ಸುನೇತ್ರಾ ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ

KannadaprabhaNewsNetwork |  
Published : Feb 01, 2026, 02:30 AM IST
ಸುನೇತ್ರಾ | Kannada Prabha

ಸಾರಾಂಶ

ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರ ಅನಿರೀಕ್ಷಿತ ಅಗಲಿಕೆಯಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನ ತೆರವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಸುನೇತ್ರಾ ಪವಾರ್‌ (62) ಅವರು ಡಿಸಿಎಂ ಆಗಿ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.

ಅಜಿತ್‌ ಪವಾರ್ ಪತ್ನಿ ಸುನೇತ್ರಾ ಪ್ರಮಾಣ ವಚನ ಸ್ವೀಕಾರ

‘ಅಜಿತ್‌ ದಾದಾ ಅಮರ್‌ ರಹೆ’ ಘೋಷಣೆ ನಡುವೆ ಪ್ರಮಾಣಮುಂಬೈ: ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರ ಅನಿರೀಕ್ಷಿತ ಅಗಲಿಕೆಯಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನ ತೆರವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಸುನೇತ್ರಾ ಪವಾರ್‌ (62) ಅವರು ಡಿಸಿಎಂ ಆಗಿ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲ ಆಚಾರ್ಯ ದೇವವ್ರತ ಅವರ ಶಪಥ ಬೋಧಿಸಿದರು. ಇದರೊಂದಿಗೆ ಸುನೇತ್ರಾ, ಆ ಹುದ್ದೆಗೇರಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಶಪಥದ ಸಮಯದಲ್ಲಿ ಅವರ ಬೆಂಬಲಿಗರಿಂದ, ‘ಅಜಿತ್‌ ದಾದಾ ಅಮರ್‌ ರಹೆ’ ಎಂಬ ಘೋಷಣೆಗಳು ಮೊಳಗಿದವು.

ಇದಕ್ಕೂ ಮುನ್ನ ಅವರು ಎನ್‌ಸಿಪಿ (ಎಸ್‌ಪಿ) ಶಾಸಕಾಂಗ ಪಕ್ಷದ ನಾಯಕಿ ಆಗಿ ಆಯ್ಕೆಯಾದರು. ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಾರಾಮತಿಯಲ್ಲಿ ಜ.28ರಂದು ನಡೆದ ವಿಮಾನ ಅಪಘಾತದಲ್ಲಿ ಅಜಿತ್‌ ಅವರು ಮೃತಪಟ್ಟಿದ್ದರು.

ಹಣಕಾಸು ಹುದ್ದೆ ಇಲ್ಲ:

ಅಜಿತ್ ಪವಾರ್ ಅವರು ಹಣಕಾಸು ಸಚಿವರೂ ಆಗಿದ್ದರು. ಆದರೆ ಸುನೇತ್ರಾ ಪ್ರಮಾಣವಚನದ ಬಳಿಕ ಅಧಿಕಾರ ಹಂಚಿಕೆ ಆಗಿದ್ದು, ವಕ್ಫ್‌ ಸೇರಿ ಅಜಿತ್‌ ಹೊಂದಿದ್ದ ಕೆಲವು ಖಾತೆಗಳನ್ನು ಸುನೇತ್ರಾಗೆ ನೀಡಲಾಗಿದೆ. ಸಿಎಂ ದೇವೇಂದ್ರ ಫಡ್ನವೀಸ್‌ ಹಣಕಾಸು ಖಾತೆಯನ್ನು ತಮಗೆ ವರ್ಗಾಯಿಸಿಕೊಂಡಿದ್ದಾರೆ.

ಸುನೇತ್ರಾ ಹಿನ್ನೆಲೆ:

ಮರಾಥವಾಡಾ ಪ್ರದೇಶದ ಶಾರಾಶಿವ್‌ನವರಾದ ಸುನೇತ್ರಾ ಅವರದ್ದು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ. ಅವರ ತಂದೆ ಬಾಜಿರಾವ್‌ ಪಾಟೀಲ್‌ ಮರಾಠವಾಡ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರಾದರೆ, ಸಹೋದರ ಪದಂಸಿನ್ಹ್‌ ಅವರು ಎನ್‌ಸಿಪಿ ನಾಯಕನಾಗಿದ್ದಾರೆ. ಆದರೂ ಸುನೇತ್ರಾ ಬಹುಕಾಲ ರಾಜಕೀಯದಿಂದ ದೂರವೇ ಉಳಿದಿದ್ದರು.ಚಿತ್ರಕಲೆ, ಸಂಗೀತ, ಛಾಯಾಗ್ರಹಣ ಮತ್ತು ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಸುನೇತ್ರಾ ಅವರು ಶರದ್‌ ಪವಾರ್‌ ಅವರ ಗರಡಿಯಲ್ಲಿ ಪಳಗಿದ ಅಜಿತ್‌ ಪವಾರ್‌ ಅವರನ್ನು ವರಿಸಿದ ಬಳಿಕವೂ ಪಕ್ಷ ಸೇರುವ ಮನಸ್ಸು ಮಾಡಲಿಲ್ಲ. ಹೀಗಿದ್ದ ಸುನೇತ್ರಾ 2024ರ ಲೋಕಸಭಾ ಚುನಾವಣೆಯ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿದ ಅವರ ವಿರುದ್ಧವಿದ್ದುದು ಅತ್ತಿಗೆ ಸುಪ್ರಿಯಾ ಸುಳೆ(ಶರದ್‌ರ ಎನ್‌ಸಿಪಿ). ಅವರನ್ನು ಪರಾಜಿತಗೊಳಿಸಿ ಸುನೇತ್ರಾ ಅವರು ರಾಜ್ಯಸಭೆ ಸದಸ್ಯರಾದರು.

