟ

ಮುಂಬೈ: ಸೋಮವಾರ ದೇಶದ ಹಲವೆಡೆಗಳಲ್ಲಿ ಜಿಯೋ ಇಂಟರ್ನೆಟ್ ನಿಧಾನವಾಗಿ ಬಳಕೆದಾರರು ಕಷ್ಟಪಡುವಂತಾಯಿತು. ಮೊಬೈಲ್ ಇಂಟರ್ನೆಟ್ ಕನೆಕ್ಟ್ ಆಗದಿರುವುದರಿಂದ ಹಾಗೂ ಕರೆಗಳು ಮಧ್ಯದಲ್ಲೇ ಸ್ಥಗಿತವಾದದ್ದರಿಂದ ಅನೇಕರು ಪರಿತಪಿಸುವಂತಾಯಿತು. ಸುಮಾರು ಶೇ.56 ಜನ ಮೊಬೈಲ್ ಇಂಟರ್ನೆಟ್ ಕನೆಕ್ಟ್ ಆಗಿಲ್ಲವೆಂದು, ಶೇ.22 ಮಂದಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲವೆಂದು ದೂರಿದ್ದಾರೆ. ಇನ್ನು ಶೇ.22ರಷ್ಟು ಬಳಕೆದಾರರು ಜಿಯೋಫೈಬರ್‌ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಕೇರಳದಲ್ಲಿ ಅನೇಕ ಎಕ್ಸ್ ಬಳಕೆದಾರರು @reliancejio @JioCare #jio #Jiodown ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪೋಸ್ಟ್ ಮಾಡಿದ್ದಾರೆ.

ಬಾಂಬ್‌ ಬೆದರಿಕೆ: ಹೈದರಾಬಾದ್‌ಗೆ ಬರುತ್ತಿದ್ದ ವಿಮಾನ ಫ್ರಾಂಕ್‌ಫರ್ಟ್‌ಗೆ ವಾಪಸ್‌

ಮುಂಬೈ: ಫ್ರಾಂಕ್‌ಫರ್ಟ್‌ನಿಂದ ಹೈದರಾಬಾದ್‌ಗೆ ಬರುತ್ತಿದ್ದ ಲುಫ್ತಾನ್ಸಾ ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಮತ್ತೆ ಫ್ರಾಂಕ್‌ಫರ್ಟ್‌ಗೆ ತಿರುಗಿಸಿದ ಘಟನೆ ನಡೆದಿದೆ.

ಈ ಬಗ್ಗೆ ಲುಫ್ತಾನ್ಸಾದ ವಕ್ತಾರ ಮಾಹಿತಿ ನೀಡಿದ್ದು, ‘ಸಾಮಾಜಿಕ ಮಾಧ್ಯಮದಲ್ಲಿ ಒಡ್ಡಲಾದ ಬೆದರಿಕೆ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಎಲ್‌ಎಚ್‌752 ವಿಮಾನವನ್ನು ಮತ್ತೆ ಫ್ರಾಂಕ್‌ಫರ್ಟ್‌ಗೆ ಮರಳಿ ಒಯ್ಯಲಾಯಿತು. ಅದರಲ್ಲಿದ್ದ ಪ್ರಯಾಣಿಕರಿಗೂ ಪ್ರಾಂಕ್‌ಫರ್ಟ್‌ನಲ್ಲೇ ವಸತಿ ವ್ಯವಸ್ಥೆ ಮಾಡಲಾಗಿದ್ದು, ಸೋಮವಾರ ಹೈದರಾಬಾದ್‌ಗೆ ಅವರನ್ನೆಲ್ಲಾ ಕರೆದೊಯ್ಯಲಾಗುವುದು’ ಎಂದು ತಿಳಿಸಿದ್ದಾರೆ.

ಈ ವಿಮಾನವನ್ನು ಬೋಯಿಂಗ್‌ 787-9 ಡ್ರೀಂಲೈನರ್‌ ಏರ್‌ಕ್ರಾಫ್ಟ್‌ ನಿರ್ವಹಿಸುತ್ತಿದ್ದು, ಇದು ಫ್ರಾಂಕ್‌ಫರ್ಟ್‌ನಿಂದ ಮಧ್ಯಾಹ್ನ 1.05ಕ್ಕೆ ಹೊರಡಬೇಕಿತ್ತಾದರೂ, 2.29ಕ್ಕೆ ಹೊರಟಿತ್ತು ಎನ್ನಲಾಗಿದೆ. ಇದು ಮರುದಿನ ಬೆಳಗಿನಜಾವ 1.20ಕ್ಕೆ ಹೈದರಾಬಾದ್‌ಗೆ ಬರಬೇಕಿತ್ತು.

ಟ್ರಂಪ್‌ ಕುಟುಂಬದಿಂದ ಹೊಸ ಮೊಬೈಲ್‌ ಫೋನ್‌ ಕಂಪನಿ ಘೋಷಣೆ

ನ್ಯೂಯಾರ್ಕ್‌: ಐಫೋನ್ ವಿಚಾರವಾಗಿ ಆ್ಯಪಲ್‌ ಕಂಪನಿ ಜತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಟಕ್ಕೆ ಬಿದ್ದಿರುವಾಗಲೇ ಅತ್ತ ಟ್ರಂಪ್‌ ಅವರ ಕುಟುಂಬವು ಹೊಸ ಮೊಬೈಲ್‌ ಫೋನ್‌ ಕಂಪನಿಯನ್ನು ಶುರು ಮಾಡುವುದಾಗಿ ಘೋಷಿಸಿದೆ.

