ನವದಹಲಿ: ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಅಧೀನದಲ್ಲಿ ಸುದ್ದಿಗಳ ‘ಸತ್ಯ ಪರಿಶೀಲನಾ ಘಟಕ’ವನ್ನು (ಫ್ಯಾಕ್ಟ್ ಚೆಕ್ ಯುನಿಟ್) ಸ್ಥಾಪಿಸುವ ಕೇಂದ್ರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ಅಲ್ಲದೆ, ಬಾಂಬೆ ಹೈಕೋರ್ಟ್‌ನಲ್ಲಿ ಈಗಾಗಲೇ ಇದರ ವಿಚಾರಣೆ ನಡೆಯುತ್ತಿದ್ದು, ಅಲ್ಲಿ ಪ್ರಕರಣದ ಇತ್ಯರ್ಥ ಆಗುವವರೆಗೂ ತಡೆ ಜಾರಿಯಲ್ಲಿರುತ್ತದೆ ಎಂದಿದೆ.
ಸರ್ಕಾರದ ಬಗ್ಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಸತ್ಯ-ಪರಿಶೀಲನಾ ಘಟಕವು ಹೊಂದಿರುತ್ತದೆ.
ಆದರೆ ಘಟಕವು ‘ಗಂಭೀರವಾದ ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುತ್ತದೆ. ಹಾಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಭಂಗ ತರುವ ಪ್ರಶ್ನೆಗಳನ್ನೂ ಎತ್ತುತ್ತದೆ.
ಹೀಗಾಗಿ ಸರ್ಕಾರ ಹೊರಡಿಸಿದ ಮಾರ್ಚ್ 20, 2024ರ ಅಧಿಸೂಚನೆಯನ್ನು ತಡೆಹಿಡಿಯುವ ಅಗತ್ಯವಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ನ್ಯಾ। ಮನೋಜ್ ಮಿಶ್ರಾ ಅವರ ಪೀಠ ಹೇಳಿದೆ.
ಸತ್ಯ ಪರಿಶೀಲನಾ ಘಟಕಕ್ಕೆ ತಡೆ ಕೋರಿ ವಿದೂಷಕ ಕುನಾಲ್ ಕಾಮ್ರಾ ಹಾಗೂ ಭಾರತೀಯ ಸಂಪಾದಕರ ಒಕ್ಕೂಟ ಅರ್ಜಿ ಸಲ್ಲಿಸಿದ್ದವು.