2 ವರ್ಷದಿಂದ ನಲುಗಿರುವ ಜನಾಂಗೀಯ ಸಂಘರ್ಷಪೀಡಿತ ಮಣಿಪುರದ ಚುರಾಚಂದ್‌ಪುರ ಜಿಲ್ಲೆಗೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ತಂಡ ಶನಿವಾರ ಭೇಟಿ ನೀಡಿ, ಹಿಂಸಾಚಾರದಿಂದ ನಿರಾಶ್ರಿತರಾದ ಜನರ ಜತೆ ಸಂವಾದ ನಡೆಸಿದೆ.
ಇಂಫಾಲ್: 2 ವರ್ಷದಿಂದ ನಲುಗಿರುವ ಜನಾಂಗೀಯ ಸಂಘರ್ಷಪೀಡಿತ ಮಣಿಪುರದ ಚುರಾಚಂದ್‌ಪುರ ಜಿಲ್ಲೆಗೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ತಂಡ ಶನಿವಾರ ಭೇಟಿ ನೀಡಿ, ಹಿಂಸಾಚಾರದಿಂದ ನಿರಾಶ್ರಿತರಾದ ಜನರ ಜತೆ ಸಂವಾದ ನಡೆಸಿದೆ. ಈ ಮೂಲಕ ಹಿಂಸೆಯಿಂದ ಎದೆಗುಂದಿರುವ ಜನರ ವಿಶ್ವಾಸ ವರ್ಧನೆಗೆ ಯತ್ನಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಗವಾಯಿ, ವಿಕ್ರಮ್ ನಾಥ್, ಎಂ.ಎಂ. ಸುಂದರೇಶ್, ಕೆ.ವಿ. ವಿಶ್ವನಾಥನ್ ಮತ್ತು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ. ಕೃಷ್ಣಕುಮಾರ್ ಹಾಗೂ ನ್ಯಾ. ಗೋಲ್ಮೆಯ್ ಗೈಫುಲ್ಶಿಲು ಅವರು ಕಾನೂನು ಸೇವಾ ಶಿಬಿರಗಳು, ಕಾನೂನು ನೆರವು ಘಟಕಗಳು ಮತ್ತು ತಾತ್ಕಾಲಿಕ ವೈದ್ಯಕೀಯ ಸೌಲಭ್ಯಗಳನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸಿದರು. ಬಳಿಕ ಸದ್ಭಾವನಾ ಮಂಟಪ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳೊಂದಿಗೆ ಸಂವಹನ ನಡೆಸಿ, ಪರಿಸ್ಥಿತಿ ಕುರಿತು ಅವಲೋಕಿಸಿದರು.
ಮೇ 2023ರಿಂದ ಇಂಫಾಲ್ ಕಣಿವೆಯ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಈವರೆಗೂ 250ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
ರೈತರಿಗೆ ಶುಭ ಸುದ್ದಿ: ಈರುಳ್ಳಿ ಮೇಲಿನ ಶೇ.20 ರಫ್ತು ಸುಂಕ ರದ್ದು
ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗುತ್ತಿರುವ ಕಾರಣ ರೈತರಿಗೆ ಆಗುತ್ತಿರುವ ನಷ್ಟ ತಗ್ಗಿಸಲು ಕೇಂದ್ರ ಸರ್ಕಾರವು ಅದರ ರಫ್ತಿನ ಮೇಲೆ ಹೇರಿದ್ದ ಶೇ.20ರಷ್ಟು ತೆರಿಗೆಯನ್ನು ರದ್ದುಗೊಳಿಸಿದೆ. ಈ ಆದೇಶ ಏ.1ರಿಂದ ಜಾರಿಗೆ ಬರಲಿದೆ. ಈ ಮೂಲಕ ಬೆಲೆ ಏರಿಕೆಗೆ ಅನುವು ಮಾಡಿಕೊಂಡಿದೆ.ಭಾರತದಲ್ಲಿ ಪ್ರಸಕ್ತ ಸಾಲಿನಲ್ಲಿ 24.27 ಮೆಟ್ರಿಕ್ ಟನ್ ಈರುಳ್ಳಿ ಬೆಳೆ ಬರಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಇದರ ಜೊತೆಗೆ ತೆರಿಗೆಯಿಂದಾಗಿ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಸಂಗ್ರಹವಾಗಿದ್ದು, ಬೆಲೆ ಕ್ವಿಂಟಲ್‌ಗೆ 2,270 ರು.ನಿಂದ 1,420 ರು.ಗೆ ಕುಸಿದಿದೆ. ಹೀಗಾಗಿ ರಫ್ತು ಮೇಲಿನ ತೆರಿಗೆಯನ್ನು ಹಿಂಪಡೆಯಬೇಕು ಎಂದು ದೇಶದ ದೊಡ್ಡ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರು ಮತ್ತು ಮಾರಾಟಗಾರರು ಆಗ್ರಹಿಸಿದ್ದರು. ಇವುಗಳನ್ನು ಪರಿಗಣಿಸಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆದೇಶ ಹೊರಡಿಸಿದೆ.
ಚುನಾವಣಾ ಅಕ್ರಮ ತಡೆಗೆ ದೇಶಾದ್ಯಂತ ಆಯೋಗ ಸಭೆ
ನವದೆಹಲಿ: ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಬೂತ್ ಮಟ್ಟದಲ್ಲಿ ಕೇಳಿಬಂದಿರುವ ದೂರುಗಳನ್ನು ಪರಿಹರಿಸಲು ಸುಮಾರು 4 ಸಾವಿರಕ್ಕಿಂತಲೂ ಹೆಚ್ಚಿನ ಚುನಾವಣಾ ನೋಂದಣಿ ಅಧಿಕಾರಿಗಳು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ವ ಪಕ್ಷ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ತಿಳಿಸಿದೆ.
ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ದಾಖಲೆಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪ ತೃಣಮೂಲ ಕಾಂಗ್ರೆಸ್ ಸೇರಿ ಕೆಲ ರಾಜಕೀಯ ಪಕ್ಷಗಳಿಂದ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಚುನಾವಣಾ ಆಯೋಗವು ಈಗ ವೋಟರ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವ ಮತ್ತು ಜನನ ಮತ್ತು ಮರಣ ನೋಂದಣಿ ಪ್ರಾಧಿಕಾರಗಳನ್ನು ಸೇರಿಸಿಕೊಂಡು ನಕಲಿ ವೋಟರ್ ಕಾರ್ಡ್‌ಗಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. 4 ಸಾವಿರಕ್ಕೂ ಹೆಚ್ಚು ಚುನಾವಣಾ ನೋಂದಣಿ ಅಧಿಕಾರಿಗಳು ಮಾತ್ರವಲ್ಲದೆ, 788 ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು 36 ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಕೂಡ ಸಭೆ ನಡೆಸಿ ಕಾನೂನು ವ್ಯಾಪ್ತಿಯೊಳಗೆ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಿದ್ದಾರೆ. ಈ ಸಭೆಗಳು ಮಾ.31ರೊಳಗೆ ಪೂರ್ಣಗೊಳ್ಳಲಿವೆ.
ದೇಶಭ್ರಷ್ಟ ಚೋಕ್ಸಿ ಬೆಲ್ಜಿಯಂನಲ್ಲಿ ಪ್ರತ್ಯಕ್ಷ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) 13,850 ಕೋಟಿ ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿ ಆಗಿದ್ದ ಉದ್ಯಮಿ ಮೇಹುಲ್ ಚೋಕ್ಸಿ ಬೆಲ್ಜಿಯಂನ ಆಂಟ್‌ವೆರ್ಪ್‌ನಲ್ಲಿ ಪತ್ನಿ ಪ್ರೀತಿ ಚೋಕ್ಸಿ ಜತೆ ವಾಸಿಸುತ್ತಿದ್ದಾನೆ ಎಂದು ಗೊತ್ತಾಗಿದೆ. ಹೀಗಾಗಿ ಅಲ್ಲಿಂದ ಈತನನ್ಉ ಭಾರತಕ್ಕೆ ಕರೆತರಲು ಭಾರತೀಯ ಅಧಿಕಾರಿಗಳು ಬ್ರೆಜಿಲ್ ಸಹವರ್ತಿಗಳನ್ನು ಸಂಪರ್ಕಿಸಿದ್ದಾರೆ. ಈ ಮುನ್ನ ಆತ ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದ. ಈಗ ಚಿಕಿತ್ಸೆಗಾಗಿ ಬೆಲ್ಜಿಯಂಗೆ ಆಗಮಿಸಿದ್ದಾನೆ ಎನ್ನಲಾಗಿದೆ.
ಪತ್ನಿಯ ಶೀಲ ಶಂಕಿಸಿ 3ರ ಮಗನ ಕತ್ತು ಸೀಳಿದ ಟೆಕ್ಕಿ
ಪುಣೆ: ಟೆಕ್ಕಿಯೊಬ್ಬ ತನ್ನ ಪತ್ನಿ ಅನ್ಯ ವ್ಯಕ್ತಿ ಜತೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ಕೊಂದು, ನಂತರ ದೇಹವನ್ನು ಕಾಡಿನಲ್ಲಿ ಎಸೆದ ಅಮಾನವೀಯ ಘಟನೆ ಇಲ್ಲಿನ ಚಂದನ್ ನಗರದಲ್ಲಿ ನಡೆದಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರಾದ ಮಾಧವ್ ಟಿಕೆಟೀ ಮತ್ತು ಸ್ವರೂಪಾ ನಡುವೆ ಗುರುವಾರ ವಾಗ್ವಾದ ನಡೆದಿತ್ತು. ಸ್ವರೂಪಾ ದಾಂಪತ್ಯ ದ್ರೋಹವೆಸಗುತ್ತಿದ್ದಾಳೆ ಎಂದು ಬಗೆದ ಮಾಧವ್, 3 ವರ್ಷದ ಮಗ ಹಿಮ್ಮತ್‌ನೊಂದಿಗೆ ಮನೆ ಬಿಟ್ಟು ತೆರಳಿದ್ದ.ರಾತ್ರಿಯಾದರೂ ಅವರಿಬ್ಬರು ಮನೆಗೆ ಮರಳದಾಗ ಸ್ವರೂಪಾ ಪೊಲೀಸರ ನೆರವು ಯಾಚಿಸಿದ್ದಳು. ಸಿಸಿಟೀವಿ ಪರಿಶೀಲಿಸಿದಾಗ ಮಧ್ಯಾಹ್ನ 2.30ರ ಸುಮಾರಿಗೆ ಮಗನೊಂದಿಗಿದ್ದ ಮಾಧವ್, ಸಂಜೆ 5ಕ್ಕೆ ಒಬ್ಬನೇ ಇರುವುದು ಕಂಡುಬಂದಿದೆ. ಮೊಬೈಲ್ ಟ್ರೇಸ್ ಮಾಡಿದಾಗ ಆತ ಲಾಡ್ಜ್ ಒಂದರಲ್ಲಿ ಪಾನಮತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ಮಾಧವ್ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಶೋಧ ಕೈಗೊಂಡ ಪೊಲೀಸರಿಗೆ ಸಮೀಪದ ಕಾಡೊಂದರಲ್ಲಿ ಮಗುವಿನ ದೇಹ ದೊರಕಿದೆ. ‘ಮಾಧವ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.