ರೈಲಿನ ಮೇಲಿಂದ ಅಗ್ನಿ ಕ್ಷಿಪಣಿ ಹಾರಿಸುವ ಪ್ರಯೋಗ ಯಶಸ್ವಿ

Published : Sep 26, 2025, 06:38 AM IST
agni missile 01.jpg

ಸಾರಾಂಶ

ಪಾಕಿಸ್ತಾನದ ಎಲ್ಲ ಹಾಗೂ ಚೀನಾದ ಬಹುಭಾಗ ತಲುಪುವ, 2000 ಕಿ.ಮೀ. ದೂರದವರೆಗೆ ನುಗ್ಗಿ ದಾಳಿ ನಡೆಸಬಲ್ಲ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ರೈಲು ಆಧರಿತ ಮೊಬೈಲ್‌ ರಾಕೆಟ್‌ ಉಡ್ಡಯನ ವ್ಯವಸ್ಥೆ ಮೂಲಕ ಹಾರಿಸುವಲ್ಲಿ ಭಾರತ ಯಶಸ್ವಿಯಾಗಿದೆ.

 ನವದೆಹಲಿ: ಕ್ಷಿಪಣಿ ಉಡ್ಡಯನ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಪಾಕಿಸ್ತಾನದ ಎಲ್ಲ ಹಾಗೂ ಚೀನಾದ ಬಹುಭಾಗ ತಲುಪುವ, 2000 ಕಿ.ಮೀ. ದೂರದವರೆಗೆ ನುಗ್ಗಿ ದಾಳಿ ನಡೆಸಬಲ್ಲ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ರೈಲು ಆಧರಿತ ಮೊಬೈಲ್‌ ರಾಕೆಟ್‌ ಉಡ್ಡಯನ ವ್ಯವಸ್ಥೆ ಮೂಲಕ ಹಾರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದರೊಂದಿಗೆ ರೈಲ್ವೆ ಜಾಲ ಬಳಸಿಕೊಂಡು ಕ್ಷಿಪಣಿ ಉಡ್ಡಯನ ಸಾಮರ್ಥ್ಯ ಹೊಂದಿರುವ ಅಮೆರಿಕ, ಚೀನಾ ಮತ್ತು ರಷ್ಯಾದ ಸಾಲಿಗೆ ಈಗ ಭಾರತ ಕೂಡ ಸೇರ್ಪಡೆಯಾಗಿದೆ. ತಾನು ಕೂಡ ಇಂತಹ ಸಾಮರ್ಥ್ಯ ಹೊಂದಿರುವುದಾಗಿ ಉತ್ತರ ಕೊರಿಯಾ ಕೆಲ ವರ್ಷಗಳ ಹಿಂದೆಯೇ ಹೇಳಿಕೊಂಡಿತ್ತಾದರೂ ಅದು ದೃಢಪಟ್ಟಿಲ್ಲ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯು ಸ್ಟ್ರ್ಯಾಟಜಿಕ್‌ ಫೋರ್ಸಸ್‌ ಕಮಾಂಡ್‌(ಎಸ್‌ಎಫ್‌ಸಿ) ಜತೆ ಸೇರಿಕೊಂಡು ಈ ಪರೀಕ್ಷಾರ್ಥ ಉಡ್ಡಯನ ಪ್ರಯೋಗ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಎಲ್ಲಿ ಈ ಕ್ಷಿಪಣಿಯ ಪ್ರಯೋಗ ನಡೆಸಲಾಯಿತು ಎಂದು ಹೇಳದಿದ್ದರೂ ವಿಶೇಷವಾಗಿ ವಿನ್ಯಾಸಗೊಳಿಸಿದ ರೈಲು ಆಧಾರಿತ ಮೊಬೈಲ್‌ ಲಾಂಚರ್‌ನಿಂದ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ಉಡ್ಡಯನ ಮಾಡಲಾಗಿದೆ. ಈ ಮೂಲಕ ‘ಇಂಥ ಸಾಮರ್ಥ್ಯ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೊಂಡಿದ್ದಾರೆ.

ವಿಶೇಷತೆ ಏನು?:

ಅಗ್ನಿ ಪ್ರೈಮ್‌ ಕ್ಷಿಪಣಿಗಿಂತ 3 ಪಟ್ಟು ಹೆಚ್ಚು ದೂರ ಸಾಗುವ ಕ್ಷಿಪಣಿಗಳು ಈಗಾಗಲೇ ಭಾರತದ ಬಳಿ ಇದೆ. ಆದರೆ ಈಗ ನಡೆಸಿದ ಪ್ರಯೋಗದ ಪ್ರಮುಖ ಅಂಶವೆಂದರೆ ರೈಲಿನ ಮೇಲೆ ಕ್ಷಿಪಣಿ ಇಟ್ಟು ದಾಳಿ ನಡೆಸಿದ್ದು.

