;Resize=(412,232))
ನವದೆಹಲಿ: ಜಂತರ್ಮಂತರ್ನಲ್ಲಿ ಪ್ರತಿಭಟನೆಗೆ ನಿಷೇಧ ಹೇರಿದ ಬೆನ್ನಲ್ಲೇ, ಮಂಗಳವಾರ ದೆಹಲಿಯಲ್ಲಿ ಅಘೋಷಿತ ದಿಢೀರ್ ಪ್ರತಿಭಟನೆ ನಡೆದು ಪೊಲೀಸರನ್ನು ಅವಕ್ಕಾಗಿಸಿದೆ.
ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ಎನ್ಎಸ್ಯುಐ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಖಾರ್ ಅವರ ಅಧ್ಯಕ್ಷತೆಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದು, ಕೇಂದ್ರದ ವಿರುದ್ಧ ಘೋಷಣೆಗಳನ್ನೂ ಕೂಗಲಾಯಿತು. ಈ ಸಂದರ್ಭದಲ್ಲಿ ನೂರಾರು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆಪಡೆದರು.
ಇನ್ನು ಪ್ರತಿಭಟನಾ ಸ್ಥಳವಾಗಿ ಜಂತರ್ ಮಂತರ್ ಅನ್ನು ಡಿನೋಟಿಫೈ ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ಸಿಜೆಪಿ ಮುಖಂಡರಾದ ಸೌರವ್ದಾಸ್ ಮತ್ತು ಆಶುತೋಷ್ ರಾಂಕಾ ಪ್ರತಿಭಟನೆಗೆ ಯತ್ನಿಸಿದ್ದು, ಈ ವೇಳೆ ಪೊಲೀಸ್ ಬ್ಯಾರಿಕೇಡ್, ಬಿಗಿಭದ್ರತೆ ದಾಟಿ ಜಂತರ್ಮಂತರ್ ಪ್ರವೇಶಿಸಿದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ಇಂಡಿಯಾ ಕೂಟದ ನಾಯಕರು, ಸಂಸದರು ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆ, ನಾಗರಿಕ ಸಂಘಟನೆಯ ನಾಯಕರಿಗೆ ತಮ್ಮ ನಿವಾಸದಲ್ಲಿ ಚಹಾಕೂಟ ಏರ್ಪಡಿಸಿದ್ದರು. ಈ ವೇಳೆ ರಾಗಾ ‘ಪ್ರತಿಭಟನಾಕಾರರೆಲ್ಲ ಒಂದೇ’ ಎನ್ನುವ ಸಂದೇಶ ಸಾರಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆಗಳ ನಡುವೆಯೇ ಸುನೇಹ್ರಿ ಭಾಗ್ ರಸ್ತೆಯಲ್ಲಿರುವ ರಾಹುಲ್ ಅವರ ನಿವಾಸದಲ್ಲಿ ನಡೆದ ಈ ಟೀ ಪಾರ್ಟಿಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್, ಶಶಿ ತರೂರ್, ತೇಜಸ್ವಿ ಯಾದವ್, ಮಹುವಾ ಮೊಯಿತ್ರಾ, ನೇಹಾ ಬೋರಾ ಸೇರಿದಂತೆ ಇಂಡಿಯಾ ಕೂಟದ ಪ್ರಮುಖರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ರಾಹುಲ್, ‘ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸಲು ಇಂಡಿಯಾ ಕೂಟ ಹಾಗೂ ಇತರ ಸಂಘಟನೆಗಳು ಒಟ್ಟಾಗಿ ಹೋರಾಡುತ್ತವೆ. ಭಾರತದ ಸಂವಿಧಾನವನ್ನು ನಾಶಪಡಿಸಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವೋಟ್ ಚೋರಿಯ ಶಿಲ್ಪಿ ನರೇಂದ್ರ ಮೋದಿ, ಅನುಷ್ಠಾನಕಾರ ಅಮಿತ್ ಶಾ ಮತ್ತು ಜ್ಞಾನೇಶ್ ಕುಮಾರ್ ಅವರು ತಮ್ಮ ಸುತ್ತ ಬಲೆ ಮುಚ್ಚುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹರಿಹಾಯ್ದರು.