ರಾಷ್ಟ್ರಪತಿ 14 ಪ್ರಶ್ನೆಗಳ ಬೆನ್ನಲ್ಲೇ ಸಿದ್ದು, 7 ಸಿಎಂಗೆ ಸ್ಟಾಲಿನ್ ಪತ್ರ

KannadaprabhaNewsNetwork | Updated : May 19 2025, 04:48 AM IST
Follow Us

ಸಾರಾಂಶ

ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಸೂದೆ ಅಂಗೀಕಾರಕ್ಕೆ ಕಾಲಮಿತಿ ನಿಗದಿ ಮಾಡಿದ ಸುಪ್ರೀಂಕೋರ್ಟ್‌ ಆದೇಶವನ್ನು ರಾಷ್ಟ್ರಪತಿಗಳ ಮೂಲಕ ಪ್ರಶ್ನಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಬಲವಾಗಿ ವಿರೋಧಿಸಿದ್ದಾರೆ.

 ಚೆನ್ನೈ: ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಸೂದೆ ಅಂಗೀಕಾರಕ್ಕೆ ಕಾಲಮಿತಿ ನಿಗದಿ ಮಾಡಿದ ಸುಪ್ರೀಂಕೋರ್ಟ್‌ ಆದೇಶವನ್ನು ರಾಷ್ಟ್ರಪತಿಗಳ ಮೂಲಕ ಪ್ರಶ್ನಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಬಲವಾಗಿ ವಿರೋಧಿಸಿದ್ದಾರೆ. 

ಜೊತೆಗೆ ಈ ವಿಷಯದಲ್ಲಿ ಹೋರಾಟ ನಡೆಸುವಂತೆ ಕೋರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಅವರು ಪತ್ರ ಬರೆದು ಒತ್ತಾಯಿಸಿದ್ದಾರೆ.

‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ 14 ಪ್ರಶ್ನೆಗಳು ಯಾವುದೇ ರಾಜ್ಯ ಅಥವಾ ತೀರ್ಪನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ, ತಮಿಳುನಾಡು ಸರ್ಕಾರ ಮತ್ತು ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಕಾನೂನು ಮತ್ತು ಸಂವಿಧಾನದ ವ್ಯಾಖ್ಯಾನದ ಕುರಿತು ಕಂಡುಕೊಂಡ ಅಂಶಗಳನ್ನು ಪ್ರಶ್ನಿಸುವುದು ಇದರ ಉದ್ದೇಶವಾಗಿದೆ. 

ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ ಎತ್ತಿಹಿಡಿದಿರುವಂತೆ, ನಾವು ನ್ಯಾಯಾಲಯದ ಮುಂದೆ ಸಂಘಟಿತ ಕಾನೂನು ಕಾರ್ಯತಂತ್ರವನ್ನು ರೂಪಿಸಬೇಕು ಮತ್ತು ಸಂವಿಧಾನದ ಮೂಲ ರಚನೆಯನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಒಗ್ಗಟ್ಟನ್ನು ಪ್ರದರ್ಶಿಸಬೇಕು’ ಎಂದು ಪತ್ರದಲ್ಲಿ ಸ್ಟಾಲಿನ್‌ ಕರೆ ಕೊಟ್ಟಿದ್ದಾರೆ.

ಜೊತೆಗೆ, ‘ಈ ಐತಿಹಾಸಿಕ ತೀರ್ಪು ಕೇವಲ ತಮಿಳುನಾಡಿಗಷ್ಟೇ ಅಲ್ಲದೇ ಎಲ್ಲಾ ರಾಜ್ಯಗಳನ್ನು ಅನ್ವಯಿಸುತ್ತದೆ. ಇದು ರಾಜ್ಯಗಳು ಮತ್ತು ಒಕ್ಕೂಟದ ನಡುವಿನ ಒಕ್ಕೂಟ ರಚನೆ ಮತ್ತು ಅಧಿಕಾರಗಳ ವಿತರಣೆಯನ್ನು ಎತ್ತಿಹಿಡಿಯುತ್ತದೆ. ಈ ಮೂಲಕ ಚುನಾಯಿತವಾದ ಸರ್ಕಾರ ಜಾರಿಗೆ ತಂದ ಮಸೂದೆಯನ್ನು ನೇಮಕರಾದ ರಾಜ್ಯಪಾಲರು ತಡೆಹಿಡಿಯುವುದನ್ನು ತಡೆಯುತ್ತದೆ’ ಎಂದಿದ್ದಾರೆ.

ಬಿಜೆಪಿ ವಿರುದ್ಧ ಕಿಡಿ:ಜೊತೆಗೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಸ್ಟಾಲಿನ್‌, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಿಜೆಪಿಯೇತರ ರಾಜ್ಯಗಳಿಗೆ ಕಾನೂನು ವಿರೋಧಿ ರಾಜ್ಯಪಾಲರ ನೇಮಿಸಿ ಅಭಿವೃದ್ಧಿಗೆ ತಡೆ ನೀಡುತ್ತಿದೆ’ ಎಂದು ಆರೋಪಿಸಿದ್ದಾರೆ.

ಯಾರ್‍ಯಾರಿಗೆ ಪತ್ರ?:

ಕರ್ನಾಟಕ, ತೆಲಂಗಾಣ, ಕೇರಳ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಪಶ್ಚಿಮ ಬಂಗಾಳ, ಜಾರ್ಖಂಡ್‌ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳಿಗೆ ಸಿಎಂ ಸ್ಟಾಲಿನ್‌ ಪತ್ರ ಬರೆದಿದ್ದಾರೆ.

Read more Articles on