ಇದಕ್ಕೂ ಮೊದಲೇ ಅವರ ಹಿರಿಮಗ ಪಾರ್ಥ್‌ ಪವಾರ್‌ ಕೂಡ ರಾಜಕೀಯಕ್ಕೆ ಪಾದಾರ್ಪಣೆ ಮಾಡಿಯಾಗಿತ್ತು ಎಂಬುದು ಗಮನಾರ್ಹ.

==

ಪತಿಯ ಚಿತೆ ಆರುವ ಮೊದಲೇ ಸುನೇತ್ರಾ ಡಿಸಿಎಂ ಆಗಿದ್ದೇಕೆ?

ಇದದರ ಹಿಂದಿವೆ 4 ಕಾರಣ

ಅಜಿತ್ ಆಪ್ತರಿಗೆ ಸರ್ಕಾರದ ಮೇಲೆ ಹಿಡಿತ ಕೈತಪ್ಪುವ ಭೀತಿ ಇತ್ತು

ಹೀಗಾಗಿ ಶರದ್ ಪವಾರ್ ಕೇಳದೇ ಸುನೇತ್ರಾ ಮನವೊಲಿಸಿದ ಪ್ರಫುಲ್‌, ತತ್ಕರೆ

ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್ ತೀರಿ ಹೋದ ಮೂರೇ ದಿನಕ್ಕೆ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದೇಕೆ? ಈ ಬಗ್ಗೆ ಎನ್‌ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನೂ ಸಂಪರ್ಕಿಸಿಲ್ಲ ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದರ ಹಿಂದೆ 4 ಕಾರಣಗಳಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.ಸುನೇತ್ರಾ ಡಿಸಿಎಂ ಆಗುವ ಈ ನಿರ್ಧಾರವನ್ನು ಎನ್ಸಿಪಿ (ಅಜಿತ್ ಬಣ) ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ (ಕಾರ್ಯನಿರ್ವಾಹಕ ಅಧ್ಯಕ್ಷರು) ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

4 ಕಾರಣ:

- ವಿಲೀನವಾದರೆ ಶರದ್ ಪವಾರ್‌ ಬಣದ ಪ್ರಭಾವ ಹೆಚ್ಚಾಗಬಹುದು. ತಮ್ಮ ಪ್ರಭಾವ ಹೊರಟು ಹೋಗಬಹುದು ಎಂಬ ಆತಂಕ ಅಜಿತ್‌ ಬಣದ ನಾಯಕರಲ್ಲಿತ್ತು. ಹೀಗಾಗಿ ಸುನೇತ್ರಾ ಅವರನ್ನು ಡಿಸಿಎಂ ಮಾಡಲು ಅಜಿತ್‌ ಆಪ್ತರು ಮನವೊಲಿಸಿದರು.- ಶರದ್ ಪವಾರ್ ಇತ್ತೀಚೆಗೆ ಯಾವುದೇ ಸಂದರ್ಭದಲ್ಲೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಹೀಗಾಗಿ ಏಕೀಕೃತ ಎನ್‌ಸಿಪಿ, ಸರ್ಕಾರದಿಂದ ಹೊರಬಂದರೆ ತಾವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಜಿತ್‌ ಆಪ್ತರು ಆತಂಕಗೊಂಡಿದ್ದರು- ಗಮನಾರ್ಹವಾಗಿ, ಮಹಾಯುತಿಗೆ ಸೇರುವ ಮೊದಲು, ಅಜಿತ್‌ ಬಣಂದ ನಾಯಕರ ಮೇಲೆ ಅನೇಕರು ಸಿಬಿಐ, ಇಡಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದಂತಹ ಸಂಸ್ಥೆಗಳ ಕೇಸು ಇದ್ದವು. ಸರ್ಕಾರ ಸೇರಿದ ನಂತರ ಇವುಗಳಿಗೆ ಬ್ರೇಕ್‌ ಬಿದ್ದಿದೆ. ಏಕೀಕೃತ ಎನ್‌ಸಿಪಿ ಮಹಾಯುತಿಯಿಂದ ಹೊರಬಂದರೆ, ತಮ್ಮ ಕಾನೂನು ತೊಂದರೆಗಳು ಮತ್ತೆ ಉದ್ಭವಿಸಬಹುದು ಎಂಬ ಭಯ ಅಜಿತ್‌ ಆಪ್ತರಲ್ಲಿದೆ.