ಕ್ಷಿಪಣಿಗಳು ಭಾರೀ ತೂಕ ಇರುತ್ತವೆ. ಸಾಮಾನ್ಯವಾಗಿ ಕ್ಷಿಪಣಿಗಳನ್ನು ವಿಮಾನ, ಹಡಗು, ಸಬ್‌ಮರೀನ್‌, ನಿಗದಿತ ಪ್ರದೇಶಗಳು ಮತ್ತು ಮೊಬೈಲ್‌ ಲಾಂಚಿಂಗ್‌ ವಾಹನಗಳ ಮೂಲಕ ಉಡ್ಡಯನ ಮಾಡಲಾಗುತ್ತದೆ. ಆದರೆ ಇವುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವುದು ಸುಲಭವಲ್ಲ.

ಆದರೆ ಯುದ್ಧದಂಥ ಸಂದರ್ಭದಲ್ಲಿ ಶತ್ರುಗಳು ಕ್ಷಿಪಣಿ ನೆಲೆಗಳು, ಸಂಗ್ರಹಾಗಾರ, ಹಡಗು, ವಿಮಾನಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುತ್ತದೆ. ಹೀಗಾಗಿ ತನ್ನ ಉಡ್ಡಯನ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಲು ಇದೀಗ ಭಾರತ, ರೈಲ್ವೆಯನ್ನೂ ತನ್ನ ದಾಳಕ್ಕೆ ಸೇರಿಸಿಕೊಂಡಿದೆ.

ಭಾರತೀಯ ರೈಲ್ವೆ ದೇಶದುದ್ದಕ್ಕು 70000 ಕಿ.ಮೀ ಹೆಚ್ಚು ಮಾರ್ಗ ಹೊಂದಿದೆ. ಈ ಯಾವುದೇ ಮಾರ್ಗಗಳನ್ನು ಬಳಸಿಕೊಂಡು ಇನ್ನು ಭಾರತೀಯ ಸೇನೆ ಈ ಕ್ಷಿಪಣಿಗಳನ್ನು ಉಡ್ಡಯನ ಮಾಡಬಹುದು.

ಜೊತೆಗೆ ಅನಿವಾರ್ಯ ಸಂದರ್ಭಗಳಲ್ಲಿ ರೈಲ್ವೆ ಸುರಂಗಗಳಲ್ಲಿ ಈ ಕ್ಷಿಪಣಿ ಅಡಗಿಸಿಟ್ಟು ಶತ್ರು ದೇಶಗಳ ಉಪಗ್ರಹ ಕಣ್ಣಿನಿಂದ ಅವುಗಳನ್ನು ಕಾಪಾಡಿಕೊಳ್ಳಬಹುದು. ಬಳಿಕ ಯಾವುದೇ ಕ್ಷಣದಲ್ಲಿ ಅವುಗಳನ್ನು ಸುರಂಗದಿಂದ ಹೊರಗೆ ತೆಗೆದು ದಿಢೀರನೆ ಶತ್ರು ದೇಶದ ಮೇಲೆ ದಾಳಿ ನಡೆಬಹುದಾಗಿದೆ.

ಏನಿದರ ಲಾಭ?

1. ದೇಶಾದ್ಯಂತ 70 ಸಾವಿರ ಕಿ.ಮೀ.ಗೂ ಉದ್ದದ ರೈಲು ಜಾಲವಿದೆ. ಅದನ್ನು ಬಳಸಿಕೊಂಡು ಎಲ್ಲಿ ಬೇಕಾದರೂ ಕ್ಷಿಪಣಿ ಹಾರಿಸಬಹುದು

2. ಯುದ್ಧದ ಸಂದರ್ಭದಲ್ಲಿ ಶತ್ರುದೇಶಗಳು ಮಿಲಿಟರಿ ನೆಲೆಗಳು ಮಾತ್ರವಲ್ಲದೇ ಶಸ್ತ್ರಾಸ್ತ್ರ ಕೋಠಿಗಳನ್ನು ಕೂಡ ನಾಶ ಮಾಡಿಬಿಡುತ್ತವೆ

3. ರೈಲಿನ ಮೂಲಕ ಕ್ಷಿಪಣಿ ಹಾರಿಸುವ ಸಾಮರ್ಥ್ಯ ಇದ್ದರೆ ರೈಲ್ವೆ ಸುರಂಗಗಳಲ್ಲಿ ಕ್ಷಿಪಣಿಗಳನ್ನು ಅಡಗಿಸಿಟ್ಟು ಬೇಕೆಂದಾಗ ಬಳಸಬಹುದು

4. ಸುರಂಗದೊಳಗೆ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟರೆ ಅವುಗಳ ಮೇಲೆ ದಾಳಿ ಮಾಡುವುದು ಶತ್ರುದೇಶಗಳಿಗೂ ತುಂಬಾ ಕಷ್ಟವಾಗುತ್ತದೆ

PREV
Read more Articles on

Recommended Stories

ಐ ಲವ್‌ ಮಹಮ್ಮದ್‌ V/S ಮಹಾದೇವ ದಂಗಲ್
ಮತ್ತೆ ಶಾರುಖ್‌ ಪುತ್ರ ವರ್ಸಸ್‌ ಡ್ರಗ್ಸ್‌ ಅಧಿಕಾರಿ ವಾರ್‌!