ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕ್ರೀಡೆಗೆ 3442.32 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ 45.36 ಕೋಟಿ ರು. ಹೆಚ್ಚು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಕ್ರೀಡೆಗೆ ₹3,396.96 ಕೋಟಿ ಅನುದಾನ ಮೀಸಲಿರಿಸಿದ್ದರು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಅನುದಾನ ಹೆಚ್ಚಿಸಲಾಗಿದೆ.
ಖೇಲೋ ಇಂಡಿಯಾಗೆ ₹900 ಕೋಟಿ, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ಕ್ಕೆ ₹795.77 ಕೋಟಿ, ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಲ್ಯಾಬ್(ಎನ್‌ಡಿಟಿಎಲ್)ಗೆ ₹22 ಕೋಟಿ ರು. ಅನುದಾನ ಒದಗಿಸಲಾಗಿದೆ.
ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ ₹91.90 ಕೋಟಿ, ಕ್ರೀಡಾಪಟುಗಳ ಪ್ರೋತ್ಸಾಹ ಧನಕ್ಕೆ ₹39 ಕೋಟಿ ರು. ಮೀಸಲಿರಿಸಲಾಗಿದೆ. ಕಳೆದ ಬಾರಿ ₹84 ಕೋಟಿ ನೀಡಲಾಗಿತ್ತು. ಆದರೆ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಕಳೆದ ಬಾರಿ ₹15 ಕೋಟಿ ಅನುದಾನ ನೀಡಿದ್ದರೆ, ಈ ಬಾರಿ ಅದನ್ನು ಕೇವಲ ₹1 ಲಕ್ಷಕ್ಕೆ ಇಳಿಸಲಾಗಿದೆ.