ರಾಜ್ಯಸಭೆಗೆ ಸಾಧಕ ಕನ್ನಡತಿ ಸುಧಾಮೂರ್ತಿ

KannadaprabhaNewsNetwork | Updated : Mar 09 2024, 08:22 AM IST

ಸಾರಾಂಶ

ಸಮಾಜಸೇವಕಿ, ಲೇಖಕಿ ಹಾಗೂ ಹೆಮ್ಮೆಯ ಕನ್ನಡತಿ ಡಾ। ಸುಧಾಮೂರ್ತಿ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಸರ್ಕಾರದ ಪ್ರಸ್ತಾವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದಾರೆ.

ಪಿಟಿಐ ನವದೆಹಲಿ

ಸಮಾಜಸೇವಕಿ, ಲೇಖಕಿ ಹಾಗೂ ಹೆಮ್ಮೆಯ ಕನ್ನಡತಿ ಡಾ। ಸುಧಾಮೂರ್ತಿ ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ.

 ಸರ್ಕಾರದ ಪ್ರಸ್ತಾವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದಾರೆ. ಮಹಿಳಾ ದಿನದಂದು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. 

ಈಗಾಗಲೇ ಕರ್ನಾಟಕದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಇದೀಗ ಮತ್ತೊಬ್ಬ ಕನ್ನಡತಿಗೆ ಆ ಅಪರೂಪದ ಗೌರವ ಹುಡುಕಿಕೊಂಡು ಬಂದಿದೆ.

ಬೆಂಗಳೂರು ಮೂಲದ ಇನ್ಫೋಸಿಸ್‌ ಕಂಪನಿಯ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರ ಪತ್ನಿಯಾಗಿರುವ ಸುಧಾ ಅವರು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಹಲವು ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. 

ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅವರು ಸುಧಾ- ಮೂರ್ತಿ ದಂಪತಿಯ ಅಳಿಯ.‘ರಾಷ್ಟ್ರಪತಿಗಳು ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ನನಗೆ ಹರ್ಷವಾಗುತ್ತಿದೆ. 

ಸಾಮಾಜಿಕ ಸೇವೆ, ಪರೋಪಕಾರ ಹಾಗೂ ಶಿಕ್ಷಣ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಿಗೆ ಅವರ ಕೊಡುಗೆ ಪ್ರೇರಣದಾಯಕವಾಗಿದೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಮೋದಿಗೆ ಸುಧಾ ಧನ್ಯವಾದ: ಸದ್ಯ ಥಾಯ್ಲೆಂಡ್‌ ಪ್ರವಾಸದಲ್ಲಿರುವ 73 ವರ್ಷದ ಸುಧಾಮೂರ್ತಿ ತಮ್ಮನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.

 ‘ನಾನು ಎಂದೂ ಹುದ್ದೆ ನಿರೀಕ್ಷೆ ಮಾಡಿರಲಿಲ್ಲ. ನನ್ನನ್ನು ಕೇಂದ್ರ ಸರ್ಕಾರ ಏಕೆ ನಾಮನಿರ್ದೇಶನ ಮಾಡಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಮಹಿಳಾ ದಿನದಂದೇ ಈ ನೇಮಕ ಆಗಿದೆ.

ಇದು ನನಗೆ ಎರಡು ಅಚ್ಚರಿಯನ್ನು ನೀಡಿದೆ. ನನಗೆ ಸಂತೋಷವಾಗಿದೆ. ಪ್ರಧಾನಮಂತ್ರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.‘ನನಗೆ ಇದು ಹೊಸ ಕ್ಷೇತ್ರ. 

ನಾನು ಮೊದಲು ಕುಳಿತು, ಅಧ್ಯಯನ ಮಾಡಿ ಬಳಿಕ ನಾನು ಏನು ಮಾಡಬಲ್ಲೆ ಎಂದು ಹೇಳಬಲ್ಲೆ. ಒಂದು ಕಡೆ ಸಂತೋಷವಾಗುತ್ತಿದೆ. ಮತ್ತೊಂದು ಕಡೆ ಹೊಸ ಜವಾಬ್ದಾರಿ ಸಿಕ್ಕಿದೆ. ಶಕ್ತಿ ಮೀರಿ ಕೆಲಸ ಮಾಡುತ್ತೇನೆ.

