ನವದೆಹಲಿ : ಬೀದಿನಾಯಿ ಹಾವಳಿ ನಿಯಂತ್ರಣ ಪ್ರಕರಣ ಬಗ್ಗೆ ಅಫಿಡವಿಟ್ ಸಲ್ಲಿಸದ ಕರ್ನಾಟಕ ಸೇರಿ ಬಹುತೇಕ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳ ಮೇಲೆ ಗರಂ ಆಗಿರುವ ಸುಪ್ರೀಂ ಕೋರ್ಟ್, ‘ನ್ಯಾಯಾಲಯದ ಆದೇಶಕ್ಕೆ ಗೌರವ ಇಲ್ಲವೇ’ ಎಂದು ಅಸಮಾಧಾನ ಹೊರಹಾಕಿದೆ ಹಾಗೂ ನ.3ರಂದು ಖುದ್ದು ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿದೆ.
ವರ್ಚುವಲ್ ಆಗಿ ಹಾಜರಾಗಲು ಅವಕಾಶ ನೀಡಬೇಕು ಎಂಬ ಕೋರಿಕೆಯನ್ನು ಅದು ತಿರಸ್ಕರಿಸಿದ್ದು, ಈ ಕುರಿತು ಯಾವುದೇ ವಿನಾಯ್ತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ ಆ.22ರಂದು ನೀಡಿದ್ದ ಆದೇಶದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎಲ್ಲ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಗೆ ಅಲ್ಲಿನ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ಪ್ರಾಣಿಗಳ ಜನನ ನಿಯಂತ್ರಣ ನಿಯಮ(ಎಬಿಸಿ)ಗಳ ಅನುಸಾರ ಎಷ್ಟು ಶ್ವಾನ ದೊಡ್ಡಿಗಳಿವೆ, ಎಷ್ಟು ಮಂದಿ ಪಶುವೈದ್ಯರಿದ್ದಾರೆ, ಎಷ್ಟು ಮಂದಿ ನಾಯಿ ಹಿಡಿಯುವವರಿದ್ದಾರೆ, ಎಷ್ಟು ವಿಶೇಷ ನಾಯಿ ಹಿಡಿಯುವ ವಾಹನಗಳಿವೆ, ಬೋನುಗಳಿವೆ ಎಂಬ ಅಂಕಿ-ಅಂಶ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಅ.27ರ ವಿಚಾರಣೆ ವೇಳೆಗೆ ಕೇವಲ ಪಶ್ಚಿಮ ಬಂಗಾಳ ಮತ್ತು ತೆಲಂಗಾಣ
ಈ ಬಗ್ಗೆ ಶುಕ್ರವಾರದ ವಿಚಾರಣೆ ವೇಳೆ ಕೋರ್ಟ್ ಗರಂ ಆದ ನ್ಯಾ। ವಿಕ್ರಂ ನಾಥ್ ಹಾಗೂ ನ್ಯಾ। ಸಂದೀಪ್ ಮೆಹ್ತಾ ಅವರ ಪಿಠ, ‘ನ.3ರಂದು ಸ್ಪಷ್ಟನೆ ನೀಡಬೇಕು’ ಎಂದು ಸೂಚಿಸಿತು. ಆಗ ಬಹುತೇಕ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಪರ ವಕೀಲರು, ನ.3ರ ವಿಚಾರಣೆಗೆ ವರ್ಚುವಲ್ ಆಗಿ ಹಾಜರಾಗಲು ಅನುಮತಿ ನೀಡುವಂತೆ ಕೋರಿದರು. ಅದನ್ನು ಕೋರ್ಟ್ ತಳ್ಳಿಹಾಕಿ, ಅಫಿಡವಿಟ್ ಸಲ್ಲಿಸದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸಿಎಸ್‌ಗಳು ನ.3ರ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು, ಏಕೆ ಅಫಿಡವಿಟ್ ಸಲ್ಲಿಸಿಲ್ಲ ಎಂಬ ಕುರಿತು ವಿವರಣೆ ನೀಡಬೇಕೆಂದು ಸೂಚಿಸಿತು.
‘ಮುನ್ಸಿಪಾಲಿಟಿ, ಸರ್ಕಾರಗಳು ಪರಿಹರಿಸಬೇಕಿದ್ದ ವಿಚಾರ ಸಂಬಂಧಿಸಿ ಕೋರ್ಟ್ ತನ್ನ ಅಮೂಲ್ಯ ಸಮಯ ಹಾಳು ಮಾಡುತ್ತಿರುವುದು ದುರದೃಷ್ಟಕರ. ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದರೂ ಮುಖ್ಯಕಾರ್‍ಯದರ್ಶಿಗಳು ಸುಮ್ಮನೆ ನಿದ್ರಿಸುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಯಾವುದೇ ಗೌರವ ಇಲ್ಲ’ ಎಂದು ಕಿಡಿಕಾರಿದೆ.