ಟ್ರಂಪ್‌ ಅವರ ಪುತ್ರ ಎರಿಕ್‌ ಟ್ರಂಪ್‌ ಈ ಘೋಷಣೆ ಮಾಡಿದ್ದಾರೆ. ಹೊಸ ಫೋನ್‌ ಕಂಪನಿಯು ಸಂಪೂರ್ಣವಾಗಿ ಅಮೆರಿಕದಲ್ಲಿಯೇ ಫೋನ್‌ ಉತ್ಪಾದಿಸುತ್ತದೆ. ಜೊತೆಗೆ ಕಾಲ್‌ ಸೆಂಟರ್‌ ಸಹ ತೆರೆಯುತ್ತದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಈಗಾಗಲೇ ಹಲವು ಸ್ಥಳಗಳಲ್ಲಿ ಟವರ್‌ ಸ್ಥಾಪನೆಗೆ ಮಾತುಕತೆ ನಡೆಸಿದ್ದಾರೆ.ಇತ್ತೀಚೆಗೆ ಆ್ಯಪಲ್‌ ಕಂಪನಿಯು ಭಾರತದಲ್ಲಿ ಐಫೋನ್‌ ಉತ್ಪಾದಿಸುವುದನ್ನು ವಿರೋಧಿಸಿದ್ದ ಟ್ರಂಪ್‌, ಮೇಡ್‌ ಇನ್‌ ಇಂಡಿಯಾ ಫೋನ್‌ ಮೇಲೆ ಭಾರಿ ತೆರಿಗೆ ಹೇರುವುದಾಗಿ ಎಚ್ಚರಿಸಿದ್ದರು.

ಡಸ್ಟ್‌ಬಿನ್‌ಗೆ ಸಿಗರೆಟ್‌ ಎಸೆದ ಕಾರಣ ರೈಲಿಗೆ ಬೆಂಕಿ ಮಧ್ಯಪ್ರದೇಶ ಮೂಲದ ವ್ಯಕ್ತಿ ಬಂಧನ । ಪ್ರಯಾಣಿಕರು ಸೇಫ್‌

ಪುಣೆ: ವ್ಯಕ್ತಿಯೊಬ್ಬ ಸಿಗರೆಟ್‌ ಸೇದಿದ ಬಳಿಕ ಅದರ ತುಂಡನ್ನು ರೈಲಿನ ಶೌಚಾಲಯದಲ್ಲಿರುವ ಕಸದ ಬುಟ್ಟಿಗೆ ಎಸೆದ ಪರಿಣಾಮ ರೈಲಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಪುಣೆ- ದೌಂಡ್‌ ರೈಲು ಮಾರ್ಗದಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಪುಣೆಯ ಜಿಲ್ಲೆಯ ಯಾವತ್‌ ಬಳಿ ಸೋಮವಾರ ಬೆಳಿಗ್ಗೆ ಪುಣೆ- ದೌಂಡ್‌ ಶಟಲ್‌ ರೈಲಿನ ಶೌಚಾಲಯದಲ್ಲಿರುವ ಕಸದ ಬುಟ್ಟಿಯಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬ ಸಿಗರೆಟ್‌ ಸೇದಿ ಶೌಚಾಲಯದಲ್ಲಿರುವ ಕಸದ ಬುಟ್ಟಿಗೆ ಎಸೆದಿದ್ದಾನೆ. ಪರಿಣಾಮ ಕಸದ ಬುಟ್ಟಿಯಲ್ಲಿ ಕಾಗದದ ತುಂಡುಗಳಿದ್ದ ಕಾರಣ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ವಿಚಾರ ತಿಳಿಯುತ್ತಿದ್ದಂತೆ ಬೆಂಕಿಯನ್ನು ನಂದಿಸಿದ್ದು, ಅನಾಹುತ ತಪ್ಪಿದೆ. ಆದರೆ ಇದರಿಂದ ಕೆಲ ಕಾಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದು, ರೈಲನ್ನು ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು.

ಇನ್ನು ಘಟನಾ ಸ್ಥಳಕ್ಕೆ ದೌಂಡ್‌ ಪೊಲೀಸರು ಭೇಟಿ ನೀಡಿದ್ದು ಸಿಗರೆಟ್ ಎಸೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ಮಾನಸಿಕ ಅಸ್ವಸ್ಥನಾಗಿರಬಹುದು ಎಂದು ಶಂಕಿಸಲಾಗಿದೆ.

PREV
Read more Articles on

Recommended Stories

ತಾಯ್ತನದ ಹಿರಿಮೆ ದೊಡ್ಡದು : ಜೋಗಿ
ಕೊಲ್ಹಾಪುರ ಜೈನಮಠದ ಆನೆ ಅಂಬಾನಿ ವನ್ಯಧಾಮಕ್ಕೆ ಹಸ್ತಾಂತರ: ವಿವಾದ