- ಸುನೇತ್ರಾ ಡಿಸಿಎಂ ಆದರೆ ಸರ್ಕಾರದ ಮೇಲೆ ಅಜಿತ್‌ ಹೊಂದಿದ್ದ ಹಿಡಿತವೇ ಈಗಲೂ ಮುಂದುವರಿಯುತ್ತದೆ. ತಮ್ಮದೇ ಆದ ಪ್ರಾಬಲ್ಯವನ್ನು ಕಾಯ್ದುಕೊಳ್ಳುವುದು ಸುಲಭವಾಗುತ್ತದೆ ಎಂದು ಅಜಿತ್‌ ಬಣದ ನಾಯಕರ ನಂಬಿಕೆ.

==

ಎನ್‌ಸಿಪಿ ಬಣಗಳ ವಿಲೀನ ಅನುಮಾನ?

ಉಭಯ ಬಣಗಳಿಂದ ಗೊಂದಲದ ನುಡಿ

ವಿಲೀನದ ಮಾತುಕತೆ ನಡೆದಿಲ್ಲ: ತತ್ಕರೆ

ಫೆ.12ಕ್ಕೆ ವಿಲೀನ ಆಗಬೇಕಿತ್ತು: ಶರದ್‌ , ಜಯಂತ್‌

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ದಿವಂಗತ ಡಿಸಿಎಂ ಅಜಿತ್ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಎನ್‌ಸಿಪಿಯ ಅಜಿತ್‌ ಹಾಗೂ ಶರದ್ ಪವಾರ್ ಬಣಗಳ ವಿಲೀನದ ಬಗ್ಗೆ ಅನುಮಾನಗಳು ಸೃಷ್ಟಿ ಆಗಿವೆ. - ವಿಲೀನದ ಮಾತುಕತೆ ನಡೆದಿಲ್ಲ ಎಂದು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಸುನೀಲ್‌ ತತ್ಕರೆ ಹೇಳಿದ್ದರೆ, ಫೆ.12ಕ್ಕೆ ವಿಲೀನ ಆಗಬೇಕಿತ್ತು. ಅಜಿತ್‌ ಉತ್ಸುಕರಾಗಿದ್ದರು ಎಂದು ಎನ್‌ಸಿಪಿ (ಎಸ್ಪಿ) ಅಧ್ಯಕ್ಷ ಶರದ್‌ ಪವಾರ್ ಹಾಗೂ ಆ ಪಕ್ಷದ ನೇತಾರ ಜಯಂತ ಪಾಟೀಲ್‌ ಹೇಳಿದ್ದಾರೆ.ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಸುನೀಲ್ ತತ್ಕರೆ, ‘ಜ.17ರಂದು ಅಜಿತ್ ಪವಾರ್ ಹಾಗೂ ಶರದ್ ಪವಾರ್‌ ನಡುವೆ ಸಭೆ ನಡೆದಿದ್ದು ಹೌದು. ಅದು ಕೇವಲ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕೃಷಿ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ಸಭೆ ಆಗಿತ್ತು. ವಿಲೀನದ ಚರ್ಚೆ ನಡೆದಿರಲಿಲ್ಲ’ ಎಂದರು.

ಆದರೆ ಶರದ್‌ ಪವಾರ್‌ ಮಾತನಾಡಿ, ‘ಎನ್‌ಸಿಪಿ ಬಣಗಳನ್ನು ಒಗ್ಗೂಡಿಸುವುದು ಅಜಿತ್ ಪವಾರ್ ಅವರ ಬಯಕೆಯಾಗಿತ್ತು ಮತ್ತು ಅವರು ಅದರ ಬಗ್ಗೆ ಆಶಾವಾದಿಗಳಾಗಿದ್ದರು. ಫೆ.12ರಂದು ವಿಲೀನ ಘೋಷಿಸುವವರಿದ್ದರು’ ಎಂದರು.ಇನ್ನು ಶರದ್ ಬಣದ ಎನ್‌ಸಿಪಿ ನಾಯಕ ಜಯಂತ ಪಾಟೀಲ್‌ ಮಾತನಾಡಿ, ‘ನನ್ನ ಮನೆಗೆ ಅಜಿತ್ ಬಂದು 8-10 ಬಾರಿ ಊಟ ಮಾಡಿದ್ದರು. ಈ ವೇಳೆ ವಿಲೀನದ ಬಗ್ಗೆ ಉತ್ಸುಕತೆ ತೋರಿದ್ದರು. ಶರದ್ ಪವಾರ್‌ ಬಗ್ಗೆ ಅಪಾರ ಗೌರವ ಹೊಂದಿದ್ದರು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮಹಿಳೆಗೆ ಕಿರುಕುಳ : ಇಂದೋರ್‌ ಡಾನ್ಸಿಂಗ್‌ ಕಾಪ್‌ಗೆ ಹಿಂಬಡ್ತಿ!
ಭಾರತದ ತೈಲೋದ್ಯಮ ಸಾಹಸ ಜಗತ್ತಿನೆದುರು ಅನಾವರಣ