ವೈಯಕ್ತಿಕವಾಗಿ ಹೇಳುವುದಾದರೆ ಬಡವರ ಪರವಾಗಿ ಕೆಲಸ ಮಾಡಲು ನನಗೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ. ನನ್ನನ್ನು ನಾನು ರಾಜಕಾರಣಿ ಎಂದು ಪರಿಗಣಿಸುವುದಿಲ್ಲ’ ಎಂದು ಹೇಳಿದ್ದಾರೆ.

ಸುಧಾ ಅವರಿಗೆ 2006ರಲ್ಲಿ ಪದ್ಮಶ್ರೀ ಹಾಗೂ 2023ರಲ್ಲಿ ಪದ್ಮಭೂಷಣ ಸೇರಿದಂತೆ ಹಲವು ಗೌರವಗಳು ದೊರೆತಿವೆ.

ಸುಧಾ ಭಾರತದ ಶ್ರೀಮಂತ ಸಂಸದೆ!

ನವದೆಹಲಿ: ಸುಧಾಮೂರ್ತಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸದೆಯಾಗಲಿದ್ದಾರೆ. ಅವರು 5586 ಕೋಟಿ ರು.ಮೌಲ್ಯದ ಆಸ್ತಿ ಹೊಂದಿದ್ದಾರೆ.

ಇನ್ಫೋಸಿಸ್‌ನಲ್ಲಿ ಅವರಿಗೆ 3.45 ಕೋಟಿ ಷೇರು ಇದೆ. ಗುರುವಾರ ಇನ್ಫೋಸಿಸ್‌ನ ಪ್ರತಿ ಷೇರಿನ ಬೆಲೆ 1617 ರು. ಇತ್ತು. ಅದರ ಆಧಾರದಲ್ಲಿ ಸುಧಾ ಅವರ ಒಟ್ಟು ಆಸ್ತಿ 5586 ಕೋಟಿ ರು. ಆಗಲಿದೆ.

 ಇನ್ನು ಇನ್ಫೋಸಿಸ್‌ನಲ್ಲಿ ಸಂಸ್ಥಾಪಕ ನಾರಾಯಣ ಮೂರ್ತಿ 2691 ಕೋಟಿ ರು. ಮೌಲ್ಯದ 1.66 ಕೋಟಿ ಷೇರು ಹೊಂದಿದ್ದಾರೆ. ಬಿಆರ್‌ಎಸ್‌ ಪಕ್ಷದ ಬಂಡಿ ಪಾರ್ಥಸಾರಥಿ ರೆಡ್ಡಿ 5300 ಕೋಟಿ ರು.ನೊಂದಿಗೆ ಇದುವರೆಗೂ ದೇಶದ ಅತ್ಯಂತ ಶ್ರೀಮಂತ ಸಂಸದರಾಗಿದ್ದರು.

ನಾನು ರಾಜಕಾರಣಿ ಎಂದುಕೊಳ್ಳುವುದಿಲ್ಲ: ನಾನು ಎಂದೂ ಹುದ್ದೆ ನಿರೀಕ್ಷೆ ಮಾಡಿರಲಿಲ್ಲ. ನನ್ನನ್ನು ಸರ್ಕಾರ ಏಕೆ ನಾಮನಿರ್ದೇಶನ ಮಾಡಿದೆ ಎಂದು ಗೊತ್ತಿಲ್ಲ. ಬಡವರ ಪರವಾಗಿ ಕೆಲಸ ಮಾಡಲು ನನಗೆ ದೊಡ್ಡ ವೇದಿಕೆ ಸಿಕ್ಕಿದೆ. ನನ್ನನ್ನು ನಾನು ರಾಜಕಾರಣಿ ಎಂದುಕೊಳ್ಳುವುದಿಲ್ಲ.- ಸುಧಾಮೂರ್ತಿ

Share this article